ADVERTISEMENT

ಮಹಾರಾಷ್ಟ್ರ | ಇಂದು ಸಿ.ಎಂ ಆಯ್ಕೆ: ದೇವೇಂದ್ರ ಫಡಣವೀಸ್‌ಗೆ ಆರ್‌ಎಸ್‌ಎಸ್‌ ಬೆಂಬಲ

*

​ಪ್ರಜಾವಾಣಿ ವಾರ್ತೆ
ಪಿಟಿಐ
Published 24 ನವೆಂಬರ್ 2024, 19:53 IST
Last Updated 24 ನವೆಂಬರ್ 2024, 19:53 IST
ದೇವೇಂದ್ರ ಫಡಣವೀಸ್‌
ದೇವೇಂದ್ರ ಫಡಣವೀಸ್‌   

ಮುಂಬೈ: ‘ಮಹಾಯುತಿ’ ಮೈತ್ರಿಕೂಟ ಮಹಾರಾಷ್ಟ್ರದಲ್ಲಿ ‍ಪ್ರಚಂಡ ಬಹುಮತ ಪಡೆದ ಹಿಂದೆಯೇ, ಮುಂಬೈನಲ್ಲಿ ತೀವ್ರ ರಾಜಕೀಯ ಚಟುವಟಿಕೆ ನಡೆದಿದೆ. ಸಿ.ಎಂ ಆಯ್ಕೆಗೆ ತೀವ್ರ ಚರ್ಚೆ ಆರಂಭವಾಗಿದ್ದು, ಸೋಮವಾರ ಅಭ್ಯರ್ಥಿ ಹೆಸರು ಘೋಷಣೆಯಾಗುವ ಸಾಧ್ಯತೆಗಳಿವೆ.

ಮಾಜಿ ಸಿ.ಎಂ ದೇವೇಂದ್ರ ಫಡಣವೀಸ್‌ ಅವರಿಗೆ ಆರ್‌ಎಸ್‌ಎಸ್‌ ಬೆಂಬಲಿಸಿದೆ. ಬಿಜೆಪಿ ಆಧಿಕ ಸ್ಥಾನ ಗೆದ್ದರೂ, ಮೈತ್ರಿಪಕ್ಷಗಳ ಮುಖಂಡರಾದ ಏಕನಾಥ ಶಿಂದೆ, ಅಜಿತ್ ಪವಾರ್ ಅವರು ಲೆಕ್ಕಾಚಾರ ನಡೆಸಿದ್ದಾರೆ. 

‘ಹಾಲಿ ಇರುವ ಅಧಿಕಾರ ಹಂಚಿಕೆಯ ಸೂತ್ರವನ್ನೇ ಮುಂದುವರಿಸಬೇಕು’ ಎಂದು ಶಿಂದೆ ಬೆಂಬಲಿಗರು ಒತ್ತಾಯಿಸಿದ್ದರೆ, ‘ಸೂತ್ರ ಬದಲಾದರೆ ತಪ್ಪಿಲ್ಲ’ ಎಂದು ಅಜಿತ್ ಪವಾರ್ ಬೆಂಬಲಿಗರು ಪ್ರತಿಕ್ರಿಯಿಸಿದ್ದಾರೆ. 

ADVERTISEMENT

ಸಿ.ಎಂ ಸ್ಥಾನದ ಅಭ್ಯರ್ಥಿಯ ಆಯ್ಕೆ ಪ್ರಶ್ನೆ ಈಗ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ಮುಂದಿದೆ. ಮೈತ್ರಿಪಕ್ಷಗಳಿಗೆ ನೀಡಬೇಕಾದ ಆದ್ಯತೆ, ಜಾತಿ ಸಮೀಕರಣ ಹಾಗೂ ಇತರೆ ಅಂಶಗಳನ್ನೂ ಆಧರಿಸಿ ವರಿಷ್ಠರು ಅಂತಿಮ ತೀರ್ಮಾನ ಕೈಗೊಳ್ಳುವರು ಎಂದು ಹೇಳಲಾಗಿದೆ.

ಆರ್‌‌ಎಸ್‌ಎಸ್‌ಗೆ ನಿಕಟವಾಗಿರುವ ದೇವೇಂದ್ರ ಫಡಣವೀಸ್‌ ಅವರು ನವದೆಹಲಿಗೆ ತೆರಳಿ ಪಕ್ಷದ ವರಿಷ್ಠರ ಭೇಟಿ ಮಾಡುವ ಸಂಭವವಿದೆ. 

ಬಿಜೆಪಿಯ ಹಿರಿಯ ಮುಖಂಡರೊಬ್ಬರ ಪ್ರಕಾರ, ಹೆಚ್ಚಿನ ನಾಯಕರು ದೇವೇಂದ್ರ ಫಡಣವೀಸ್‌ ಅವರನ್ನೇ ಮುಖ್ಯಮಂತ್ರಿ ಸ್ಥಾನಕ್ಕೆ ಪರಿಗಣಿಸಬೇಕು ಎಂದು ಒಲವು ವ್ಯಕ್ತಪಡಿಸಿದ್ದಾರೆ. 

ಮೈತ್ರಿ ಪಕ್ಷಗಳ ಸಂಕೀರ್ಣತೆಯಿಂದಾಗಿ ಹೊಸ ಸರ್ಕಾರದಲ್ಲೂ ಇಬ್ಬರು ಡಿ.ಸಿ.ಎಂ ಇರಬಹುದು. ಸಂಪುಟದ ಒಟ್ಟು ಗಾತ್ರ 43 ಇರಲಿದ್ದು, ಸಚಿವರ ಆಯ್ಕೆಗೆ ಎಚ್ಚರಿಕೆಯ ನಡೆ ಇಡಬೇಕಿದೆ ಎಂದು ಮೂಲಗಳು ತಿಳಿಸಿವೆ.

ರಾಜ್ಯ ಬಿಜೆಪಿ ಅಧ್ಯಕ್ಷ ಚಂದ್ರಶೇಖರ ಬವಂಕುಲೆ ಅವರು, ‘ಮೈತ್ರಿಕೂಟದ ಯೋಜನೆಯಂತೆಯೇ ಸಿ.ಎಂ ಆಯ್ಕೆ ನಡೆಯಲಿದೆ. ಮಹಾಯುತಿ, ಬಿಜೆಪಿ ನಾಯಕರು ತೀರ್ಮಾನಿಸುವರು’ ಎಂದು ಪ್ರತಿಕ್ರಿಯಿಸಿದರು. 

‘ಈ ಚುನಾವಣೆಯಲ್ಲಿ ರಾಜ್ಯದ ಎಲ್ಲ ವರ್ಗದ ಜನರು ಕಾಂಗ್ರೆಸ್ ಪಕ್ಷ ತಿರಸ್ಕರಿಸಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ ಸಿ.ಎಂ ಆಗುವ ಕನಸು ಕಾಣುತ್ತಿದ್ದರು. ಕಡೆಗೆ ಅಂಚೆ ಮತಗಳಿಂದ ಗೆದ್ದರು. ಈ ಜನಾದೇಶ ಹೇಗಿದೆ ಎಂದರೆ ವಿರೋಧಪಕ್ಷದ ನಾಯಕನ ಸ್ಥಾನವು ಇಲ್ಲ. ಇದು, ಕಾಂಗ್ರೆಸ್‌ ಪಕ್ಷದ ಕರ್ಮ’ ಎಂದರು.

288 ಸದಸ್ಯ ಬಲದ ವಿಧಾನಸಭೆಯಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟ 230 ಮತ್ತು ಕಾಂಗ್ರೆಸ್ ನೇತೃತ್ವದ ಮಹಾವಿಕಾಸ ಅಘಾಡಿ 46 ಸ್ಥಾನ ಗೆದ್ದಿವೆ.

ಮಹಾರಾಷ್ಟ್ರದ 14ನೇ ವಿಧಾನಸಭೆಯ ಅವಧಿಯು ನವೆಂಬರ್ 26ಕ್ಕೆ ಅಂತ್ಯವಾಗಲಿದೆ. ಅದಕ್ಕೂ ಮೊದಲು ಹೊಸ ಸರ್ಕಾರ ಪ್ರಮಾಣವಚನ ಸ್ವೀಕರಿಸಬೇಕಾಗಿದೆ.

ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ 25ಕ್ಕೆ ವಾಂಖೇಡೆ ಕ್ರೀಡಾಂಗಣದಲ್ಲಿ ನಡೆಯಬಹುದು. ಮೈತ್ರಿಪಕ್ಷಗಳು ತಮ್ಮ ನಾಯಕನ ಆಯ್ಕೆ ಮಾಡಲಿವೆ. ಸಿ.ಎಂ ಆಯ್ಕೆ ದೆಹಲಿಯಲ್ಲಿ ನಡೆಯಲಿದೆ
ದೀಪಕ್‌ ಕೇಸಕರ್ ಶಿವಸೇನೆ (ಶಿಂದೆ ಬಣ) ನಾಯಕ

‘ಲಡ್ಕಿ ಬಹಿನ್’ ಧರ್ಮದ ಆಧಾರದಲ್ಲಿ ಧ್ರುವೀಕರಣ ಫಲಿತಾಂಶಕ್ಕೆ ಕಾರಣ –ಶರದ್ ಪವಾರ್ ಕರದ್

ಮಹಾರಾಷ್ವ: ‘ಲಡ್ಕಿ ಬಹಿನ್‌ ಯೋಜನೆ ಅತ್ಯಧಿಕ ಮಹಿಳೆಯರಿಂದ ಮತದಾನ ಧರ್ಮದ ಆಧಾರದಲ್ಲಿ ಮತಗಳ ಧ್ರುವೀಕರಣ ಮಹಾಯುತಿ ಗೆಲುವಿಗೆ ಕಾರಣ’ ಎಂದು ಎನ್‌ಸಿಪಿ–ಎಸ್‌ಪಿ ಮುಖ್ಯಸ್ಥ ಶರದ್‌ ಪವಾರ್ ಅವರು ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯ ಫಲಿತಾಂಶವನ್ನು ವಿಶ್ಲೇಷಿಸಿದ್ದಾರೆ.

‘ಫಲಿತಾಂಶವು ನಿರೀಕ್ಷೆಯಂತೆ ಇಲ್ಲ. ಪಕ್ಷದ ಹಿನ್ನೆಡೆಗೆ ಕಾರಣಗಳನ್ನು ಅಧ್ಯಯನ ಮಾಡಲಿದ್ದು ಪಕ್ಷದ ಪುನಶ್ಚೇತನಕ್ಕೆ ಅಗತ್ಯ ಕ್ರಮವಹಿಸುತ್ತೇವೆ’ ಎಂದು ಹೇಳಿದರು. ಸತಾರಾ ಜಿಲ್ಲೆಯ ಕರದ್ ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು ಸಕ್ರಿಯ ರಾಜಕಾರಣದಿಂದ ನಿವೃತ್ತಿ ಕುರಿತ ಪ್ರಶ್ನೆಗೆ ‘ನಾನು ಮತ್ತು ಪಕ್ಷದ ಸಹೋದ್ಯೋಗಿಗಳು ಇದನ್ನು ಚರ್ಚಿಸಿ ನಿರ್ಧರಿಸುತ್ತೇವೆ’ ಎಂದರು.

‘ಎನ್‌ಸಿಪಿಯ ಅಜಿತ್ ಪವಾರ್ ಬಣ ಹೆಚ್ಚು ಸ್ಥಾನ ಗೆದ್ದಿದೆ ಎಂದು ಒಪ್ಪಿದರೂ ಎನ್‌ಸಿಪಿ ಸ್ಥಾಪಿಸಿದ್ದು ಯಾರು ಎಂದು ಎಲ್ಲರಿಗೂ ಗೊತ್ತಿದೆ’ ಎಂದು ಹೇಳಿದರು. ಶಿವಸೇನೆ (ಉದ್ಧವ್ ಬಣ) ನಾಯಕ ಸಂಜ‌ಯ್‌ ರಾವುತ್ ಅವರು ಮತಯಂತ್ರಗಳ  ಕುರಿತು ಶಂಕೆ ವ್ಯಕ್ತಪಡಿಸಿದ್ದಾರೆ ಎಂದು ಗಮನಸೆಳೆದಾಗ ‘ಖಚಿತ ಅಂಕಿ ಅಂಶ ಇದ್ದರಷ್ಟೇ ನಾನು ಆ ಬಗ್ಗೆ ಮಾತನಾಡುತ್ತೇನೆ’ ಎಂದು ಹೇಳಿದರು.

ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಶರದ್ ಪವಾರ್ ನೇತೃತ್ವದ ಎನ್‌ಸಿಪಿ ಬಣ ಕೇವಲ 10 ಸ್ಥಾನ ಗೆದ್ದಿದ್ದರೆ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಬಣ 41 ಸ್ಥಾನ ಗೆಲ್ಲುವಲ್ಲಿ ಯಶಸ್ವಿಯಾಗಿದೆ.

ಎನ್‌ಸಿಪಿ (ಅಜಿತ್ ಬಣ) ಶಾಸಕಾಂಗ ಪಕ್ಷದನಾಯಕರಾಗಿ ಅಜಿತ್ ಪವಾರ್ ಆಯ್ಕೆ

ಮುಂಬೈ: ಎನ್‌ಸಿಪಿಯ (ಅಜಿತ್ ಬಣ) ಶಾಸಕಾಂಗ ಪಕ್ಷದ ನಾಯಕರಾಗಿ ಪಕ್ಷದ ಅಧ್ಯಕ್ಷ ಅಜಿತ್ ಪವಾರ್ ಭಾನುವಾರ ಆಯ್ಕೆಯಾಗಿದ್ದಾರೆ. ಪಕ್ಷದ ಸಂಸದ ಸುನಿತ್ ತತ್ಕರೆ ಅಧ್ಯಕ್ಷತೆಯಲ್ಲಿ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಅನಿಲ್‌ ಪಾಟೀಲ್ ಅವರನ್ನು ಪಕ್ಷದ ಮುಖ್ಯ ಸಚೇತಕರಾಗಿ ಆಯ್ಕೆ ಮಾಡಲಾಯಿತು.

ಸರ್ಕಾರ ರಚನೆ ಚರ್ಚೆ: ಏಕನಾಥ ಶಿಂದೆಗೆ  ಪೂರ್ಣ ಅಧಿಕಾರ –ಶಿವಸೇನೆ

ಮುಂಬೈ: ಶಿವಸೇನೆಯ (ಶಿಂದೆ ಬಣ) ನೂತನ ಶಾಸಕಾಂಗ ಪಕ್ಷದ ಸಭೆ ಸರ್ಕಾರ ರಚನೆ ಕುರಿತು ನಿರ್ಧರಿಸುವ ಪೂರ್ಣ ಅಧಿಕಾರವನ್ನು ಪಕ್ಷದ ನಾಯಕ ಮುಖ್ಯಮಂತ್ರಿ ಏಕನಾಥ ಶಿಂದೆ ಅವರಿಗೆ ನೀಡಿದೆ. ‘ಹೊಸ ಮುಖ್ಯಮಂತ್ರಿ ಅಭ್ಯರ್ಥಿಯ ಆಯ್ಕೆ ಕುರಿತಂತೆ ಮೈತ್ರಿ ಪಕ್ಷಗಳಲ್ಲಿ ಯಾವುದೇ ವಿವಾದ ಇಲ್ಲ’ ಎಂದು ಪಕ್ಷದ ನಾಯಕ ದೀಪಕ್ ಕೇಸಕರ್ ಹೇಳಿದ್ದಾರೆ. ಶಾಸಕಾಂಗ ಪಕ್ಷದ ನಾಯಕ ಮುಖ್ಯ ಸಚೇತಕ ಪಕ್ಷದ ಇತರ ಪದಾಧಿಕಾರಿಗಳನ್ನು ನೇಮಿಸುವ ಅಧಿಕಾರವನ್ನು ಶಾಸಕಾಂಗ ಪಕ್ಷವು ಶಿಂದೆ ಅವರಿಗೆ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.