ADVERTISEMENT

ಮಹಾರಾಷ್ಟ್ರದ ನೂತನ ಸರ್ಕಾರದಿಂದ ಹೊರಗುಳಿಯಲಿದ್ದೇನೆ: ದೇವೇಂದ್ರ ಫಡಣವೀಸ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 30 ಜೂನ್ 2022, 12:29 IST
Last Updated 30 ಜೂನ್ 2022, 12:29 IST
ಬಿಜೆಪಿ ನಾಯಕ ದೇವೇಂದ್ರ ಫಡಣವೀಸ್‌
ಬಿಜೆಪಿ ನಾಯಕ ದೇವೇಂದ್ರ ಫಡಣವೀಸ್‌   

ಮುಂಬೈ: ಮಹಾರಾಷ್ಟ್ರದ ರಾಜಕೀಯ ಬೆಳವಣಿಗೆಗಳು ಕುತೂಹಲ ಘಟ್ಟಕ್ಕೆ ತಲುಪಿವೆ. ಶಿವಸೇನಾ ನಾಯಕ ಏಕನಾಥ ಶಿಂಧೆ ಅವರು ಮಹಾರಾಷ್ಟ್ರದ ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆ. ಇದೇ ವೇಳೆ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ನಾಯಕ ದೇವೇಂದ್ರ ಫಡಣವೀಸ್‌ ಅವರು ರಚನೆಯಾಗಲಿರುವ ನೂತನ ಸರ್ಕಾರದಲ್ಲಿ ಯಾವುದೇ ಸ್ಥಾನಮಾನವನ್ನು ಹೊಂದುವುದಿಲ್ಲವೆಂದು ಹೇಳಿದರು.

ಈ ವಿಚಾರವಾಗಿ ಗುರುವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಫಡಣವೀಸ್‌, ‘ಇಂದು ನಡೆಯಲಿರುವ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಬಳಿಕ ಸಂಪುಟ ವಿಸ್ತರಣೆ ನಡೆಯಲಿದೆ. ಶಿವಸೇನಾ ಹಾಗೂ ಬಿಜೆಪಿ ನಾಯಕರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ನಾನು ಸರ್ಕಾರದಿಂದ ಹೊರಗುಳಿಯುತ್ತೇನೆ’ ಎಂದು ತಿಳಿಸಿದರು.

‘ಕಾಂಗ್ರೆಸ್ ಮತ್ತು ಎನ್‌ಸಿಪಿ ಜೊತೆಗಿನ ಮೈತ್ರಿಯನ್ನು ಕೊನೆಗೊಳಿಸಬೇಕೆಂದು ಶಿವಸೇನಾ ಶಾಸಕರು ಒತ್ತಾಯಿಸುತ್ತಿದ್ದರು. ಆದರೆ, ಉದ್ಧವ್ ಠಾಕ್ರೆ ಅವರು ಈ ಶಾಸಕರನ್ನು ನಿರ್ಲಕ್ಷಿಸಿದರು. ಎಂವಿಎ ಮೈತ್ರಿಕೂಟದ ಪಾಲುದಾರರಿಗೆ ಆದ್ಯತೆ ನೀಡಿದರು. ಅದಕ್ಕಾಗಿಯೇ ಶಿವಸೇನಾ ಶಾಸಕರು ತಮ್ಮ ಧ್ವನಿಯನ್ನು ತೀವ್ರಗೊಳಿಸಿದರು’ ಎಂದು ಹೇಳಿದರು.

ADVERTISEMENT

‘ಜನಾದೇಶವನ್ನು ಅವಮಾನಿಸಿ ಹಿಂದುತ್ವ ಮತ್ತು ಸಾವರ್ಕರ್ ವಿರುದ್ಧ ಇರುವವರ ಜೊತೆ ಠಾಕ್ರೆ ನೇತೃತ್ವದ ಶಿವಸೇನಾ ಮೈತ್ರಿ ಮಾಡಿಕೊಂಡಿತು’ ಎಂದು ಫಡಣವೀಸ್‌ ವಾಗ್ದಾಳಿ ನಡೆಸಿದರು.

‘2019ರಲ್ಲಿ ಬಿಜೆಪಿ ಮತ್ತು ಶಿವಸೇನಾ ಮೈತ್ರಿ ಮಾಡಿಕೊಂಡಿದ್ದವು. ವಿಧಾನಸಭೆ ಚುನಾವಣೆಯಲ್ಲಿ ನಮಗೆ ಬೇಕಾದ ಸಂಖ್ಯೆಗಳು ಸಿಕ್ಕಿದ್ದವು. ನಾವು ಸರ್ಕಾರವನ್ನು ರಚಿಸಲು ಆಶಿಸಿದ್ದೆವು. ಆದರೆ, ಬಾಳಾಸಾಹೇಬರು ತಮ್ಮ ಜೀವನದುದ್ದಕ್ಕೂ ಯಾರ ವಿರುದ್ಧ ಹೋರಾಡಿದ್ದರೋ ಅವರೊಂದಿಗೆ ಮೈತ್ರಿ ಮಾಡಿಕೊಳ್ಳಲು ಶಿವಸೇನಾ ನಿರ್ಧರಿಸಿತು’ ಎಂದು ಹೇಳಿದರು.

ಶಿವಸೇನಾ ಬಂಡಾಯ ಬಣದ ನಾಯಕ ಏಕನಾಥ ಶಿಂಧೆ ಅವರು ಮಹಾರಾಷ್ಟ್ರದ ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆ.

ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರು ಗುರುವಾರ ಸಂಜೆ 7.30ಕ್ಕೆ ಶಿಂಧೆ (58) ಅವರಿಗೆ ಪ್ರಮಾಣ ವಚನ ಬೋಧಿಸಲಿದ್ದಾರೆ.

ಶಿಂಧೆ ಅವರು ಶಿವಸೇನಾ ಅಧ್ಯಕ್ಷ ಉದ್ಧವ್ ಠಾಕ್ರೆ ವಿರುದ್ಧ ಬಂಡಾಯವೆದ್ದು ತಮ್ಮದೇ ಗುಂಪು ರಚಿಸಿಕೊಂಡಿದ್ದರು. ತಮ್ಮದೇ ನಿಜವಾದ ಶಿವಸೇನಾ ಎಂದು ಘೋಷಿಸಿಕೊಂಡಿದ್ದಾರೆ.

ಇವನ್ನೂ ಓದಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.