ADVERTISEMENT

ಬಾಳ ಠಾಕ್ರೆ ಸ್ಮಾರಕ ನಿರ್ಮಾಣಕ್ಕಾಗಿ 1,000 ಮರಗಳ ನಾಶಕ್ಕೆ ಶಿವಸೇನಾ ಚಿಂತನೆ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2019, 16:08 IST
Last Updated 8 ಡಿಸೆಂಬರ್ 2019, 16:08 IST
ಉದ್ಧವ್ ಠಾಕ್ರೆ
ಉದ್ಧವ್ ಠಾಕ್ರೆ    

ಮುಂಬೈ : ಮುಂಬೈ ಮೆಟ್ರೊ-3ನೇ ಹಂತದ ಕಾರ್ ಶೆಡ್ ನಿರ್ಮಾಣ ಕಾಮಗಾರಿಗಾಗಿ ಆರೆ ಕಾಲೊನಿಯಲ್ಲಿರುವ ಮರಗಳನ್ನು ಕತ್ತರಿಸುವುದನ್ನು ವಿರೋಧಿಸಿದ್ದ ಶಿವಸೇನಾ ಈಗ ಬಾಳ ಠಾಕ್ರೆ ಸ್ಮಾರಕ ನಿರ್ಮಾಣಕ್ಕಾಗಿ ಔರಂಗಬಾದ್‌ನಲ್ಲಿ ಅರಣ್ಯನಾಶ ಮಾಡಲು ಮುಂದಾಗಿದೆ.

ಮಹಾರಾಷ್ಟ್ರದಲ್ಲಿ ಉದ್ಧವ್ ಠಾಕ್ರೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದಾಗ ಆರೆ ಅರಣ್ಯ ಪ್ರದೇಶದಲ್ಲಿ ಮೆಟ್ರೊ ಕಾರ್ ಶೆಡ್ ನಿರ್ಮಾಣಕ್ಕೆ ತಡೆಯೊಡ್ಡಿ ಆದೇಶ ಹೊರಡಿಸಿದ್ದರು. ಮೆಟ್ರೊ ಕಾರ್ ಶೆಡ್ ನಿರ್ಮಾಣಕ್ಕಾಗಿ ಇಲ್ಲಿ 2,000 ಕ್ಕಿಂತಲೂ ಹೆಚ್ಚು ಮರಗಳಿಗೆ ಕತ್ತರಿ ಹಾಕಲಾಗಿತ್ತು.

ಆರೆ ಬಗ್ಗೆ ಉದ್ಧವ್ ಠಾಕ್ರೆ ಕೈಗೊಂಡ ನಿರ್ಧಾರಕ್ಕೆ ಜನರು ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದಂತೆ ಇತ್ತ ಔರಂಗಬಾದ್‌ನಲ್ಲಿ ಸುಮಾರು 1,000 ಮರಗಳಿಗೆ ಕತ್ತರಿ ಹಾಕಲು ಶಿವಸೇನಾ ನಿರ್ಧರಿಸಿದೆ. ಶಿವಸೇನಾ ಸಂಸ್ಥಾಪಕ ಬಾಳ್ ಠಾಕ್ರೆ ಅವರ ಸ್ಮಾರಕನಿರ್ಮಾಣಕ್ಕಾಗಿ ಇಲ್ಲಿ ಮರ ಕಡಿಯಲಾಗುತ್ತಿದೆ.

ADVERTISEMENT

ಶಿವಸೇನಾ ಆಡಳಿತದಲ್ಲಿರುವ ಔರಂಗಬಾದ್ ಮುನ್ಸಿಪಲ್ ಕಾರ್ಪೊರೇಷನ್ (ಎಎಂಸಿ), ಬಾಳ್ ಠಾಕ್ರೆ ಸ್ಮಾರಕಕ್ಕಾಗಿ ಪ್ರಿಯದರ್ಶಿನಿ ಪಾರ್ಕ್‌ನಲ್ಲಿ 17 ಎಕರೆ ಜಾಗವನ್ನು ಗುರುತು ಮಾಡಿದೆ.
ವನ ಸಂಪತ್ತಿನಿಂದ ಕೂಡಿದ ಪ್ರಿಯದರ್ಶಿನಿ ಪಾರ್ಕ್ ಔರಂಗಬಾದ್‌ನ ಮಧ್ಯಭಾಗದಲ್ಲಿದೆ. ಇಲ್ಲಿ 70 ವಿಧದ ಹಕ್ಕಿಗಳು ಮತ್ತು 40 ವಿಧದ ಚಿಟ್ಟೆ ಮತ್ತು ಸರೀಸೃಪಗಳಿವೆ.

ಮೂಲಗಳ ಪ್ರಕಾರ ನಿರ್ಮಾಣಕ್ಕೆ ಸಿದ್ಧವಾಗಿರುವ ಸ್ಮಾರಕದಲ್ಲಿ ಆಂಫಿ ಥಿಯೇಟರ್, ಫುಡ್ ಕೋರ್ಟ್ ಮತ್ತು ಬಾಳ್ ಠಾಕ್ರೆ ಜೀವನಕ್ಕೆ ಸಂಬಂಧಿಸಿದ ವಸ್ತುಗಳನ್ನು ಹೊಂದಿರುವ ಮ್ಯೂಸಿಯಂ ಇರಲಿದೆ. 3 ಎಕರೆಯಲ್ಲಿ ನಿರ್ಮಾಣವಾಗುವ ಈ ಮ್ಯೂಸಿಯಂಗೆ ₹61 ಕೋಟಿ ಖರ್ಚಾಗಲಿದೆ ಎಂದು ದಿ ಪ್ರಿಂಟ್ ವರದಿ ಮಾಡಿದೆ.

ವಿವಿಧ ಹಂತಗಳಲ್ಲಿ ಮರಗಳನ್ನು ಕತ್ತರಿಸಲು ಎಎಂಸಿ ಚಿಂತಿಸಿದ್ದು, ಮೊದಲ ಹಂತದಲ್ಲಿ 330 ಮರಗಳನ್ನು ಕತ್ತರಿಸುವ ಬಗ್ಗೆ ಪತ್ರಿಕೆಗಳಲ್ಲಿಈಗಾಗಲೇ ಜಾಹೀರಾತು ನೀಡಿದೆ.

ಆರೆ ಕಾಲೊನಿಯಲ್ಲಿ ಮರಗಳ ಹನನ ವಿರೋಧಿಸಿ ದನಿಯೆತ್ತಿದ ಹಲವಾರು ಶಿವಸೇನಾ ನಾಯಕರಲ್ಲಿ ಔರಂಗಬಾದ್ ಮರಗಳ ಹನನ ಬಗ್ಗೆ ದಿ ಪ್ರಿಂಟ್ ಅಭಿಪ್ರಾಯ ಕೇಳಿದಾಗ ಯಾರೊಬ್ಬರೂ ಉತ್ತರಿಸಲು ಸಿದ್ಧರಾಗಿಲ್ಲ.

ಔರಂಗಬಾದ್‌ನಲ್ಲಿ ಮರಗಳನ್ನು ಕತ್ತರಿಸುವುದನ್ನು ವಿರೋಧಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದು ಬಾಂಬೆ ಹೈಕೋರ್ಟ್‌ನ ಔರಂಗಬಾದ್ ನ್ಯಾಯಪೀಠದ ಮುಂದಿದೆ.

ಸನ್ನಿ ಖಿನ್ವಸರಾ ಎಂಬ ವಕೀಲರು ಈ ಅರ್ಜಿ ಸಲ್ಲಿಸಿದ್ದು, ಮಹಾರಾಷ್ಟ್ರ ಸರ್ಕಾರದ ಯೋಜನಾ ಸಂಸ್ಥೆಯಾದ ಸಿಟಿ ಆ್ಯಂಡ್ ಇಂಡಸ್ಟ್ರಿಯಲ್ ಡೆವಲಪ್‌ಮೆಂಟ್ ಕಾರ್ಪೊರೇಷನ್ (ಸಿಐಡಿಸಿಒ), ಸ್ಥಳೀಯ ಸಂಸ್ಥೆಗೆ ಭೋಗ್ಯಕ್ಕಾಗಿ ಕೊಟ್ಟ ಜಮೀನು ಇದಾಗಿದೆ. ಭೋಗ್ಯಕ್ಕಾಗಿ ಕೊಟ್ಟಈ ಜಮೀನಿನಲ್ಲಿರುವ ಪ್ರಿಯದರ್ಶಿನಿ ಪಾರ್ಕ್‌ನ್ನು ಉದ್ಯಾನವನ್ನಾಗಿಯೇ ಕಾಪಾಡಬೇಕು ಎಂದು ಭೋಗ್ಯದ ಷರತ್ತಿನಲ್ಲಿ ಹೇಳಲಾಗಿದೆ.

1980ರಲ್ಲಿ ಬರಡು ಭೂಮಿಯಾಗಿದ್ದ ಇದನ್ನು ಸಿಐಡಿಸಿಒ ಮಹಾತ್ಮ ಗಾಂಧಿ ಮಿಷನ್ ಎಂಬ ಎನ್‌ಜಿಒಗೆ ನೀಡಿತ್ತು. ನಂತರದ ವರ್ಷಗಳಲ್ಲಿ ಈಎನ್‌ಜಿಒ 10,000 ಗಿಡಗಳನ್ನು ಇಲ್ಲಿ ನೆಟ್ಟು ಬೆಳೆಸಿ ಕಾಡು ನಿರ್ಮಿಸಿತ್ತು.

ಈ ಬಗ್ಗೆ ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಔರಂಗಬಾದ್ ಮೇಯರ್ ನಂದಕುಮಾರ್ ಘೋಡೆಲೆ, ಸ್ಥಳೀಯ ಸಂಸ್ಥೆ ಈ ಉದ್ಯಾನವನ್ನು ಕಾಪಾಡಿಕೊಳ್ಳಬೇಕೇ ವಿನಾ ಒಂದೇ ಒಂದು ಮರವನ್ನು ಕಡಿಯುವಂತಿಲ್ಲ ಎಂದು ಹೇಳಿದೆ.

ಅದೇ ವೇಳೆ ಸ್ಮಾರಕಕ್ಕಾಗಿ ಒಂದೇ ಒಂದು ಮರ ಕೂಡಾ ಕತ್ತರಿಸುವುದಿಲ್ಲ ಎಂದುಶಿವ ಸೇನಾ ನಾಯಕಿ ಪ್ರಿಯಾಂಕಾ ಚತುರ್ವೇದಿ ಟ್ವೀಟಿಸಿದ್ದಾರೆ.

ಆದಾಗ್ಯೂ, ಮರಗಳನ್ನು ಕತ್ತರಿಸದೆ ಇಲ್ಲಿ ಸ್ಮಾರಕ ನಿರ್ಮಾಣ ಸಾಧ್ಯವಿಲ್ಲ ಎಂದು ಮೂಲಗಳು ಹೇಳಿವೆ.

ಇದು ಶಿನಸೇನಾದದ್ವಂದ್ವ ನೀತಿಯನ್ನು ತೋರಿಸುತ್ತದೆ ಎಂದು ಮುಂಬೈ ಮೂಲದ ಪರಿಸರವಾದಿ ಕೇದಾರ್ ಗೋರ್ ಹೇಳಿದ್ದಾರೆ.

ಈ ಬಗ್ಗೆ ಟ್ವೀಟಿಸಿದ ಮಹಾರಾಷ್ಟ್ರದ ಮಾಜಿ ಸಿಎಂ ದೇವೇಂದ್ರಫಡಣವೀಸ್ ಪತ್ನಿ ಅಮೃತಾ ಫಡಣವೀಸ್ ಬೂಟಾಟಿಕೆ ಒಂದು ರೋಗ. ಶಿವಸೇನಾ ಬೇಗ ಗುಣಮುಖರಾಗಿ. ನಿಮಗೆ ಅನುಕೂಲವಾಗುವಂತೆ ಮರ ಕತ್ತರಿಸುವುದು ಅಥವಾ ಕಮಿಷನ್ ಸಿಗುವುದಾದರೆ ಮರ ಕತ್ತರಿಸಲು ಅನುಮತಿಸುವುದು ಮಹಾ ಪಾಪ ಎಂದು ಟ್ವೀಟಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.