ಮುಂಬೈ: ರಾಸಾಯನಿಕ ಕಾರ್ಖಾನೆಯೊಳಗಿದ್ದ ಸಾರಜನಕ(ನೈಟ್ರೋಜನ್)ಅನಿಲ ಸಿಲಿಂಡರ್‌ಗಳ ಸರಣಿ ಸ್ಫೋಟದಿಂದಾಗಿ 13 ಕಾರ್ಮಿಕರು ಮೃತಪಟ್ಟು, 58 ಕಾರ್ಮಿಕರು ಗಾಯಗೊಂಡಿರುವ ಘಟನೆ ಮಹಾರಾಷ್ಟ್ರದ ಧುಲೆ ಜಿಲ್ಲೆಯಲ್ಲಿ ಶನಿವಾರ ನಡೆದಿದೆ.
‘ಬೆಳಗ್ಗೆ 9.45ರ ವೇಳೆಗೆ ಶಿರ್‌ಪುರ್ ತಾಲೂಕಿನ ವಾಗಡಿ ಹಳ್ಳಿಯಲ್ಲಿರುವರುಮಿತ್ ಕೆಮಿಸಿಂಥ್ ಪ್ರೈ.ಲಿ.ಕಾರ್ಖಾನೆಯಲ್ಲಿ ಪೀಪಾಯಿಯಲ್ಲಿದ್ದ(ಬ್ಯಾರಲ್)ರಾಸಾಯನಿಕ ಸೋರಿಕೆಯಾಗಿ, ಬೆಂಕಿ ಕಾಣಿಸಿಕೊಂಡಿದೆ. ಇದೇ ಸಿಲಿಂಡರ್‌ಗಳ ಸ್ಫೋಟಕ್ಕೆ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ’ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
‘ಘಟನೆ ಸಂಭವಿಸಿದ ವೇಳೆ ಕಾರ್ಖಾನೆಯೊಳಗೆ 100 ಕಾರ್ಮಿಕರಿದ್ದರು, ಸ್ಫೋಟದಿಂದಾಗಿ ವ್ಯಾಪಿಸಿದ್ದ ಬೆಂಕಿಯನ್ನು ನಂದಿಸಲಾಗಿದ್ದು, ಅಗ್ನಿಶಾಮಕ ದಳ, ಪೊಲೀಸ್ ಸಿಬ್ಬಂದಿ, ರಾಜ್ಯ ವಿಪತ್ತು ನಿರ್ವಹಣಾ ಪಡೆ(ಎಸ್‌ಡಿಆರ್‌ಎಫ್) ಸಿಬ್ಬಂದಿರಕ್ಷಣಾ ಕಾರ್ಯಾಚರಣೆ ಮುಂದುವರಿಸಿದ್ದಾರೆ’ ಎಂದರು. ಗಾಯಾಳುಗಳನ್ನು ಧುಲೆ ಸರ್ಕಾರಿ ಆಸ್ಪತ್ರೆ ಹಾಗೂ ಶಿರ್‌ಪುರ್ ಕಾಟೇಜ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮನೆಯಿಂದ ಹೊರಬಂದ ಜನ: ಔಷಧಿಗೆ ಬಳಸುವ ರಾಸಾಯನಿಕಗಳನ್ನು ತಯಾರಿಸುವ ಕಾರ್ಖಾನೆ ಇದಾಗಿದ್ದು, ಹೆಚ್ಚಿನ ಪ್ರಮಾಣದ ರಾಸಾಯನಿಕ ಮತ್ತು ನೈಟ್ರೋಜನ್ ಅನಿಲದ ಸಿಲಿಂಡರ್ ಶೇಖರಿಸಿಡಲಾಗಿತ್ತು. ಹೀಗಾಗಿ ಸ್ಫೋಟದ ತೀವ್ರತೆಯೂ ಅಧಿಕವಾಗಿತ್ತು.ಸ್ಫೋಟದ ಶಬ್ದಕ್ಕೆ ಬೆಚ್ಚಿಬಿದ್ದ ಕಾರ್ಖಾನೆ ವ್ಯಾಪ್ತಿಯ ಜನರು ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ.
₹5 ಲಕ್ಷ ಪರಿಹಾರ: ಘಟನೆ ಬಗ್ಗೆ ಸಂತಾಪ ವ್ಯಕ್ತಪಡಿಸಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಮೃತರ ಕುಟುಂಬಕ್ಕೆ ₹5 ಲಕ್ಷ ಪರಿಹಾರ ಘೋಷಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.