ನವದೆಹಲಿ: ಭಾರತದಾದ್ಯಂತ ಬಡ ಕುಟುಂಬಗಳಿಗೆ ಅಡುಗೆ ಅನಿಲವನ್ನು ಕೈಗೆಟುಕುವಂತೆ ಮಾಡಲು 2023-24ರ ಕೇಂದ್ರ ಬಜೆಟ್‌ನಲ್ಲಿ ನಿಬಂಧನೆಗಳನ್ನು ನೀಡಬೇಕೆಂದು ಒತ್ತಾಯಿಸಿ ರಾಷ್ಟ್ರೀಯ ನಾಗರಿಕ ಗುಂಪಾದ ವಾರಿಯರ್ ಮಾಮ್ಸ್ ಬುಧವಾರ ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರಿಗೆ ಪತ್ರ ಬರೆದಿದೆ.
ಈ ಪತ್ರವನ್ನು ಕಾಂಗ್ರೆಸ್ ಸಂಸದ ಶಶಿ ತರೂರ್, ಟಿಎಂಸಿ ಸಂಸದ ಸೌಗತ ರಾಯ್, ಡಿಎಂಕೆ ಸಂಸದ ಡಿ ರವಿಕುಮಾರ್, ನ್ಯಾಷನಲ್ ಕಾನ್ಫರೆನ್ಸ್ ಸಂಸದ ಫಾರೂಕ್ ಅಬ್ದುಲ್ಲಾ, ಎನ್‌ಸಿಪಿ ಸಂಸದ ವಂದನಾ ಚವಾಣ್ ಮತ್ತು ನ್ಯಾಯಮೂರ್ತಿ (ನಿವೃತ್ತ) ಅಂಜನಾ ಪ್ರಕಾಶ್ ಸೇರಿದಂತೆ 20 ಕ್ಕೂ ಹೆಚ್ಚು ಖ್ಯಾತ ವ್ಯಕ್ತಿಗಳಿಗೂ ಕಳುಹಿಸಲಾಗಿದೆ ಎಂದು ವಾರಿಯರ್ ಮಾಮ್ಸ್ ಹೇಳಿದೆ.
‘2016ರಲ್ಲಿ ಪ್ರಾರಂಭಿಸಲಾದ ಪ್ರಧಾನ ಮಂತ್ರಿ ಉಜ್ವಲ ಯೋಜನೆ (ಪಿಎಂಯುವೈ) ಅಡಿ 8 ಕೋಟಿ ಕುಟುಂಬಗಳಿಗೆ ಸಬ್ಸಿಡಿ ಸಹಿತ ಎಲ್‌ಪಿಜಿ ಸಂಪರ್ಕಗಳನ್ನು ನೀಡಲಾಗಿತ್ತು. ಆದರೆ ಪ್ರಸ್ತುತ 1,000 ಕ್ಕೂ ಹೆಚ್ಚು ಬೆಲೆಯ ಸಿಲಿಂಡರ್‌ಗಳನ್ನು ಕೊಳ್ಳಲು ಆಗುತ್ತಿಲ್ಲ. ಇಂದಿಗೂ ಸಾಕಷ್ಟು ಕುಟುಂಬಗಳು ಉರುವಲು ಅಥವಾ ಭರಣಿಗಳ ಮೇಲೆ ಅವಲಂಬಿತವಾಗಿದ್ದು, ಇದರಿಂದ ಅಸ್ತಮಾ, ಬ್ರಾಂಕೈಟಿಸ್, ಶಿಶುಮರಣ, ಬೆಳವಣಿಗೆ ಕುಂಠಿತದಂತಹ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಆದ್ದರಿಂದ ಸೂಕ್ತ ಸಬ್ಸಿಡಿಯೊಂದಿಗೆ ಅಡುಗೆ ಸಿಲಿಂಡರ್ ಮತ್ತು ರೀಫಿಲ್‌ಗಳನ್ನು ಒದಗಿಸಬೇಕು. ಪ್ರಸ್ತುತ ಇರುವ ಸಬ್ಸಿಡಿ ಮೊತ್ತವನ್ನು ₹200 ಗೆ ಹೆಚ್ಚಿಸಬೇಕು’ ಎಂದು ಪತ್ರದಲ್ಲಿ ಮನವಿ ಮಾಡಲಾಗಿದೆ.
‘ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಪುರಿ ಅವರಿಗೂ 5000 ಪೋಸ್ಟ್‌ಕಾರ್ಡ್‌ಗಳನ್ನು ಹಂಚಲಾಗಿದ್ದು, ಕೈಗೆಟಕುವ ಬೆಲೆಯಲ್ಲಿ ಎಲ್‌ಪಿಸಿ ಸಿಲಿಂಡರ್ ಅನ್ನು ನೀಡುವ ಕುರಿತು ಖಾತ್ರಿ ಪಡಿಸುವ ಮೂಲಕ ಮನೆಯಲ್ಲಾಗುವ ವಾಯುಮಾಲಿನ್ಯ ತಗ್ಗಿಸಬೇಕು’ ಎಂದು ವಾರಿಯರ್ ಮಾಮ್ಸ್ ತಂಡ ಹೇಳಿದೆ.
2023-24ರ ಕೇಂದ್ರ ಬಜೆಟ್ ಅನ್ನು ಫೆಬ್ರವರಿ 1 ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಂಸತ್ತಿನಲ್ಲಿ ಮಂಡಿಸಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.