ADVERTISEMENT

ಪಿತೋರ್‌ಗಡ: ಅಗತ್ಯ ಸಾಮಗ್ರಿ ಸಾಗಣೆಗೆ ಹೆಲಿಕಾಪ್ಟರ್‌ ಬಳಸಿ

ಉತ್ತರಾಖಂಡ ಹೈಕೋರ್ಟ್‌ ಸೂಚನೆ

ಪಿಟಿಐ
Published 12 ಅಕ್ಟೋಬರ್ 2018, 17:57 IST
Last Updated 12 ಅಕ್ಟೋಬರ್ 2018, 17:57 IST

ನೈನಿತಾಲ್‌: ‘ಉತ್ತರಾಖಂಡದ ಪಿತೋರ್‌ಗಡ ಜಿಲ್ಲೆಯ ಕುಗ್ರಾಮಗಳಿಗೆ ಅಗತ್ಯ ವಸ್ತುಗಳನ್ನು, ಬೇಡಿಕೆ ಬಂದ 24 ಗಂಟೆಗಳೊಳಗೆ ಹೆಲಿಕಾಪ್ಟರ್‌ ಮೂಲಕ ತಲುಪಿಸಲು ಕ್ರಮ ಕೈಗೊಳ್ಳಿ’ ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಸೂಚಿಸಿದೆ.

ಚಳಿಗಾಲ ಪೂರ್ತಿ ಈ ಪ್ರಕ್ರಿಯೆಯನ್ನು ಮುಂದುವರಿಸಬೇಕು ಎಂದೂ ಹೇಳಿದೆ.

ಪಿತೋರ್‌ಗಡ ಜಿಲ್ಲೆಯ ವಿವಿಧ ಗ್ರಾಮಗಳ ಜನರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಉತ್ತರಾಖಂಡ ಹೈಕೋರ್ಟ್‌ನ ಹಂಗಾಮಿ ನ್ಯಾಯಮೂರ್ತಿ ರಾಜೀವ್‌ ಶರ್ಮಾ ಮತ್ತು ನ್ಯಾಯಮೂರ್ತಿ ಮನೋಜ್‌ ತಿವಾರಿ ಅವರನ್ನೊಳಗೊಂಡ ನ್ಯಾಯಪೀಠ ಈ ಆದೇಶ ನೀಡಿದೆ.

ADVERTISEMENT

ಹದಗೆಟ್ಟಿರುವ ರಸ್ತೆಗಳಿಂದಾಗಿ ಇಲ್ಲಿನ ಗ್ರಾಮಗಳಿಗೆ ಅಗತ್ಯ ವಸ್ತುಗಳ ಸಾಗಾಟ ನಡೆಯುತ್ತಿಲ್ಲ ಎಂದು ಜನರು ಅರ್ಜಿಯಲ್ಲಿ ಅಳಲು ತೋಡಿಕೊಂಡಿದ್ದರು.

‘ಅಕ್ಕಿ, ತರಕಾರಿ, ಹಾಲು, ತುಪ್ಪ, ಸೀಮೆ ಎಣ್ಣೆ ಸೇರಿದಂತೆ ದಿನಬಳಕೆಯ ವಸ್ತುಗಳನ್ನು ಹೆಲಿಕಾಪ್ಟರ್‌ ಮೂಲಕ ತಲುಪಿಸಬೇಕು’ ಎಂದು ನ್ಯಾಯಪೀಠ ಆದೇಶದಲ್ಲಿ ಹೇಳಿದೆ.‌

ಆದೇಶವನ್ನು ಜಾರಿಗೊಳಿಸಲು, ಭಾರತ –ಟಿಬೆಟ್ ಗಡಿ ಪೊಲೀಸ್ (ಐಟಿಬಿಪಿ) ಮತ್ತು ವಾಯು ಪಡೆಯ ಸಹಕಾರ ಪಡೆಯುವಂತೆಯೂ ಸೂಚಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.