ಜೈಪುರ: ರಾಜಸ್ಥಾನದ ಕರಣ್‌ಪುರ ವಿಧಾನಸಭೆ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಸಚಿವ ಸುರೇಂದ್ರ ಪಾಲ್ ಸಿಂಗ್ ಟಿ.ಟಿ ಅವರು ಕಾಂಗ್ರೆಸ್ ಅಭ್ಯರ್ಥಿ ರೂಪಿಂದರ್ ಸಿಂಗ್ ಕೂನರ್ ವಿರುದ್ಧ ಪರಾಭವಗೊಂಡಿದ್ದು, ಆಡಳಿತಾರೂಢ ಪಕ್ಷ ಬಿಜೆಪಿಗೆ ಭಾರಿ ಮುಜುಗರವಾಗಿದೆ.
ಸೋಮವಾರ ಮತ ಎಣಿಕೆ ನಡೆದಿದ್ದು, ರೂಪಿಂದರ್ ಸಿಂಗ್ ಅವರು ಸುರೇಂದ್ರ ಪಾಲ್ ಸಿಂಗ್ ಅವರನ್ನು 12,570 ಮತಗಳ ಅಂತರದಿಂದ ಸೋಲಿಸಿದ್ದಾರೆ. ಜ.5ರಂದು ಮತದಾನ ನಡೆದಿತ್ತು.
ಮೊದಲ ಬಾರಿಗೆ ಶಾಸಕರಾಗಿ ಗೆದ್ದು ಮುಖ್ಯಮಂತ್ರಿಯಾಗಿ ಗಮನ ಸೆಳೆದಿರುವ ಭಜನ್ ಲಾಲ್ ಶರ್ಮಾ ಅವರಿಗೆ, ಕರಣ್‌ಪುರ ವಿಧಾನಸಭೆ ಕ್ಷೇತ್ರದ ಉಪಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯ ಸೋಲು ಭಾರಿ ಹಿನ್ನಡೆ ಎಂದೇ ವಿಶ್ಲೇಷಿಸಲಾಗುತ್ತಿದೆ.
ಸುರೇಂದ್ರ ಪಾಲ್ ಸಿಂಗ್ ಪರ ಕ್ಷೇತ್ರದಲ್ಲಿ ಭರ್ಜರಿ ಪ್ರಚಾರ ಕೈಗೊಂಡಿದ್ದ ಮುಖ್ಯಮಂತ್ರಿ ಶರ್ಮಾ, ‘ಡಬಲ್ ಎಂಜಿನ್ ಸರ್ಕಾರ ಇದ್ದರೆ ಅಭಿವೃದ್ಧಿಗೆ ಹೆಚ್ಚು ಅನುಕೂಲ’ ಎಂದಿದ್ದರಲ್ಲದೇ, ಆ ಭಾಗಕ್ಕೆ ಸಚಿವ ಸ್ಥಾನ ನೀಡಿದ್ದಾಗಿಯೂ ಹೇಳಿದ್ದರು.
ಚುನಾಯಿತರಾಗುವುದಕ್ಕೂ ಮೊದಲೇ ಸುರೇಂದ್ರ ಪಾಲ್ ಸಿಂಗ್ ಅವರನ್ನು ಮಂತ್ರಿಯನ್ನಾಗಿ ಮಾಡಿದಾಗ ಅದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದ ಕಾಂಗ್ರೆಸ್ ಪಕ್ಷ, ಚುನಾವಣಾ ಆಯೋಗಕ್ಕೆ ದೂರು ನೀಡಿತ್ತು.
‘ಸುರೇಂದ್ರ ಪಾಲ್ ಸಿಂಗ್ ಇನ್ನೂ ಚುನಾವಣೆಯಲ್ಲಿ ಗೆದ್ದೇ ಇಲ್ಲ. ಉಪಚುನಾವಣೆ ನಡೆದ ಕರಣ್‌ಪುರ ವಿಧಾನಸಭಾ ಕ್ಷೇತ್ರದಲ್ಲಿ ಮಾದರಿ ನೀತಿ ಸಂಹಿತೆಯೂ ಜಾರಿಯಾಗಿತ್ತು. ಅಂತಹ ಸಂದರ್ಭದಲ್ಲಿ ಸುರೇಂದ್ರ ಪಾಲ್ ಸಿಂಗ್ ಅವರನ್ನು ಮಂತ್ರಿಯನ್ನಾಗಿ ಮಾಡುವುದು ಸರಿಯಲ್ಲ’ ಎಂದು ಕಾಂಗ್ರೆಸ್ ಪ್ರತಿಪಾದಿಸಿತ್ತು.
ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳ ಈ ಆಕ್ಷೇಪಕ್ಕೆ ಉದಾಸೀನ ತೋರಿದ್ದ ಬಿಜೆಪಿ, ಸುರೇಂದ್ರ ಪಾಲ್ ಸಿಂಗ್ ಅವರನ್ನು ಮಂತ್ರಿ ಸ್ಥಾನದಲ್ಲಿಯೇ ಮುಂದುವರಿಸಿದೆ. ಅವರು ರಾಜ್ಯ ಸಚಿವರಾಗಿದ್ದು (ಸ್ವತಂತ್ರ ಪ್ರಭಾರ), ಕೃಷಿ, ಮಾರುಕಟ್ಟೆ, ನೀರಾವರಿ, ಜಲಸಂಪನ್ಮೂಲ, ಅಲ್ಪಸಂಖ್ಯಾತರ ವ್ಯವಹಾರಗಳು ಹಾಗೂ ವಕ್ಫ್ ಖಾತೆಗಳನ್ನು ನೀಡಲಾಗಿದೆ.
ಕರಣ್‌ಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗುರ್ಮೀತ್ ಸಿಂಗ್ ಕೂನರ್ ಅವರು, ನವೆಂಬರ್ 15ರಂದು ನಿಧನರಾದ ಹಿನ್ನೆಲೆಯಲ್ಲಿ ಉಪಚುನಾವಣೆ ನಡೆದಿತ್ತು. ಗುರ್ಮೀತ್ ಸಿಂಗ್ ಅವರ ಪುತ್ರ ರೂಪಿಂದರ್ ಸಿಂಗ್ ಅವರನ್ನೇ ಕಾಂಗ್ರೆಸ್ ಕಣಕ್ಕಿಳಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.