ನವದೆಹಲಿ/ಮುಂಬೈ/ಭುವನೇಶ್ವರ: ಕೊವಿಡ್-19 ಲಸಿಕೆಯಕೊರತೆ ಶನಿವಾರವೂ ಮುಂದುವರಿದಿದೆ. ‘ತಕ್ಷಣವೇ ಕೋವಿಡ್ ಲಸಿಕೆಯನ್ನು ಪೂರೈಸಿ’ ಎಂದು ಹಲವು ರಾಜ್ಯಗಳು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿವೆ. ‘ಕೋವಿಡ್ ಲಸಿಕೆಯನ್ನು ಮುಕ್ತ ಮಾರುಕಟ್ಟೆಗೆ ಬಿಡುಗಡೆ ಮಾಡಿ’ ಎಂದು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಗ್ರಹಿಸಿದ್ದಾರೆ.
ಕೋವಿಡ್ ಹೊಸ ಪ್ರಕರಣಗಳು ವಿಪರೀತ ಪ್ರಮಾಣದಲ್ಲಿ ಏರಿಕೆ ಆಗಿರುವ ಕಾರಣ, ಹಲವು ರಾಜ್ಯಗಳಲ್ಲಿ ಆಸ್ಪತ್ರೆಗಳಲ್ಲಿ ಹಾಸಿಗೆ ಕೊರತೆ ಉಂಟಾಗಿದೆ. ಆಮ್ಲಜನಕ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಇದು ಕೇಂದ್ರ ಸರ್ಕಾರ ಮತ್ತು ವಿರೋಧ ಪಕ್ಷಗಳ ನಡುವೆ ಜಟಾಪಟಿಗೆ ಕಾರಣವಾಗಿದೆ.
‘ಭಾರತವು ಹೆಚ್ಚು ಲಸಿಕೆ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಅಗತ್ಯವಿರುವಷ್ಟು ಲಸಿಕೆ ತಯಾರಿಸಲು ದೇಶದ ಬೇರೆ ಬೇರೆ ಕಂಪನಿಗಳಿಗೆ ಕೇಂದ್ರ ಸರ್ಕಾರವು ನೆರವು ನೀಡಬೇಕು. ಬೇರೆ ಲಸಿಕೆಗಳ ಬಳಕೆ ಮತ್ತು ತಯಾರಿಕೆಗೆ ಅನುಮತಿ ನೀಡಬೇಕು. ಲಸಿಕೆಯನ್ನು ಮುಕ್ತ ಮಾರುಕಟ್ಟೆಗೆ ಬಿಡುಗಡೆ ಮಾಡಿ. ಆಗ ಶಕ್ತರು ಲಸಿಕೆ ಖರೀದಿಸಿ, ಹಾಕಿಸಿಕೊಳ್ಳುತ್ತಾರೆ. ಶಕ್ತರಲ್ಲದವರ ಕಡೆ ಸರ್ಕಾರ ಗಮನ ನೀಡಬಹುದು’ ಎಂದು ಪಟ್ನಾಯಕ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲಹೆ ನೀಡಿದ್ದಾರೆ.
ಆಮ್ಲಜನಕದ ಕೊರತೆ: ‘ರಾಜ್ಯಕ್ಕೆ ಅಗತ್ಯವಿರುವಷ್ಟು ಆಮ್ಲಜನಕ ಪೂರೈಕೆ ಆಗುತ್ತಿಲ್ಲ. ಕೇಂದ್ರ ಸರ್ಕಾರ ಹೇಳಿದಂತೆ ನಡೆದುಕೊಳ್ಳುತ್ತಿಲ್ಲ’ ಎಂದು ಮಹಾರಾಷ್ಟ್ರ ಸರ್ಕಾರ ಆರೋಪಿಸಿದೆ.
ಕಚ್ಚಾ ವಸ್ತುಗಳ ಕೊರತೆ ಇರುವುದರಿಂದಲೇ ದೇಶದಲ್ಲಿ ಲಸಿಕೆ ತಯಾರಿಸಲು ಸಾಧ್ಯವಾಗುತ್ತಿಲ್ಲ. ಕಚ್ಚಾವಸ್ತುಗಳ ರಫ್ತಿನ ಮೇಲೆ ಅಮೆರಿಕವು ನಿಷೇಧ ಹೇರಿದೆ. ಈ ವಸ್ತುಗಳ ರಫ್ತಿನ ಮೇಲಿನ ನಿಷೇಧವನ್ನು ತೆರವು ಮಾಡಲು ಕೇಂದ್ರ ಸರ್ಕಾರವು ಅಗತ್ಯ ಕ್ರಮ ತೆಗೆದುಕೊಳ್ಳಬೇಕು. ಮೋದಿ ಅವರು ಅಮೆರಿಕದ ಜತೆಗಿನ ಕ್ವಾಡ್ ಒಕ್ಕೂಟಕ್ಕೆ ಕೊಡುತ್ತಿರುವಷ್ಟೇ ಒತ್ತನ್ನು ಈ ವಿಚಾರದಲ್ಲೂ ನೀಡಬೇಕು ಎಂದು ಸಿಪಿಎಂ ಆಗ್ರಹಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.