ADVERTISEMENT

ಬೆಲೆ ಏರಿಕೆ ವಿರೋಧಿಸಿ ಪ್ರಧಾನಿ ಮನೆ ಎದುರು ಕಾಂಗ್ರೆಸ್‌ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2021, 19:01 IST
Last Updated 2 ಸೆಪ್ಟೆಂಬರ್ 2021, 19:01 IST
ನವದೆಹಲಿಯಲ್ಲಿ ಇಂಧನ ಬೆಲೆ ಏರಿಕೆ ಖಂಡಿಸಿ ಪ್ರತಿಭಟಿಸಿದ ಭಾರತೀಯ ಯುವ ಕಾಂಗ್ರೆಸ್ ಘಟಕದ ಕಾರ್ಯಕರ್ತರನ್ನು ಕೇಂದ್ರ ಮೀಸಲು ಪೊಲೀಸ್ ಪಡೆ ಸಿಬ್ಬಂದಿ ಬಂಧಿಸಿದರು – ಎಎಫ್‌ಪಿ ಚಿತ್ರ
ನವದೆಹಲಿಯಲ್ಲಿ ಇಂಧನ ಬೆಲೆ ಏರಿಕೆ ಖಂಡಿಸಿ ಪ್ರತಿಭಟಿಸಿದ ಭಾರತೀಯ ಯುವ ಕಾಂಗ್ರೆಸ್ ಘಟಕದ ಕಾರ್ಯಕರ್ತರನ್ನು ಕೇಂದ್ರ ಮೀಸಲು ಪೊಲೀಸ್ ಪಡೆ ಸಿಬ್ಬಂದಿ ಬಂಧಿಸಿದರು – ಎಎಫ್‌ಪಿ ಚಿತ್ರ   

ನವದೆಹಲಿ: ಅಡುಗೆ ಅನಿಲ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್‌ಮಹಿಳಾ ಘಟಕದ ಕಾರ್ಯಕರ್ತರು ಗುರುವಾರ ಪ್ರಧಾನಿ ನರೇಂದ್ರ ಮೋದಿ ನಿವಾಸದ ಎದುರು ಪ್ರತಿಭಟನೆ ನಡೆಸಿದರು.

ಕಾಂಗ್ರೆಸ್‌ ಮಹಿಳಾ ಘಟಕದ ಹಂಗಾಮಿ ಅಧ್ಯಕ್ಷೆ ನೆಟ್ಟಾ ಡಿಸೋಜಾ ನೇತೃತ್ವದಲ್ಲಿ ಪಕ್ಷದ ಕಾರ್ಯಕರ್ತರು ಲೋಕ ಕಲ್ಯಾಣ ಮಾರ್ಗದಲ್ಲಿನ ಪ್ರಧಾನಿ ನಿವಾಸದ ಎದುರು ಪ್ರತಿಭಟಿಸಿ, ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಪ್ರಧಾನಿ ನಿವಾಸದ ರಕ್ಷಣೆಗೆ ನಿಯೋಜಿಸಿದ್ದ ಭದ್ರತಾ ಸಿಬ್ಬಂದಿ ಮುನ್ನೆಚ್ಚರಿಕೆ ಕ್ರಮವಾಗಿ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರನ್ನು ಸುತ್ತುವರಿದರು.

ADVERTISEMENT

ಅಡುಗೆ ಅನಿಲ ಬೆಲೆ ಏರಿಕೆಯ ವಿರುದ್ಧ ಪ್ರತಿಭಟನೆ ನಡೆಸಿದ್ದಕ್ಕಾಗಿ ಪೊಲೀಸರು ಪಕ್ಷದ ಮಹಿಳಾ ಘಟಕದ ಹಂಗಾಮಿ ಅಧ್ಯಕ್ಷರು ಮತ್ತು ಪದಾಧಿಕಾರಿಗಳನ್ನು ಬಂಧಿಸಿದ್ದಾರೆ ಎಂದು ಕಾಂಗ್ರೆಸ್ಮಹಿಳಾ ಘಟಕ ಆರೋಪಿಸಿದೆ.

ಪೆಟ್ರೋಲಿಯಂ ಸಚಿವಾಲಯದ ಮುಂದೆ ಪ್ರತಿಭಟನೆ

ಅಡುಗೆ ಅನಿಲ ಸೇರಿದಂತೆ ಇಂಧನ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಯುವ ಘಟಕವು ಪೆಟ್ರೋಲಿಯಂ ಸಚಿವಾಲಯದ ಎದುರು ಗುರುವಾರ ಪ್ರತಿಭಟನೆ ನಡೆಸಿತು.

ರೈಸಿನಾ ರಸ್ತೆಯಲ್ಲಿರುವ ಭಾರತೀಯ ಯುವ ಕಾಂಗ್ರೆಸ್ ಕಚೇರಿಯಿಂದ ಹೊರಟ ಮೆರವಣಿಗೆಯನ್ನು ಪೊಲೀಸರು ಪೆಟ್ರೋಲಿಯಂ ಸಚಿವಾಲಯವು ಇರುವ ಶಾಸ್ತ್ರಿ ಭವನದ ಮುಂದೆ ಬ್ಯಾರಿಕೇಡ್‌ ಹಾಕಿ ತಡೆದರು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಯುವ ಕಾಂಗ್ರೆಸ್‌ ಅಧ್ಯಕ್ಷ ಬಿ.ವಿ.ಶ್ರೀನಿವಾಸ್, ‘ದೇಶದ ಜನರು ಹಣದುಬ್ಬರದಿಂದ ಬಳಲುತ್ತಿದ್ದಾರೆ.ಹಣದುಬ್ಬರ ನಿರಂತರವಾಗಿ ಏರುತ್ತಿದೆ. ಆದರೆ ಮೋದಿ ಸರ್ಕಾರ ತೆರಿಗೆ ಸಂಗ್ರಹದಲ್ಲಿ ನಿರತವಾಗಿದೆ. ಅಡುಗೆ ಅನಿಲ ಸಿಲಿಂಡರ್ ಬೆಲೆ ಶೀಘ್ರದಲ್ಲೇ ₹1,000 ದಾಟಲಿದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯೂ ಏರುತ್ತಿದೆ’ ಎಂದು ಕಿಡಿಕಾರಿದರು.

‘ಮೋದಿ ಸರ್ಕಾರವು ನಾಗರಿಕರಿಗೆ ದೊಡ್ಡ ಕನಸುಗಳನ್ನು ತೋರಿಸಿ ಅಧಿಕಾರಕ್ಕೇರಿತು. ಆದರೆ ಇಂದು ಬಡವರಿಗೆ ದುಬಾರಿಯಾಗಿರುವ ಅಡುಗೆ ಅನಿಲ ಸಿಲಿಂಡರ್‌ಗಳನ್ನು ಖರೀದಿಸುವುದು ಕಷ್ಟವಾಗಿದೆ’ ಎಂದರು.

ಹೋರಾಟ: ಸಮಿತಿ ರಚನೆ
ನವದೆಹಲಿ:
ರಾಷ್ಟ್ರೀಯ ಸಮಸ್ಯೆಗಳ ಕುರಿತು ನಿರಂತರ ಆಂದೋಲನಗಳನ್ನು ನಡೆಸಲು ಕಾಂಗ್ರೆಸ್ ಪಕ್ಷವು ಪ್ರಿಯಾಂಕಾ ಗಾಂಧಿ ಜತೆಗೆ ಉನ್ನತ ಮಟ್ಟದ ಸಮಿತಿ ರಚಿಸಿದೆ. ಬಿಜೆಪಿಯ ಕಟು ಹಿಂದುತ್ವ ರಾಜಕಾರಣದ ಟೀಕಾಕಾರರಾದ ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಅವರನ್ನು ಸಮಿತಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.

ಪ್ರಿಯಾಂಕಾ ಹೊರತುಪಡಿಸಿ, ಒಂಬತ್ತು ಸದಸ್ಯರ ಸಮಿತಿಯಲ್ಲಿ ಸಂಸದ ಉತ್ತಮ್ ಕುಮಾರ್ ರೆಡ್ಡಿ, ರಾಜ್ಯಸಭಾ ಸಂಸದ ರಿಪುನ್ ಬೋರಾ, ಮನೀಶ್ ಚತ್ರಥ, ಬಿ.ಕೆ ಹರಿಪ್ರಸಾದ್, ಉದಿತ್ ರಾಜ್, ರಾಗಿಣಿ ನಾಯಕ್ ಮತ್ತು ಜುಬೇರ್ ಖಾನ್ ಇದ್ದಾರೆ.

ರಾಷ್ಟ್ರೀಯ ಸಮಸ್ಯೆಗಳನ್ನು ಕೈಗೆತ್ತಿಕೊಳ್ಳಲಿರುವ ಈ ಸಮಿತಿಯಲ್ಲಿ ಪ್ರಿಯಾಂಕಾ ಗಾಂಧಿ ಅವರ ಕರಡು ರಚನೆಯು ಮಹತ್ವ ಪಡೆದುಕೊಂಡಿದೆ.

ಗುರುವಾರ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿರುವ ಪ್ರಿಯಾಂಕಾ ಗಾಂಧಿ ವಾದ್ರಾ, ಬಿಜೆಪಿ ಸರ್ಕಾರವು ಪ್ರತಿ ತಿಂಗಳು ಅಡುಗೆ ಅನಿಲ ಸಿಲಿಂಡರ್‌ಗಳ ಬೆಲೆಯನ್ನು ಹೆಚ್ಚಿಸುತ್ತಿದೆ. ಮೂರು-ನಾಲ್ಕು ತಿಂಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು 60 ರಿಂದ 70 ಬಾರಿ ಹೆಚ್ಚಿಸಲಾಗಿದೆ ಎಂದು ಕಿಡಿಕಾರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.