ADVERTISEMENT

‍ಪ್ರಶ್ನೆ ಕೇಳಲು ಹಣ ಪಡೆದಿರುವ ಆರೋಪ | ಸಭ್ಯತೆ ಇದ್ದರೆ ತನಿಖೆಗೆ ಸಿದ್ಧ: ಮಹುವಾ

ಪಿಟಿಐ
Published 3 ನವೆಂಬರ್ 2023, 16:03 IST
Last Updated 3 ನವೆಂಬರ್ 2023, 16:03 IST
ಮಹುವಾ ಮೊಯಿತ್ರಾ
ಮಹುವಾ ಮೊಯಿತ್ರಾ   

ಕೋಲ್ಕತ್ತ: ಸಂಸತ್ತಿನಲ್ಲಿ ಪ್ರಶ್ನೆ ಕೇಳಲು ಹಣ ಪಡೆದಿದ್ದರು ಎಂದು ತಮ್ಮ ವಿರುದ್ಧ ಬಂದಿರುವ ಆರೋಪದ ಕುರಿತ ವಿಚಾರಣೆಗೆ ಸಹಕರಿಸಲು ಸಿದ್ಧರಿರುವುದಾಗಿ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಹೇಳಿದ್ದಾರೆ. ಆದರೆ, ಸಭ್ಯತೆಯನ್ನು ಕಾಯ್ದುಕೊಳ್ಳುವ ಅಗತ್ಯವಿದೆ ಎಂದು ಶುಕ್ರವಾರ ಹೇಳಿದ್ದಾರೆ.

ಲೋಕಸಭೆಯ ನೀತಿ ಸಮಿತಿಯ ಸಭೆಯಲ್ಲಿ ತಮ್ಮನ್ನು ಗುರಿಯಾಗಿಸಿಕೊಂಡು ಅಪಮಾನಕರ ರೀತಿಯಲ್ಲಿ ಪ್ರಶ್ನೆಗಳನ್ನು ಕೇಳಲಾಗಿತ್ತು ಎಂದು ಮಹುವಾ ಅವರು ಗುರುವಾರ ಆರೋಪಿಸಿದ್ದರು.

ನೀತಿ ಸಮಿತಿಯ ವಿಚಾರಣೆಯು ಒಂದು ರಾಜಕೀಯ ದಾಳಿ, ಇದರ ಏಕೈಕ ಉದ್ದೇಶ ತಮ್ಮನ್ನು ಸಂಸತ್ತಿನಿಂದ ಅಮಾನತು ಮಾಡುವುದು ಎಂದು ಪಿಟಿಐಗೆ ನೀಡಿರುವ ಸಂದರ್ಶನದಲ್ಲಿ ಮಹುವಾ ದೂರಿದ್ದಾರೆ. ‘ನಾನು ವಿಚಾರಣೆಗೆ ಯಾವಾಗಲೂ ಸಿದ್ಧ. ಆದರೆ ಕೀಳು ಹಾಗೂ ನಿಂದನೀಯ ಪ್ರಶ್ನೆಗಳಿಂದ ರಕ್ಷಣೆ ಬೇಕು. ಈ ವಿಚಾರವಾಗಿ ಲೋಕಸಭಾ ಸ್ಪೀಕರ್‌ಗೆ ಪತ್ರ ಬರೆದಿದ್ದೇನೆ’ ಎಂದಿದ್ದಾರೆ.

ADVERTISEMENT

‘ಸ್ತ್ರೀಯರನ್ನು ಕಂಡರೆ ಆಗದ ಕೊಳಕು ಮನಃಸ್ಥಿತಿಯಿಂದ ರಕ್ಷಣೆ ಒದಗಿಸಬೇಕು ಎಂದು ನಾನು ಕೋರಿದ್ದೇನೆ’ ಎಂದು ತಿಳಿಸಿದ್ದಾರೆ. ತಾವು ಯಾವುದೇ ಕಾನೂನು ಬಾಹಿರ ಕೃತ್ಯ ಎಸಗಿಲ್ಲ ಎಂದು ಹೇಳಿದ್ದಾರೆ.

ಮಹುವಾ ಅವರು ಉದ್ಯಮಿ ದರ್ಶನ್ ಹೀರಾನಂದಾನಿ ಅವರ ಅಣತಿಯಂತೆ ತಮ್ಮ ಸಂಸತ್ ಖಾತೆಯ ಮೂಲಕ ಪ್ರಶ್ನೆಗಳನ್ನು ಕೇಳಿದ್ದಾರೆ, ತಮ್ಮ ಖಾತೆಯ ಲಾಗಿನ್ ವಿವರಗಳನ್ನು ಹೀರಾನಂದಾನಿ ಜೊತೆ ಹಂಚಿಕೊಂಡಿದ್ದಾರೆ ಎಂದು ಬಿಜೆಪಿ ಸಂಸದ ನಿಶಿಕಾಂತ್ ದುಬೆ ಆರೋಪಿಸಿದ್ದಾರೆ.

ನೀತಿ ಸಮಿತಿಯ ಸಭೆಯಲ್ಲಿ ಮಹುವಾ ಮತ್ತು ವಿರೋಧ ಪಕ್ಷಗಳ ಕೆಲವು ಸದಸ್ಯರು ಆಕ್ಷೇಪಾರ್ಹ ಪದಗಳನ್ನು ಬಳಸಿದ್ದರು ಎಂದು ಸಮಿತಿಯ ಅಧ್ಯಕ್ಷ ಬಿಜೆಪಿ ಸಂಸದ ವಿನೋದ್ ಕುಮಾರ್ ಸೋನಕರ್ ಅವರು ಆರೋಪಿಸಿದ್ದಾರೆ.

‘ನಾನು ಪ್ರತಿನಿಧಿಸುವ ಕ್ಷೇತ್ರವು ಒಂದು ಮೂಲೆಯಂತಹ ಪ್ರದೇಶ. ಸಂಸದರ ಲಾಗಿನ್ ವಿವರಗಳನ್ನು ಕನಿಷ್ಠ ಹತ್ತು ಮಂದಿ ಬಳಸುತ್ತಾರೆ. ನನ್ನ ದೂರವಾಣಿಗೆ ಬರುವ ಒಟಿಪಿ ಇಲ್ಲದೆ ಏನೂ ಮಾಡಲು ಸಾಧ್ಯವಿಲ್ಲ’ ಎಂದು ತಮ್ಮ ಲಾಗಿನ್‌ ವಿವರಗಳನ್ನು ಇನ್ನೊಬ್ಬರಿಗೆ ನೀಡಲಾಗಿತ್ತು ಎಂಬ ಆರೋಪದ ಬಗ್ಗೆ ಮಹುವಾ ಉತ್ತರಿಸಿದ್ದಾರೆ.

ಹೀರಾನಂದಾನಿ ಅವರಿಂದ ಕಾನೂನುಬಾಹಿರವಾಗಿ ನೆರವು ಪಡೆದ ಆರೋಪಕ್ಕೆ ಸಂಬಂಧಿಸಿದಂತೆ ಮಹುವಾ, ‘ಹೀರಾನಂದಾನಿ ನನ್ನ ಬಹುಕಾಲದ ಸ್ನೇಹಿತ’ ಎಂದಿದ್ದಾರೆ. ‘ನಾನು ಸಂಸದೆ ಆಗುವುದಕ್ಕಿಂತ ಮೊದಲಿನಿಂದಲೂ ಅವರು ನನ್ನ ಸ್ನೇಹಿತ. ನನ್ನ ಸ್ನೇಹಿತ ನನಗೆ ಹುಟ್ಟುಹಬ್ಬಕ್ಕೆ ಆಲಂಕಾರಿಕ ವಸ್ತ್ರವೊಂದನ್ನು ಉಡುಗೊರೆಯಾಗಿ ನೀಡಿದರೆ ಅದೇನು ಅಪರಾಧವೇ’ ಎಂದು ಪ್ರಶ್ನಿಸಿದ್ದಾರೆ.

‘ಹೀರಾನಂದಾನಿ ಅವರನ್ನು ನೀತಿ ಸಮಿತಿಯು ಏಕೆ ವಿಚಾರಣೆಗೆ ಕರೆಸುತ್ತಿಲ್ಲ? ಅವರನ್ನು ಪಾಟೀಸವಾಲಿಗೆ ಗುರಿಪಡಿಸಲು ನನಗೆ ಅವಕಾಶ ಏಕೆ ಕೊಡುತ್ತಿಲ್ಲ’ ಎಂದು ಕೂಡ ಪ್ರಶ್ನಿಸಿದ್ದಾರೆ.

ಬಿಜೆಪಿ ಪಕ್ಷಕ್ಕೆ ಅದರ ಸಂಸದರಿಗೆ ನಿರ್ದಿಷ್ಟ ಉದ್ಯಮ ಸಮೂಹ ಹಣ ಕೊಡಬಹುದು. ನನ್ನ ಹಳೆಯ ಸ್ನೇಹಿತನೊಬ್ಬ ನನ್ನ ಹುಟ್ಟುಹಬ್ಬಕ್ಕೆ ಉಡುಗೊರೆ ಕೊಡಬಾರದೇ?
– ಮಹುವಾ ಮೊಯಿತ್ರಾ ಟಿಎಂಸಿ ಸಂಸದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.