ADVERTISEMENT

ಲಕ್ಷದ್ವೀಪ: ಪ್ರವಾಸೋದ್ಯಮ ಉತ್ತೇಜನಕ್ಕೆ ಮಹತ್ವದ ಯೋಜನೆಗಳು

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2024, 19:56 IST
Last Updated 8 ಫೆಬ್ರುವರಿ 2024, 19:56 IST
..
..   

ಕವರತ್ತಿ (ಲಕ್ಷದ್ವೀಪ)  (ಪಿಟಿಐ): ಲಕ್ಷದ್ವೀಪದಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಸಲುವಾಗಿ ಕೇಂದ್ರ ಸರ್ಕಾರವು ಹಲವಾರು ಮಹತ್ತರ ಯೋಜನೆಗಳನ್ನು ಕೈಗೆತ್ತಿಕೊಂಡಿದೆ.

ಹೆಚ್ಚು ಪ್ರವಾಸಿಗರು ಲಕ್ಷದ್ವೀಪ‌ದ ಕಡೆಗೆ ಬರುವಂತೆ ಮಾಡಲು ಸರ್ಕಾರವು ಮೊದಲ ಹೆಜ್ಜೆಯಾಗಿ ಸಂಪರ್ಕ ವ್ಯವಸ್ಥೆಯನ್ನು ಸುಧಾರಿಸಲು ಮುಂದಾಗಿದೆ. ಫ್ಲೈ19 ಮತ್ತು ಸ್ಪೈಸ್‌ಜೆಟ್‌ ವಿಮಾನಯಾನ ಸಂಸ್ಥೆಗಳು ಅಗತ್ತಿ ದ್ವೀಪಕ್ಕೆ ವಿಮಾನಯಾನ ಸೇವೆ ಒದಗಿಸಲು ಅನುಮತಿಯನ್ನು ಪಡೆದುಕೊಂಡಿವೆ.

ಲಕ್ಷದ್ವೀಪದ ಅಧಿಕಾರಿಗಳೊಂದಿಗೆ ಬುಧವಾರ ಮಾತುಕತೆ ನಡೆಸಿರುವ ಇಂಡಿಗೋ ವಿಮಾನಯಾನ ಸಂಸ್ಥೆಯು ದ್ವೀಪಕ್ಕೆ ವಿಮಾನಸಂಪರ್ಕ ಕಲ್ಪಿಸಲು ಆಸಕ್ತಿ ವ್ಯಕ್ತಪಡಿಸಿದೆ.

ADVERTISEMENT

‘ಫ್ಲೈ19 ಸಂಸ್ಥೆಯು ತಿಂಗಳಾಂತ್ಯದಲ್ಲಿ ಲಕ್ಷದ್ವೀಪಕ್ಕೆ ವಿಮಾನಯಾನ ಸೇವೆಯನ್ನು ಆರಂಭಿಸಲಿದೆ’ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಪ್ರಸ್ತುತ ಅಲೈನ್ಸ್ ವಿಮಾನಯಾನ ಸಂಸ್ಥೆ ಮಾತ್ರ ಅಗತ್ತಿ ದ್ವೀಪಕ್ಕೆ ವಿಮಾನಯಾನ ಸೇವೆ ಒದಗಿಸುತ್ತಿದ್ದು, ಈ ಸೇವೆ ಬುಧವಾರ ಮತ್ತು ಭಾನುವಾರ ಮಾತ್ರ ಲಭ್ಯವಿರುತ್ತದೆ.

‘₹4,500 ಕೋಟಿ ವೆಚ್ಚದಲ್ಲಿ ವಿಮಾನ ನಿಲ್ದಾಣದ ರನ್‌ವೇಯನ್ನು 2,800 ಮೀಟರ್‌ವರೆಗೆ ವಿಸ್ತರಿಸುವ ಕಾಮಗಾರಿಯನ್ನು ಎಲ್‌&ಟಿ ಸಂಸ್ಥೆಗೆ ವಹಿಸಲಾಗಿದೆ’ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಸಂಪರ್ಕ ವ್ಯವಸ್ಥೆಯು ಸಮರ್ಪಕವಾದ ಬಳಿಕ, ಮುಂದಿನ ಹೆಜ್ಜೆಯಾಗಿ ಪ್ರವಾಸಿಗರಿಗೆ ವಸತಿ ಸೌಲಭ್ಯ ಕಲ್ಪಿಸಲು ಯೋಜನೆ ರೂಪಿಸಲಾಗುತ್ತದೆ. ಸುಹೇಲಿ, ಮಿನಿಕಾಯ್‌ ಮತ್ತು ಕಡ್ಮಟ್‌ ದ್ವೀಪಗಳಲ್ಲಿ ತಾಜ್‌ ರೆಸಾರ್ಟ್‌ಗಳನ್ನು ಆರಂಭಿಸುವುದಾಗಿ  ಟಾಟಾ ಸಂಸ್ಥೆಯು ಈಗಾಗಲೇ ಪ್ರಸ್ತಾವನೆಯನ್ನು ಸಲ್ಲಿಸಿದೆ. 2 ದ್ವೀಪಗಳಿಂದ ಅನುಮತಿಯು ಸಿಕ್ಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.