ಮುಂಬೈ: ‘ಮಹಾಯುತಿ’ ಸರ್ಕಾರವು ಮಹಾರಾಷ್ಟ್ರ ಮತ್ತು ಮುಂಬೈ ನಗರದ ಸಂಪನ್ಮೂಲವನ್ನು ಲೂಟಿ ಮಾಡುತ್ತಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೇವಾಲಾ ಆರೋಪಿಸಿದರು.
ಭಾನುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬಿಜೆಪಿ, ಶಿವಸೇನಾ (ಶಿಂದೆ ಬಣ) ಮತ್ತು ಎನ್‌ಸಿಪಿ (ಅಜಿತ್ ಪವಾರ್ ಬಣ) ಪಕ್ಷಗಳನ್ನು ಒಳಗೊಂಡ ‘ಮಹಾಯುತಿ’ ಮೈತ್ರಿಕೂಟದ ವಿರುದ್ಧ ವಾಗ್ದಾಳಿ ನಡೆಸಿದರು.
‘ಹಾಲಿ ಸರ್ಕಾರವು ಗ್ಯಾಂಗ್‌ಸ್ಟರ್‌ಗಳಿಗೆ ರಕ್ಷಣೆ ನೀಡುತ್ತಿದ್ದು, ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾದವರ ಪರ ನಿಂತಿದೆ. ಬಾಲಿವುಡ್‌ನ ಹಲವು ನಟರಿಗೆ ಬೆದರಿಕೆ ಒಡ್ಡಲಾಗಿದೆ. ರಾಜಕೀಯ ನಾಯಕರನ್ನು ಹಾಡಹಗಲೇ ಹತ್ಯೆ ಮಾಡಲಾಗಿದೆ. ಅಧಿಕಾರದಲ್ಲಿರುವವರ ಸಹಕಾರ ಇಲ್ಲದೆಯೇ ಇಂತಹ ಘಟನೆಗಳು ನಡೆಯಲು ಸಾಧ್ಯವೇ’ ಎಂದು ಪ್ರಶ್ನಿಸಿದರು.
‘ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್, ಮಾಜಿ ಸಚಿವ ಬಾಬಾ ಸಿದ್ದೀಕಿ ಅವರ ಹತ್ಯೆ ಮಾಡಿರುವ ಘಟನೆ ಇಡೀ ದೇಶಕ್ಕೆ ಆಘಾತ ಉಂಟುಮಾಡಿದೆ. ಮಹಾರಾಷ್ಟ್ರದಲ್ಲಿರುವ ‘ಗನ್ ಮತ್ತು ಗೂಂಡಾರಾಜ್’ಅನ್ನು ಈ ಘಟನೆ ಬಯಲು ಮಾಡಿದೆ’ ಎಂದರು.
ಎಂವಿಎಗೆ ಬಹುಮತ– ಚೆನ್ನಿತ್ತಲ: ಮಹಾ ವಿಕಾಸ ಆಘಾಡಿ (ಎಂವಿಎ) ಮೈತ್ರಿಕೂಟವು ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೇರಲಿದೆ ಎಂದು ಕಾಂಗ್ರೆಸ್‌ನ ಮಹಾರಾಷ್ಟ್ರ ಉಸ್ತುವಾರಿ ರಮೇಶ್ ಚೆನ್ನಿತ್ತಲ ವಿಶ್ವಾಸ ವ್ಯಕ್ತಪಡಿಸಿದರು.
ಪ್ರಧಾನಿ ಅವರ ‘ಏಕ್ ಹೈ ತೊ ಸೇಫ್ ಹೈ’ (ಒಗ್ಗಟ್ಟಿನಿಂದ ಇದ್ದರೆ ನಾವು ಸುರಕ್ಷಿತವಾಗಿರುತ್ತೇವೆ) ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ‘ಬಟೇಂಗೆ ತೊ ಕಟೇಂಗೆ’ (ಒಗ್ಗಟ್ಟಿಲ್ಲದಿರುವುದು ವಿನಾಶಕ್ಕೆ ಕಾರಣವಾಗುತ್ತದೆ) ಹೇಳಿಕೆಗಳು ಮಹಾರಾಷ್ಟ್ರದ ಸಂಸ್ಕೃತಿಗೆ ವಿರುದ್ಧವಾಗಿರುವುದರಿಂದ ಇಲ್ಲಿನ ಜನರು ತಿರಸ್ಕರಿಸಲಿದ್ದಾರೆ ಎಂದು ಭಾನುವಾರ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.