ಶಬರಿಮಲೆ: ಮಕರ ಜ್ಯೋತಿ ಪ್ರಯುಕ್ತ ಶಬರಿಮಲೆ ಬಾಗಿಲು ಭಾನುವಾರ ಸಂಜೆ ತೆರೆದಿದೆ.ಸಂಜೆ 5 ಗಂಟೆಗೆ ಪ್ರಧಾನ ಅರ್ಚರ ವಿ.ಎನ್.ವಾಸುದೇವನ್ ನಂಬೂದಿರಿ ಬಾಗಿಲು ತೆರೆದಿದ್ದಾರೆ. ಹದಿನೆಂಟು ಮೆಟ್ಟಿಲು ಇಳಿದು ದೀಪ ಬೆಳಗಿದ ನಂತರ ಅಯ್ಯಪ್ಪ ಭಕ್ತರಿಗೆ ಮೆಟ್ಟಿಲು ಹತ್ತಲು ಅನುಮತಿ ನೀಡಲಾಯಿತು.
ಶಬರಿಮಲೆಯತ್ತ ಭಕ್ತರ ಪ್ರವಾಹ ಹರಿದು ಬರುತ್ತಿದ್ದುಪಂಪಾದಲ್ಲಿ ಭಕ್ತರನ್ನು ನಿಯಂತ್ರಿಸಿ, ನಂತರ ಶಬರಿಮಲೆಯತ್ತ ಕಳುಹಿಸಿಕೊಡಲಾಗುತ್ತಿದೆ. ಅದೇ ವೇಳೆ ಶಬರಿಮಲೆಯಲ್ಲಿ ಜಾರಿಯಲ್ಲಿದ್ದ ನಿಷೇಧಾಜ್ಞೆಯನ್ನು ಜನವರಿ 6ರವರೆಗೆ ಮುಂದುವರಿಸಲಾಗಿದೆ.
ನಿಲಯ್ಕಲ್ ಮತ್ತು ಪಂಪಾದಲ್ಲಿ ತಡೆದು ನಿಲ್ಲಿಸಿದ್ದ ಭಕ್ತರನ್ನು ಭಾನುವಾರ ಮಧ್ಯಾಹ್ನ 12 ಗಂಟೆ ನಂತರ ಪಂಪಾದಿಂದ ಸನ್ನಿಧಾನಕ್ಕೆ ಬಿಡಲಾಗಿದೆ.ಮಕರ ಜ್ಯೋತಿಯ ಪ್ರಯುಕ್ತ ನಡೆಯುವತುಪ್ಪಾಭಿಷೇಕ ಸೋಮವಾರ ಮುಂಜಾನೆ 3.30ಕ್ಕೆ ತಂತ್ರಿ ಕಂದರಾರ್ ರಾಜೀವರು ಅವರ ನೇತೃತ್ವದಲ್ಲಿ ಆರಂಭವಾಗಲಿದೆ.
ಎರುಮೇಲಿಪೇಟ್ಟತುಳ್ಳಲ್ ಜನವರಿ 12ಕ್ಕೆ ನಡೆಯಲಿದೆ. ತಿರುವಾಭರಣ ಘೋಷಯಾತ್ರೆ 12ರಂದು ವಲಿಯಕೋವಿಲ್ ದೇವಸ್ಥಾನದಿಂದ ಹೊರಡಲಿದೆ.13ರಂದು ಪಂಪಾ ವಿಳಕ್ಕು ಮತ್ತು ಪಂಪಾ ಸದ್ಯ ನಡೆಯಲಿದ್ದು,14 ರಂದು ಮಕರ ಜ್ಯೋತಿ ದರ್ಶನವಾಗಲಿದೆ.
ಅದೇ ದಿನ ಸಂಜೆ 6.30ಕ್ಕೆ ತಿರುವಾಭರಣ ತೊಡಿಸಿ ದೀಪಾರಾಧನೆ ಆದ ನಂತರ ಮಕರ ಜ್ಯೋತಿ ದರ್ಶನವಾಗಲಿದೆ.
18ರಂದು ಬೆಳಗ್ಗೆ 10 ಗಂಟೆವರೆಗೆ ತುಪ್ಪಾಭಿಶೇಕ ನಡೆಯಲಿದೆ.ಆನಂತರ ಪಂದಳಂ ರಾಜಪ್ರತಿನಿಧಿಯ ಸಾನಿಧ್ಯದಲ್ಲಿ ಕಳಭಾಭಿಷೇಕವಾಗಲಿದೆ.19ರಂದು ಸಂಜೆ ದೀಪಾರಾಧನೆವರೆಗೆ ಮಾತ್ರ ಅಯ್ಯಪ್ಪ ಭಕ್ತರಿಗೆ ಪ್ರವೇಶವಿದೆ. ಅಂದು ರಾತ್ರಿ ಮಾಳಿಕಪ್ಪುರತ್ತುನಲ್ಲಿ ಗುರುತಿ ಪೂಜೆ ನಡೆಯಲಿದೆ. 20ರಂದು ಬೆಳಗ್ಗೆ 7 ಗಂಟೆಗೆ ಅಯ್ಯಪ್ಪ ಭಕ್ತರ ತೀರ್ಥಯಾತ್ರೆ ಮುಗಿದು ಬಾಗಿಲು ಮುಚ್ಚಲಾಗುವುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.