ಮುಂಬೈ: ಮಹಾರಾಷ್ಟ್ರ ನವನಿರ್ಮಾಣ ಸೇನಾ ಮುಖ್ಯಸ್ಥ ಹಾಗೂ ಬಾಳಾ ಠಾಕ್ರೆ ಸೋದರನ ಪುತ್ರ ರಾಜ್ ಠಾಕ್ರೆ ಅವರು ತಮ್ಮ ಸೋದರಸಂಬಂಧಿ ಉದ್ಧವ್ ಠಾಕ್ರೆ ಪದಚ್ಯುತಿ ಕುರಿತು ಮಾರ್ಮಿಕವಾಗಿ ಟ್ವೀಟಿಸಿದ್ದಾರೆ.
ಗುರುವಾರ ಟ್ವೀಟ್ ಮಾಡಿರುವ ಅವರು, ‘ಒಬ್ಬ ವ್ಯಕ್ತಿಯು ತನ್ನ ಅದೃಷ್ಟವನ್ನೇ ವೈಯಕ್ತಿಕ ಸಾಧನೆ ಎಂದು ತಪ್ಪಾಗಿ ಭಾವಿಸಿದ ದಿನ ಆತನ ಅವನತಿ ಆರಂಭವಾಗುತ್ತದೆ’ ಎಂದು ತಿಳಿಸಿದ್ದಾರೆ.
ಇದೇ ಟ್ವೀಟ್ ಅನ್ನು ಇಂಗ್ಲಿಷ್, ಮರಾಠಿ ಹಾಗೂ ಹಿಂದಿಯಲ್ಲಿ ಹಂಚಿಕೊಂಡಿದ್ದಾರೆ.
ಶಿವಸೇನಾದಿಂದ ಹೊರಹೋಗಿದ್ದ ರಾಜ್ ಠಾಕ್ರೆ ಅವರು ಸುಮಾರು ಎರಡು ದಶಕಗಳ ಹಿಂದೆ ತಮ್ಮದೇ ಪಕ್ಷ ಮಹಾರಾಷ್ಟ್ರ ನವನಿರ್ಮಾಣ ಸೇನೆಯನ್ನು ಸ್ಥಾಪಿಸಿದರು.
ರಾಜ್ ಠಾಕ್ರೆ ತಂದೆ ಶ್ರೀಕಾಂತ ಠಾಕ್ರೆ ಅವರು ಶಿವಸೇನಾ ಸಂಸ್ಥಾಪಕ ಬಾಳಾ ಠಾಕ್ರೆ ಅವರ ಕಿರಿಯ ಸಹೋದರ.
ಮಹಾರಾಷ್ಟ್ರ ಮುಖ್ಯಮಂತ್ರಿ ಸ್ಥಾನಕ್ಕೆ ಉದ್ಧವ್ ಠಾಕ್ರೆ ಬುಧವಾರ ರಾಜೀನಾಮೆ ನೀಡಿದ್ದಾರೆ. ಶಿವಸೇನಾದಿಂದ ಬಂಡಾಯವೆದ್ದು ಹೊರನಡೆದಿದ್ದ ಏಕನಾಥ ಶಿಂಧೆ ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.