ADVERTISEMENT

ರಸ್ತೆ ಬದಿ ಅಂಗಡಿಯಲ್ಲಿ ಟೀ ಮಾಡಿದ ಮಹುವಾ: ಎಲ್ಲೆಡೆ ಹರಿದಾಡಿದೆ ವಿಡಿಯೊ

​ಪ್ರಜಾವಾಣಿ ವಾರ್ತೆ
Published 12 ಜನವರಿ 2023, 6:21 IST
Last Updated 12 ಜನವರಿ 2023, 6:21 IST
   

ಕೋಲ್ಕತ್ತ: ಬಿಜೆಪಿಯ ವಿರುದ್ಧದ ಟೀಕೆಗಳಿಗೆ ಹೆಸರುವಾಸಿಯಾಗಿರುವ ತೃಣಮೂಲ ಕಾಂಗ್ರೆಸ್‌ ಸಂಸದೆ ಮಹುವಾ ಮೊಯಿತ್ರಾ ಈಗ ರಸ್ತೆ ಬದಿಯ ಚಹಾದಂಗಡಿಯಲ್ಲಿ ಕಾಣಿಸಿಕೊಂಡು ಸುದ್ದಿಯಾಗಿದ್ದಾರೆ.

ಅಂಗಡಿಯೊಂದರಲ್ಲಿ ಚಹಾ ಮಾಡುತ್ತಿರುವ ವಿಡಿಯೊವನ್ನು ಮಹುವಾ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ‘ಇದು ನನ್ನನ್ನು ಎಲ್ಲಿಗೆ ಕೊಂಡೊಯ್ಯುವುದೋ’ ಎಂದು ಅವರು ಮಾರ್ಮಿಕವಾದ ಸಾಲುಗಳನ್ನು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ. ಈ ಮೂಲಕ ಬಾಲ್ಯದಲ್ಲಿ ಚಾಯ್‌ವಾಲಾ ಆಗಿ ಕೆಲಸ ಮಾಡಿದ್ದೆ ಎಂದು ಹೇಳಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಪರೋಕ್ಷವಾಗಿ ಗೇಲಿ ಮಾಡಿದ್ದಾರೆ.

ತಾವು ಪ್ರತಿನಿಧಿಸುವ ಲೋಕಸಭಾ ಕ್ಷೇತ್ರವಾದ ಕೃಷ್ಣಾನಗರದ ಅಂಗಡಿಯೊಂದರಲ್ಲಿ ಮಹುವಾ ಚಹಾ ಮಾಡಿದ್ದಾರೆ ಎನ್ನಲಾಗಿದ್ದು, ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಮಹುವಾ ಚಹಾ ಮಾಡುವಾಗ ಅವರ ಸುತ್ತ ಹಲವರು ಕುಳಿತಿರುವುದು, ಚಹಾದ ಪಾತ್ರೆಗೆ ಅವರು ಸಕ್ಕರೆ ಸೇರಿಸುವುದು ವಿಡಿಯೊದಲ್ಲಿದೆ.

ADVERTISEMENT

ಪಶ್ಚಿಮ ಬಂಗಾಳದಲ್ಲಿ ಈ ವರ್ಷ ಪಂಚಾಯಿತಿ ಚುನಾವಣೆಗಳು ನಡೆಯಲಿವೆ. ಇದಕ್ಕಾಗಿ ತೃಣಮೂಲ ಕಾಂಗ್ರೆಸ್‌ ಸರ್ಕಾರವು ‘ದೀದಿರ್‌ ಸುರಕ್ಷಾ ಕವಚ’ ಎಂಬ ಅಭಿಯಾನ ಆರಂಭಿಸಿದೆ. ಇದರ ಪ್ರಚಾರದ ವೇಳೆ ಮಹುವಾ ಚಹಾ ಮಾಡಿ ಸುದ್ದಿಯಾಗಿದ್ದಾರೆ.

ಮಹುವಾ ಮೊಯಿತ್ರಾ ಅವರ ವಿಡಿಯೊ ಮತ್ತು ಅದಕ್ಕೆ ಅವರು ನೀಡಿದ್ದ ಶೀರ್ಷಿಕೆಗೆ ಪ್ರತಿಕ್ರಿಯಿಸಿದ ಬಿಜೆಪಿ ಮಾಜಿ ನಾಯಕ, ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಮೊಮ್ಮಗ ಚಂದ್ರ ಕುಮಾರ್ ಬೋಸ್, ‘ಅದು ನಿಮ್ಮನ್ನು ಎಲ್ಲಿಗೆ ಕರೆದೊಯ್ಯುತ್ತದೆ ಎಂಬು ನಿಮಗೆ ಚನ್ನಾಗಿ ಗೊತ್ತಿದೆ’ ಎಂದು ಮಾರ್ಮಿಕವಾಗಿ ಹೇಳಿದ್ದಾರೆ. 'ಎಂಬಿಎ ಚಾಯ್‌ವಾಲಿ' ಎಂದು ಮತ್ತೊಬ್ಬ ಟ್ವಿಟರ್‌ ಬಳಕೆದಾರರು ಕರೆದಿದ್ದಾರೆ.

ಇವುಗಳನ್ನೂ ಓದಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.