ADVERTISEMENT

ಮಹಾರಾಷ್ಟ್ರ | ಟ್ರಕ್‌ಗೆ ಬಸ್ ಡಿಕ್ಕಿ; ಬೆಂಕಿ ಹೊತ್ತಿ 12 ಸಾವು, 43 ಮಂದಿಗೆ ಗಾಯ

ಪಿಟಿಐ
Published 8 ಅಕ್ಟೋಬರ್ 2022, 13:37 IST
Last Updated 8 ಅಕ್ಟೋಬರ್ 2022, 13:37 IST
ಹೊತ್ತಿ ಉರಿಯುತ್ತಿರುವ ಬಸ್‌ –ಪಿಟಿಐ ಚಿತ್ರ 
ಹೊತ್ತಿ ಉರಿಯುತ್ತಿರುವ ಬಸ್‌ –ಪಿಟಿಐ ಚಿತ್ರ    

ನಾಸಿಕ್‌: ಮುಂಬೈಗೆ ಹೊರಟಿದ್ದ ಖಾಸಗಿ ಬಸ್‌ವೊಂದು ಸರಕು ಸಾಗಾಣೆಯ ಟ್ರಕ್‌ಗೆ ಡಿಕ್ಕಿಹೊಡೆದು, ಬಳಿಕ ಹೊತ್ತಿ ಉರಿದಿದೆ. ಇದರಿಂದಾಗಿ ಬಸ್‌ನಲ್ಲಿದ್ದ ಎರಡು ವರ್ಷದ ಮಗು ಸೇರಿ ಒಟ್ಟು 12 ಮಂದಿ ಪ್ರಯಾಣಿಕರು ಮೃತಪಟ್ಟಿದ್ದಾರೆ. 43 ಜನ ಗಾಯಗೊಂಡಿದ್ದಾರೆ.

‘ಪೂರ್ವ ಮಹಾರಾಷ್ಟ್ರದ ಯವತ್‌ಮಾಲ್‌ನಿಂದ ಹೊರಟಿದ್ದ ಸ್ಲೀಪರ್‌ ಬಸ್‌, ನಾಸಿಕ್‌–ಔರಂಗಾಬಾದ್‌ ಹೆದ್ದಾರಿ ಮೂಲಕ ಮುಂಬೈನತ್ತ ತೆರಳುತ್ತಿತ್ತು. ಅದು ನಂದುರ್‌ ನಾಕಾದ ಮಿರ್ಚಿ ಹೋಟೆಲ್‌ ಬಳಿ ಶನಿವಾರ ಬೆಳಿಗ್ಗೆ 5.15ರ ಸುಮಾರಿಗೆ ಟ್ರಕ್‌ಗೆ ಡಿಕ್ಕಿ ಹೊಡೆದಿತ್ತು. ಬಳಿಕ ಬಸ್‌ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ನೋಡು ನೋಡುತ್ತಲೇ ಅದು ಹೊತ್ತಿ ಉರಿದಿತ್ತು’ ಎಂದು ಪೊಲೀಸರು ತಿಳಿಸಿದ್ದಾರೆ.

‘ಗಾಯಗೊಂಡವರ ಪೈಕಿ ಬಹುಪಾಲು ಮಂದಿಯನ್ನು ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆಲವರಿಗೆ ನಾಸಿಕ್‌ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬೆಂಕಿ ಹೊತ್ತಿಕೊಳ್ಳುವ ಮುನ್ನ ಬಸ್‌, ಕಾರ್ಗೊ ವಾಹನವೊಂದಕ್ಕೂ ಡಿಕ್ಕಿ ಹೊಡೆದಿತ್ತು’ ಎಂದು ಪೊಲೀಸ್‌ ಕಮಿಷನರ್‌ ಜಯಂತ್‌ ನಾಯಕ್‌ನವಾರೆ ಹೇಳಿದ್ದಾರೆ.

ADVERTISEMENT

‘ವಿಷಯ ಗೊತ್ತಾದ ಬಳಿಕ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ತೆರಳಿ ರಕ್ಷಣಾ ಕಾರ್ಯ ಕೈಗೊಂಡಿದ್ದರು. ಬೆಂಕಿಯನ್ನೂ ನಂದಿಸಿದ್ದರು. ಘಟನೆಯಲ್ಲಿ ಬಸ್‌, ಸಂಪೂರ್ಣವಾಗಿ ಸುಟ್ಟುಹೋಗಿದೆ. ಸರಕು ಸಾಗಾಣೆಯ ಟ್ರಕ್‌ ಪುಣೆಯತ್ತ ಹೊರಟಿತ್ತು ಎಂಬ ಮಾಹಿತಿ ನಮಗೆ ದೊರೆತಿದೆ’ ಎಂದಿದ್ದಾರೆ.

ಬೆಂಕಿಯು ತೀವ್ರ ಸ್ವರೂಪದ್ದಾಗಿತ್ತು. ಹೀಗಾಗಿ ಬಸ್‌ನಲ್ಲಿದ್ದವರನ್ನು ರಕ್ಷಿಸಲು ಆಗಲಿಲ್ಲ. ಬೆಂಕಿಗೆ ಸಿಲುಕಿ ಪ್ರಯಾಣಿಕರು ಪ್ರಾಣ ಬಿಡುತ್ತಿದ್ದರೂ ಅಸಹಾಯಕತೆಯಿಂದ ಅದನ್ನು ನೋಡುತ್ತಾ ನಿಲ್ಲಬೇಕಾಯಿತು ಎಂದು ಪ್ರತ್ಯಕ್ಷದರ್ಶಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

ಸ್ಥಳಕ್ಕೆ ಸಿ.ಎಂ ಭೇಟಿ: ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ಅವರು ಶನಿವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಸಂಬಂಧ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ.ಜಿಲ್ಲಾ ಆಸ್ಪತ್ರೆಗೂ ಅವರು ಭೇಟಿ ನೀಡಿಗಾಯಗೊಂಡವರ ಯೋಗ ಕ್ಷೇಮ ವಿಚಾರಿಸಿದ್ದಾರೆ. ವೈದ್ಯರೊಂದಿಗೆ ಸಮಾಲೋಚನೆಯನ್ನೂ ನಡೆಸಿದ್ದಾರೆ.

ಕೇಂದ್ರದಿಂದ ₹2 ಲಕ್ಷ, ರಾಜ್ಯ ಸರ್ಕಾರದಿಂದ ₹5 ಲಕ್ಷ ಪರಿಹಾರ
ಪ್ರಧಾನಿ ನರೇಂದ್ರ ಮೋದಿ ಅವರು ಘಟನೆಯಲ್ಲಿ ಮೃತಪಟ್ಟವರಿಗೆ ಸಂತಾಪ ಸೂಚಿಸಿದ್ದು, ಅವರ ಕುಟುಂಬಗಳಿಗೆ ಪ್ರಧಾನ ಮಂತ್ರಿಯವರ ರಾಷ್ಟ್ರೀಯ ಪರಿಹಾರ ನಿಧಿಯಿಂದ ತಲಾ ₹2 ಲಕ್ಷ ಪರಿಹಾರ ಹಾಗೂ ಗಾಯಗೊಂಡವರ ಚಿಕಿತ್ಸೆಗಾಗಿ ತಲಾ ₹50 ಸಾವಿರ ಒದಗಿಸುವುದಾಗಿ ಘೋಷಿಸಿದ್ದಾರೆ.

‘ತಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಂಡವರಿಗೆ ಭಗವಂತ ದುಃಖ ಸಹಿಸಿಕೊಳ್ಳುವ ಶಕ್ತಿ ನೀಡಲಿ’ ಎಂದು ಟ್ವೀಟ್‌ ಮಾಡಿದ್ದಾರೆ.

ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ಕೂಡ ಪರಿಹಾರ ಘೋಷಿಸಿದ್ದಾರೆ.ಮೃತರ ಕುಟುಂಬಗಳಿಗೆ ತಲಾ ₹5 ಲಕ್ಷ ನೀಡುವುದಾಗಿ ಹೇಳಿರುವ ಅವರು ಗಾಯಗೊಂಡವರ ಸಂಪೂರ್ಣ ವೈದ್ಯಕೀಯ ವೆಚ್ಚವನ್ನು ಸರ್ಕಾರದ ವತಿಯಿಂದಲೇ ಭರಿಸುವುದಾಗಿ ತಿಳಿಸಿದ್ದಾರೆ.

*
ನಾಸಿಕ್‌ ಬಸ್‌ ದುರಂತದ ವಿಚಾರ ತಿಳಿದು ಮನಸ್ಸಿಗೆ ತುಂಬಾ ನೋವಾಗಿದೆ. ಗಾಯಗೊಂಡವರು ಬೇಗ ಗುಣಮುಖರಾಗಲಿ. ಅವರಿಗೆ ಸ್ಥಳೀಯ ಆಡಳಿತದವರು ಎಲ್ಲಾ ಬಗೆಯ ನೆರವನ್ನೂ ಒದಗಿಸಲಿದ್ದಾರೆ
–ನರೇಂದ್ರ ಮೋದಿ, ಪ್ರಧಾನಿ

*
ಘಟನೆ ಕುರಿತು ಸಮಗ್ರ ತನಿಖೆ ಕೈಗೊಳ್ಳುವಂತೆ ಸೂಚಿಸಲಾಗಿದೆ. ತನಿಖಾ ವರದಿಯ ಆಧಾರದಲ್ಲಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು
–ಏಕನಾಥ ಶಿಂದೆ, ಮಹಾರಾಷ್ಟ್ರ ಮುಖ್ಯಮಂತ್ರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.