ADVERTISEMENT

ಪ್ರೀತಿ ಹುಡುಕಿ ಪಾಕ್‌ಗೆ ಹೊರಟ ಮಹಾರಾಷ್ಟ್ರದ ಯುವಕ; ರಣ್‌ನಲ್ಲಿ ತಡೆದ ಬಿಎಸ್‌ಎಫ್

ಪಿಟಿಐ
Published 17 ಜುಲೈ 2020, 16:24 IST
Last Updated 17 ಜುಲೈ 2020, 16:24 IST
ಗುಜರಾತ್‌ ಕಚ್‌ನ ರಣ್‌ ಪ್ರದೇಶದಲ್ಲಿ ಬಿಎಸ್‌ಎಫ್‌ ಸಿಬ್ಬಂದಿ–ಸಂಗ್ರಹ ಚಿತ್ರ
ಗುಜರಾತ್‌ ಕಚ್‌ನ ರಣ್‌ ಪ್ರದೇಶದಲ್ಲಿ ಬಿಎಸ್‌ಎಫ್‌ ಸಿಬ್ಬಂದಿ–ಸಂಗ್ರಹ ಚಿತ್ರ   

ಭುಜ್‌/ಮುಂಬೈ: ಪ್ರೀತಿಗೆ ದೇಶ, ಭಾಷೆ, ಧರ್ಮ, ಜಾತಿಗಳ ಹಂಗಿಲ್ಲ....ಹಾಗಂತ ಏಕಾಏಕೀ ಭಾರತದ ಗಡಿ ದಾಟಿ ಪಾಕಿಸ್ತಾನದಲ್ಲಿರುವ ಪ್ರಿಯತಮೆಯನ್ನು ಕಾಣುವ ಪ್ರಯತ್ನ ನಡೆಸಿದರೇ?

–ಇಂಥದ್ದೇ ಸಾಹಸ ಮಾಡಲು ಹೋದ ಮಹಾರಾಷ್ಟ್ರದ ಎಂಜಿನಿಯರಿಂಗ್‌ ವಿದ್ಯಾರ್ಥಿಯೊಬ್ಬ ಈಗ ಗಡಿ ಭದ್ರತಾ ಪಡೆಯ (ಬಿಎಸ್‌ಎಫ್‌) ವಶದಲ್ಲಿದ್ದಾನೆ. ಗುಜರಾತ್‌ನ ರಣ್ ಆಫ್‌ ಕಚ್‌ ವರೆಗೂ ತಲುಪಿ, ಅಲ್ಲಿಂದ ಕೆಲವೇ ಕಿಲೋ ಮೀಟರ್‌ ದೂರದ ಅಂತರರಾಷ್ಟ್ರೀಯ ಗಡಿ ದಾಟಿ ಪಾಕಿಸ್ತಾನದೊಳಗೆ ನುಸುಳಲು ತವಕಿಸುತ್ತಿದ್ದ ಯುವಕನ ಯೋಜನೆ ಪೂರ್ಣಗೊಳ್ಳಲಿಲ್ಲ.

ಬಿಎಸ್‌ಎಫ್‌ ವಶಕ್ಕೆ ಸಿಕ್ಕಿರುವ ಯುವಕ ಮಹಾರಾಷ್ಟ್ರದ ಉಸ್ಮಾನಾಬಾದ್‌ನ ಖ್ವಾಜಾನಗರದ ನಿವಾಸಿ ಜಿಶನ್‌ ಮೊಹಮ್ಮದ್‌ ಸಿದ್ದಿಕಿ (20 ವರ್ಷ). ಸಾಮಾಜಿಕ ಮಾಧ್ಯಮಗಳ ಮೂಲಕ ಪಾಕಿಸ್ತಾನ ಮೂಲದ ಹುಡುಗಿ ಆತನಿಗೆ ಪರಿಚಿತಳಾಗಿದ್ದಳು. ಆಕೆಯನ್ನು ಕಾಣುವ ಸಲುವಾಗಿ ಮಹಾರಾಷ್ಟ್ರದಿಂದ ಮೋಟಾರ್‌ ಬೈಕ್‌ ಏರಿ ಸೀದಾ ಗುಜರಾತ್‌ ಕಚ್‌ನ ರಣ್‌ ತಲುಪಿದ್ದ. ರಣ್‌ ಮರಳು ಪ್ರದೇಶದಲ್ಲಿ ಬೈಕ್‌ ಸಿಲುಕಿದ್ದರಿಂದ ಅಲ್ಲಿಯೇ ಬೈಕ್‌ ಬಿಟ್ಟು ಕಾಲು ನಡಿಗೆಯಲ್ಲೇ ಮುಂದೆ ಸಾಗಿದ್ದ.

ADVERTISEMENT

'ಗುರುವಾರ ರಾತ್ರಿ ಬಿಎಸ್‌ಎಫ್‌ ಸಿದ್ದಿಕಿಯನ್ನು ವಶಕ್ಕೆ ಪಡೆದು ನಂತರ ಸ್ಥಳೀಯ ಪೊಲೀಸರಿಗೆ ಹಸ್ತಾಂತರಿಸಿದೆ' ಎಂದು ಕಚ್‌ ಪೂರ್ವ ವಲಯದ ಎಸ್ಪಿ ಪರೀಕ್ಷಿತ್‌ ರಾಥೋಡ್‌ ಹೇಳಿದ್ದಾರೆ.

ಕಚ್‌ನ ರಣ್‌ ಸಮೀಪದ ಧೋಲಾವಿರಾ ಗ್ರಾಮದಲ್ಲಿ ಮಹಾರಾಷ್ಟ್ರ ನೋಂದಣಿಯ ಮೋಟಾರ್‌ಸೈಕಲ್‌ ಬಿದ್ದಿರುವುದರ ಬಗ್ಗೆ ಪೊಲೀಸರು ಗುರುವಾರ ಸಂಜೆ ಎಚ್ಚರಿಕೆ ರವಾನಿಸಿದ್ದರು. ಗೂಗಲ್‌ ಮ್ಯಾಪ್‌ ಬಳಸಿ ಪಾಕಿಸ್ತಾನದ ಕಡೆಗೆ ನಡೆದು ಹೋಗುತ್ತಿದ್ದ ಯುವಕನನ್ನು ಬಿಎಸ್‌ಎಫ್‌ ಸಿಬ್ಬಂದಿ ತಡೆದರು. ಇಂಡೋ–ಪಾಕ್‌ ಗಡಿಗೆ 1.5 ಕಿ.ಮೀ. ದೂರದಲ್ಲಿ ಈ ಘಟನೆ ನಡೆದಿದೆ. ತೀವ್ರ ಅಶ್ಯಕ್ತನಾಗಿದ್ದ ಯುವಕ ಸುಮಾರು 2 ಗಂಟೆಗಳ ವರೆಗೂ ಪ್ರಜ್ಞೆ ತಪ್ಪಿದ್ದ ಎಂದು ಬಿಎಸ್‌ಎಫ್‌ ಪ್ರಕಟಣೆಯಲ್ಲಿ ತಿಳಿಸಿದೆ. ಕರಾಚಿ ಮೂಲಕದ ಹುಡುಗಿಯನ್ನು ಪ್ರೀತಿಸುತ್ತಿರುವುದಾಗಿ ಸಿದ್ದಿಕಿ ಹೇಳಿರುವುದಾಗಿ ವಿವರಿಸಿದೆ.

ಮಹಾರಾಷ್ಟ್ರ ಪೊಲೀಸರ ಪ್ರಕಾರ, ಸಿದ್ದಿಕಿ ತನ್ನ ಪ್ರೀತಿಯ ಹುಡುಗಿಯನ್ನು ಕಾಣಲು ನಿರ್ಧರಿಸಿ ಉಸ್ಮಾನಾಬಾದ್‌ನ ತನ್ನ ಮನೆಯಿಂದ ಜುಲೈ 11ರಂದು ಹೊರಟಿದ್ದಾನೆ. ಕೋವಿಡ್‌ ಲಾಕ್‌ಡೌನ್‌ನಿಂದ ಸಾರ್ವಜನಿಕ ಸಾರಿಗೆ ಇಲ್ಲದ ಕಾರಣ ಮೋಟಾರ್‌ಸೈಕಲ್‌ನಲ್ಲೇ ಪ್ರಯಾಣ ಬೆಳೆಸಿದ್ದಾನೆ. ಕಚ್‌ ತಲುಪಿ, ಅಲ್ಲಿಂದ ಪಾಕಿಸ್ತಾನ ಪ್ರವೇಶಿಸುವ ಯೋಜನೆ ಮಾಡಿಕೊಂಡಿದ್ದ.

ಕಳೆದ ಕೆಲವು ತಿಂಗಳಿಂದ ಸಾಮಾಜಿಕ ಮಾಧ್ಯಮದ ಮೂಲಕ ಪರಿಚಿತಳಾಗಿದ್ದ ಹುಡುಗಿಯೊಂದಿಗೆ ಸಿದ್ದಿಕಿಗೆ ಪ್ರೀತಿ ಚಿಗುರಿತ್ತು. 'ಸಿದ್ದಿಕಿ ಮನೆಯಿಂದ ಕಾಣೆಯಾಗುತ್ತಿದ್ದಂತೆ ಕುಟುಂಬದವರು ಉಸ್ಮಾನಾಬಾದ್ ನಗರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು' ಎಂದು ಉಸ್ಮಾನಾಬಾದ್‌ ಎಸ್ಪಿ ರಾಜ್‌ತಿಲಕ್‌ ರೋಷನ್‌ ಮಾಹಿತಿ ನೀಡಿದ್ದಾರೆ.

ತನಿಖೆ ಆರಂಭಿಸಿದ್ದ ಪೊಲೀಸರು ಸಾಮಾಜಿಕ ಮಾಧ್ಯಮಗಳಲ್ಲಿ ಸಿದ್ದಿಕಿ ಖಾತೆಗಳನ್ನು ಪರಿಶೀಲಿಸಿದ್ದರು. ಆತ ಪಾಕಿಸ್ತಾನ ಮೂಲದ ಹುಡುಗಿಯನ್ನು ಭೇಟಿಯಾಗಲು ಮನೆ ಬಿಟ್ಟು ಹೋಗಿರುವುದನ್ನು ಕಂಡುಕೊಳ್ಳಲಾಗಿತ್ತು. ಮೊಬೈಲ್‌ ಫೋನ್‌ ರೆಕಾರ್ಡ್‌ಗಳನ್ನು ಆಧರಿಸಿ, ಕಚ್‌ ಸಮೀಪ ಇರುವುದನ್ನು ಪತ್ತೆ ಮಾಡಲಾಗಿತ್ತು. ವಿವರಗಳನ್ನು ಗುಜರಾತ್ ಪೊಲೀಸರೊಂದಿಗೆ ಹಂಚಿಕೊಳ್ಳಲಾಯಿತು. ಆ ವಿವರ ಬಿಎಸ್‌ಎಫ್‌ಗೂ ತಲುಪಿಸಲಾಗಿತ್ತು.

ಈಗ ಕಚ್ ಪೊಲೀಸರ ವಶದಲ್ಲಿರುವ ಸಿದ್ದಿಕಿಯನ್ನು ಕರೆತರಲು ಉಸ್ಮಾನಾಬಾದ್‌ ಪೊಲೀಸರ ತಂಡ ಕಚ್‌ಗೆ ತೆರಳಿರುವುದಾಗಿ ಪೊಲೀಸರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.