ನವದೆಹಲಿ: ಡ್ರಗ್ಸ್ ಪೆಡ್ಲರ್‌ಗಳ ವಿರುದ್ಧ ಕ್ರಮಕ್ಕೆ ಮುಂದಾಗಿರುವ ಸಿಬಿಐ, ಮಾದಕವಸ್ತುಗಳ ನಿಯಂತ್ರಣ ಘಟಕದ (ಎನ್‌ಸಿಬಿ) ಜತೆಗೂಡಿ ವಿವಿಧ ರಾಜ್ಯಗಳಲ್ಲಿ ಗುರುವಾರ ಕಾರ್ಯಾಚರಣೆ ನಡೆಸಿದ್ದು, 175 ಜನರನ್ನು ಬಂಧಿಸಿದೆ.
ಭಾರಿ ಪ್ರಮಾಣದ ಡ್ರಗ್ಸ್ ಜಪ್ತಿ ಮಾಡಲಾಗಿದ್ದು, 127 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.
‘ಆಪರೇಷನ್ ಗರುಡ’ ಹೆಸರಿನ ಈ ಕಾರ್ಯಾಚರಣೆಗೆ ಇದೇ ವಾರದ ಆರಂಭದಲ್ಲಿ ಚಾಲನೆ ನೀಡಲಾಗಿದೆ. ವಿವಿಧ ರಾಜ್ಯಗಳ ಪೊಲೀಸರು, ಎನ್‌ಸಿಬಿ ಸಹಯೋಗದಲ್ಲಿ ಕೈಗೊಂಡಿರುವ ಈ ಕಾರ್ಯಾಚರಣೆಗೆ ಇಂಟರ್‌ಪೋಲ್ ಸಹ ಕೈಜೋಡಿಸಿದೆ.
ಪಂಜಾಬ್, ಹರಿಯಾಣ, ಗುಜರಾತ್, ಮಹಾರಾಷ್ಟ್ರ, ತಮಿಳುನಾಡು, ದೆಹಲಿ ಹಾಗೂ ಮಣಿಪುರಗಳಲ್ಲಿ ಕೈಗೊಂಡಿರುವ ಶೋಧ ಕಾರ್ಯ ಇನ್ನೂ ಮುಂದುವರಿದಿದೆ. ಡ್ರಗ್ಸ್ ಮಾರಾಟದಲ್ಲಿ ತೊಡಗಿದ್ದಾರೆ ಎನ್ನಲಾದ 6,600 ಶಂಕಿತರ ಚಲನವಲನಗಳ ಮೇಲೆ ನಿಗಾ ಇರಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
5.125 ಕೆಜಿ ಹೆರಾಯಿನ್, 33.936 ಕೆಜಿ ಗಾಂಜಾ, 3.29 ಕೆಜಿ ಚರಸ್, 1,365 ಗ್ರಾಂ ಮೆಫೆಡ್ರೊನ್, 946 ಅಲ್ಪ್ರಾಝೋಲಂ ಮಾತ್ರೆಗಳು, 0.9 ಗ್ರಾಮ ಎಕ್‌ಸ್ಟಸಿ ಮಾತ್ರೆಗಳು, 1,150 ಕೆಜಿ ಅಫೀಮು ಸೇರಿದಂತೆ ವಿವಿಧ ಮಾದಕವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸಿಬಿಐ ವಕ್ತಾರ ತಿಳಿಸಿದ್ದಾರೆ.
‘ಡ್ರಗ್ಸ್ ಮಾರಾಟ ಜಾಲವನ್ನು ಮಟ್ಟ ಹಾಕಲು ಜಾಗತಿಕವಾಗಿ ಕಾರ್ಯಾಚರಣೆ ಆರಂಭಿಸಲಾಗಿದೆ. ಈ ಜಾಲದ ಬಗ್ಗೆ ಇಂಟರ್‌ಪೋಲ್, ಕೇಂದ್ರೀಯ ತನಿಖಾ ಸಂಸ್ಥೆಗಳಿಗೆ ಕ್ಷಿಪ್ರ ಮಾಹಿತಿ ನೀಡುತ್ತಿದೆ’.
‘ಹಿಂದೂಮಹಾಸಾಗರ ಪ್ರದೇಶದಲ್ಲಿ ಡ್ರಗ್ಸ್ ಹಾಗೂ ಮನೋರೋಗ ಚಿಕಿತ್ಸೆಯಲ್ಲಿ ಬಳಸುವ ಪದಾರ್ಥಗಳ ಕಳ್ಳಸಾಗಣೆ ಮಾಡಲಾಗುತ್ತಿದೆ ಎಂಬ ಮಾಹಿತಿ ಇತ್ತು. ಇಂಥ ಡ್ರಗ್ಸ್ ಸಾಗಾಟದ ಮೇಲೆ ಕಣ್ಗಾವಲಿರಿಸಲಾಗಿತ್ತು’ ಎಂದು ಅಧಿಕಾರಿಗಳು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.