ADVERTISEMENT

ಭದ್ರತಾ ಲೋಪ: ಪಂಜಾಬ್‌ನ ಫ್ಲೈಓವರ್‌ನಲ್ಲಿ 20 ನಿಮಿಷ ಸಿಲುಕಿದ ಪ್ರಧಾನಿ ಮೋದಿ

ಪಿಟಿಐ
Published 5 ಜನವರಿ 2022, 18:53 IST
Last Updated 5 ಜನವರಿ 2022, 18:53 IST
ಪ್ರಧಾನಿ ನರೇಂದ್ರ ಮೋದಿ ಅವರು ಪ್ರಯಾಣಿಸುತ್ತಿದ್ದ ವಾಹನ ಮತ್ತು ಭದ್ರತಾ ವಾಹನಗಳು ಫ್ಲೈಓವರ್‌ ಮೇಲೆ ಕಾದಿರುವುದು
ಪ್ರಧಾನಿ ನರೇಂದ್ರ ಮೋದಿ ಅವರು ಪ್ರಯಾಣಿಸುತ್ತಿದ್ದ ವಾಹನ ಮತ್ತು ಭದ್ರತಾ ವಾಹನಗಳು ಫ್ಲೈಓವರ್‌ ಮೇಲೆ ಕಾದಿರುವುದು   

ಚಂಡೀಗಡ/ನವದೆಹಲಿ: ಪಂಜಾಬ್‌ನ ಫಿರೋಜ್‌ಪುರದಲ್ಲಿ ನಡೆಯಬೇಕಿದ್ದ ಚುನಾವಣಾ ರ‍್ಯಾಲಿಯಲ್ಲಿ ಪಾಲ್ಗೊಳ್ಳಲು ರಸ್ತೆ ಮಾರ್ಗದಲ್ಲಿ ಹೋಗುತ್ತಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, ರಸ್ತೆತಡೆಯ ಕಾರಣ ಮೇಲ್ಸೇತುವೆಯಲ್ಲಿ 15–20 ನಿಮಿಷ ಸಿಲುಕಿದರು. ಮೋದಿ ಅವರು ಪಂಜಾಬ್‌ಗೆ ಭೇಟಿ ನೀಡುವುದನ್ನು ವಿರೋಧಿಸಿದ ರೈತ ಸಂಘಟನೆಯು ರಸ್ತೆತಡೆ ನಡೆಸಿತು. ಹೀಗಾಗಿ, ಮೋದಿ ತಮ್ಮ ಕಾರ್ಯಕ್ರಮವನ್ನು ರದ್ದುಪಡಿಸಿ ವಾಪಸಾದರು. ಇದು ರಾಜಕೀಯ ಜಟಾಪಟಿಗೆ ಕಾರಣವಾಗಿದೆ.

‘ಇದು ಅತ್ಯಂತ ದೊಡ್ಡ ಭದ್ರತಾ ಲೋಪ’ ಎಂದು ಕೇಂದ್ರ ಗೃಹ ಸಚಿವಾಲಯವು ಹೇಳಿದೆ. ‘ಲೋಪಕ್ಕೆ ಕಾರಣವೇನು ಎಂಬುದರ ಬಗ್ಗೆ ತಕ್ಷಣವೇ ವರದಿ ನೀಡಿ. ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಿ’ ಎಂದು ಪಂಜಾಬ್‌ ಸರ್ಕಾರಕ್ಕೆ, ಗೃಹ ಸಚಿವಾಲಯವು ಸೂಚನೆ ನೀಡಿದೆ.

ಫಿರೋಜ್‌ಪುರದಲ್ಲಿ ನಡೆಯಬೇಕಿದ್ದರ‍್ಯಾಲಿಯ ವೇದಿಕೆಯಲ್ಲಿಯೇ ಕೇಂದ್ರ ಸಚಿವ ಮನ್ಸುಖ್ ಮಾಂಡವೀಯ ಅವರು, ‘ಪ್ರಧಾನಿ ಅವರು ಭಾಗಿಯಾಗಬೇಕಿದ್ದ ಈ ರ‍್ಯಾಲಿಯನ್ನು ಅನ್ಯ ಕಾರಣಗಳಿಂದ ಮುಂದೂಡಲಾಗಿದೆ’ ಎಂದು ಘೋಷಿಸಿದರು.

‘ಪಾಕಿಸ್ತಾನದೊಂದಿಗೆ ಗಡಿ ಹಂಚಿಕೊಂಡಿರುವ ಫಿರೋಜ್‌ಪುರ ಜಿಲ್ಲೆಯ ಹುಸೈನಿವಾಲಾದಲ್ಲಿರುವ ಹುತಾತ್ಮರ ಸ್ಮಾರಕಕ್ಕೆ ಪ್ರಧಾನಿ ಭೇಟಿ ನೀಡಬೇಕಿತ್ತು. ಇದಕ್ಕಾಗಿ ಅವರು ಬಟಿಂಡಾ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದರು. ಅಲ್ಲಿಂದ ಹೆಲಿಕಾಪ್ಟರ್‌ನಲ್ಲಿ ಅವರು ಹುಸೈನಿವಾಲಾಕ್ಕೆ ಹೋಗಬೇಕಿತ್ತು. ಪ್ರತಿಕೂಲ ಹವಾಮಾನದ ಕಾರಣ ಹೆಲಿಕಾಪ್ಟರ್‌ನಲ್ಲಿ ಹೋಗಲು ಸಾಧ್ಯವಾಗಲಿಲ್ಲ. ಪ್ರಧಾನಿ 20 ನಿಮಿಷ ಕಾದರು. ವಾತಾವರಣ ತಿಳಿಯಾಗದ ಕಾರಣ, ರಸ್ತೆ ಮಾರ್ಗದಲ್ಲಿ ಹೋಗಲು ನಿರ್ಧರಿಸಲಾಯಿತು’ ಎಂದು ಗೃಹ ಸಚಿವಾಲಯವು ಹೇಳಿದೆ.

‘ಈ ಬಗ್ಗೆ ಪಂಜಾಬ್ ಪೊಲೀಸ್ ಮಹಾನಿರ್ದೇಶಕರಿಗೆ ಮಾಹಿತಿ ನೀಡಲಾಗಿತ್ತು. ಅವರು ಒಪ್ಪಿಗೆ ನೀಡಿದ ನಂತರವಷ್ಟೇ ಪ್ರಯಾಣ ಆರಂಭಿಸಲಾಯಿತು. ರಸ್ತೆಮಾರ್ಗದ ಎರಡು ಗಂಟೆಯ ಪ್ರಯಾಣದಲ್ಲಿ ಇನ್ನು 30 ಕಿ.ಮೀ. ಅಷ್ಟೆ ಕ್ರಮಿಸಬೇಕಿತ್ತು. ಆಗ ಮೇಲ್ಸೇತುವೆ ಮೇಲೆ ಪ್ರಧಾನಿ ಅವರಿದ್ದ ವಾಹನ ಮತ್ತು ಬೆಂಗಾವಲು ವಾಹನಗಳು ಹೋದವು. ಆದರೆ ಕೆಲವು ಪ್ರತಿಭಟನಕಾರರು ರಸ್ತೆತಡೆ ನಡೆಸಿದರು. ಆಗ ಪ್ರಧಾನಿ ಇದ್ದ ವಾಹನ ಮತ್ತು ಬೆಂಗಾವಲು ವಾಹನಗಳು ಮೇಲ್ಸೇತುವೆ ಮೇಲೆಯೇ 15–20 ನಿಮಿಷ ಸಿಲುಕಿದ್ದವು. ಅದನ್ನು ದೊಡ್ಡ ಭದ್ರತಾ ಲೋಪ ಎಂದು ಪರಿಗಣಿಸಿ, ಪ್ರಧಾನಿ ಅವರು ವಾಪಸಾಗಲು ನಿರ್ಧರಿಸಿದರು’ ಎಂದು ಗೃಹ ಸಚಿವಾಲಯವು ತನ್ನ ಪ್ರಕಟಣೆಯಲ್ಲಿ ವಿವರಿಸಿದೆ.

ಪಂಜಾಬ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಒಟ್ಟು ₹42,750 ಕೋಟಿ ಮೊತ್ತದ ವಿವಿಧ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಬೇಕಿತ್ತು.

ಬಟಿಂಡಾ ವಿಮಾನ ನಿಲ್ದಾಣಕ್ಕೆ ವಾಪಸಾದ ಮೋದಿ ಅವರು ಅಲ್ಲಿದ್ದ ಭದ್ರತಾ ಸಿಬ್ಬಂದಿಗೆ, ‘ನಾನು ಜೀವಂತವಾಗಿ ವಿಮಾನ ನಿಲ್ದಾಣಕ್ಕೆ ವಾಪಸ್ಸಾಗಿದ್ದೇನೆ. ಇದಕ್ಕಾಗಿ ನಿಮ್ಮ ಮುಖ್ಯಮಂತ್ರಿಗೆ ಧನ್ಯವಾದ ಹೇಳಿ’ ಎಂದು ಹೇಳಿದ್ದಾರೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ.

ಚಿತ್ರಗಳು ವೈರಲ್: ಪ್ರಧಾನಿ ನರೇಂದ್ರ ಮೋದಿ ಅವರಿದ್ದ ಟೊಯೊಟಾ ಫಾರ್ಚೂನರ್‌ ವಾಹನ ಮತ್ತು ಅವರ ಬೆಂಗಾವಲು ವಾಹನಗಳು ಮೇಲ್ಸೇತುವೆ ಮೇಲೆ ಸಿಲುಕಿರುವ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.