ರಾಯಗಡ : ಬ್ರಿಟನ್‌ನಲ್ಲಿರುವ ಛತ್ರಪತಿ ಶಿವಾಜಿ ಮಹಾರಾಜರಿಗೆ ಸೇರಿದ ವಸ್ತಗಳಾದ ಖಡ್ಗ ಮತ್ತು ಕಠಾರಿಯನ್ನು ಮರಳಿ ಭಾರತಕ್ಕೆ ತರಲು ಪ್ರಯತ್ನ ಪಡುವುದಾಗಿ ಮಹಾರಾಷ್ಟ್ರದ ಸಾಂಸ್ಕೃತಿಕ ವ್ಯವಹಾರಗಳ ಸಚಿವ ಸುಧೀರ್ ಮುಂಗಂತಿವಾರ್ ಹೇಳಿದ್ದಾರೆ.
ರಾಯಗಡ ಜಿಲ್ಲೆಯ ಖಾರ್ಘರ್‌ನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಮುಂಗಂತಿವಾರ್, ‘ಶಿವಾಜಿ ಮಹಾರಾಜರ ಪಟ್ಟಾಭಿಷೇಕದ 350ನೇ ವಾರ್ಷಿಕೋತ್ಸವವನ್ನು ಶೀಘ್ರದಲ್ಲೇ ಆಚರಿಸಲಾಗುವುದು. ಮುಂದಿನ ತಿಂಗಳ ಮೊದಲನೇ ವಾರ ನಾನು ಬ್ರಿಟನ್‌ಗೆ ಭೇಟಿ ನೀಡಲಿದ್ದು, ಈ ವೇಳೆ ಶಿವಾಜಿ ಮಹಾರಾಜರಿಗೆ ಸೇರಿದ ಎಲ್ಲ ವಸ್ತುಗಳನ್ನು ಮರಳಿ ತರಲು ಪ್ರಯತ್ನಸುತ್ತೇನೆ‘ ಎಂದು ಹೇಳಿದ್ದಾರೆ.
'ಈ ಬಗ್ಗೆ ನಾನು(ಸುಧೀರ್ ಮುಂಗಂತಿವಾರ್) ಬ್ರಿಟಿಷ್ ಡೆಪ್ಯುಟಿ ಹೈ ಕಮಿಷನರ್ ಅಲನ್ ಗೆಮ್ಮೆಲ್ ಮತ್ತು ರಾಜಕೀಯ, ದ್ವಿಪಕ್ಷೀಯ ವ್ಯವಹಾರಗಳ ಉಪ ಮುಖ್ಯಸ್ಥ ಇಮೋಜೆನ್ ಸ್ಟೋನ್ ಅವರೊಂದಿಗೆ ಈಗಾಗಲೇ ಚರ್ಚಿಸಿದ್ದೇನೆ. 'ಜಗದಾಂಬಾ' ಖಡ್ಗ ಮತ್ತು 'ವಾಘ್-ನಖ್' (ಹುಲಿ ಉಗುರುಗಳಂತೆ ಕಾಣುವ ಕಠಾರಿ) ಮರಳಿ ತರುವುದಕ್ಕೆ ಸಹಾಯ ಮಾಡುವಂತೆ ಕೇಳಿಕೊಂಡಿದ್ದೇನೆ‘ ಎಂದು ಮುಂಗಂತಿವಾರ್ ಹೇಳಿದ್ದಾರೆ.
‘ಇಡೀ ಜಗತ್ತೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವನ್ನು ತಿರುಗಿ ನೋಡುವಂತೆ ಶಿವಾಜಿ ಮಹಾರಾಜರ ಪಟ್ಟಾಭಿಷೇಕದ 350ನೇ ವಾರ್ಷಿಕೋತ್ಸವವನ್ನು ಆಚರಿಸುತ್ತೇವೆ. ಈ ಪಟ್ಟಾಭಿಷೇಕದ ದಿನ ಅವರಿಗೆ ಸೇರಿದ ಖಡ್ಗವನ್ನು ಮರಳಿ ತರಲು ನಾನು ಎಲ್ಲ ರೀತಿಯ ಪ್ರಯತ್ನ ಮಾಡುತ್ತೇನೆ‘ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.