ADVERTISEMENT

'Make in India' ಈಗ 'Fake in India': ಮೋದಿ ಸರ್ಕಾರವನ್ನು ಕುಟುಕಿದ ಕಾಂಗ್ರೆಸ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 14 ಅಕ್ಟೋಬರ್ 2024, 10:25 IST
Last Updated 14 ಅಕ್ಟೋಬರ್ 2024, 10:25 IST
<div class="paragraphs"><p>ಪ್ರಧಾನಿ ನರೇಂದ್ರ ಮೋದಿ ಹಾಗೂ ಕಾಂಗ್ರೆಸ್ ಧ್ವಜ</p></div>

ಪ್ರಧಾನಿ ನರೇಂದ್ರ ಮೋದಿ ಹಾಗೂ ಕಾಂಗ್ರೆಸ್ ಧ್ವಜ

   

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು 'ಮೇಕ್ ಇನ್ ಇಂಡಿಯಾ'ಗೆ ಚಾಲನೆ ನೀಡುವ ವೇಳೆ ಪ್ರಕಟಿಸಿದ್ದ ಉದ್ದೇಶಗಳು ಸುಳ್ಳುಗಳಾಗಿ ಬದಲಾಗಿವೆ. 'ಮೇಕ್ ಇನ್ ಇಂಡಿಯಾ' ಇದೀಗ 'ಫೇಕ್ ಇನ್ ಇಂಡಿಯಾ' ಆಗಿದೆ ಎಂದು ಕಾಂಗ್ರೆಸ್‌ ಸೋಮವಾರ ಟೀಕಿಸಿದೆ.

ಕೇಂದ್ರದ ಬಹುನಿರೀಕ್ಷಿತ ಕಾರ್ಯಕ್ರಮ ವಿಫಲವಾಗಿದೆ ಎಂದು ಗುಡುಗಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್, ಪ್ರಧಾನಿ ಮೋದಿ ನೀಡಿದ್ದ ಭರವಸೆಗಳು ಈಡೇರಿಲ್ಲ. ಸುಳ್ಳಾಗಿವೆ ಎಂದು ಟೀಕಾಪ್ರಹಾರ ನಡೆಸಿದ್ದಾರೆ.

ADVERTISEMENT

ಎಕ್ಸ್‌/ಟ್ವಿಟರ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಅವರು, 'ಜೈವಿಕವಾಗಿ ಜನಿಸಿದವರಲ್ಲದ ಪ್ರಧಾನಿ ಮೋದಿ ಅವರು ತಮ್ಮ ಎಂದಿನ ಶೈಲಿಯಂತೆ ಅತಿರಂಜನೀಯವಾಗಿ 2014ರಲ್ಲಿ ಮೇಕ್‌ ಇನ್‌ ಇಂಡಿಯಾ ಯೋಜನೆಗೆ ಚಾಲನೆ ನೀಡುವಾಗ 4 ಧ್ಯೇಯಗಳನ್ನು ರೂಪಿಸಿದ್ದರು. ಹತ್ತು ವರ್ಷಗಳ ನಂತರ ಅವುಗಳನ್ನು ಪರಿಶೀಲಿಸಿದರೆ, ಸುಳ್ಳು ನಂ.1: ಭಾರತೀಯ ಕೈಗಾರಿಕಾ ಬೆಳವಣಿಗೆ ದರವನ್ನು ಪ್ರತಿವರ್ಷ ಶೇ 12–14ಕ್ಕೆ ಏರಿಸುವುದು. ವಾಸ್ತವ: 2014ರಿಂದಲೂ ಉತ್ಪಾದನಾವಲಯದ ಬೆಳವಣಿಗೆ ದರ ಶೇ 5.2 ರಲ್ಲೇ ಉಳಿದಿದೆ' ಎಂದು ಕುಟುಕಿದ್ದಾರೆ.

'ಸುಳ್ಳು ನಂ.2: 2022ರ ಹೊತ್ತಿಗೆ ಕೈಗಾರಿಕಾ ವಲಯದಲ್ಲಿ 10 ಕೋಟಿ ಉದ್ಯೋಗ ಸೃಷ್ಟಿ. ವಾಸ್ತವ: 2017ರ ವೇಳೆಗೆ ಉತ್ಪಾದನಾ ವಲಯದಲ್ಲಿ 5.13 ಕೋಟಿಯಷ್ಟಿದ್ದ ಕಾರ್ಮಿಕದ ಸಂಖ್ಯೆ 2022–23ರ ಹೊತ್ತಿಗೆ 3.56 ಕೋಟಿಗೆ ಇಳಿದಿದೆ. ಸುಳ್ಳು ನಂ.3: 2022ರ ಹೊತ್ತಿಗೆ ಜಿಡಿಪಿಗೆ ಉತ್ಪಾದನಾ ವಯಲಯದ ಕೊಡುಗೆಯನ್ನು ಶೇ 25ರಷ್ಟಕ್ಕೆ ಏರಿಸುವುದು. ವಾಸ್ತವ: 2011–12ರಲ್ಲಿ ದೇಶದ ಒಟ್ಟು ಉತ್ಪನ್ನದಲ್ಲಿ ಉತ್ಪಾದನಾ ವಲಯದ ಪಾಲು ಶೇ 18.1ರಷ್ಟಿತ್ತು. 2022–23ರ ವೇಳೆಗೆ ಅದು ಶೇ 14.3ರಷ್ಟಕ್ಕೆ ಕುಸಿದಿದೆ. ಸುಳ್ಳು ನಂ.4: ಚೀನಾ ಬದಲು ಭಾರತವು ಪ್ರಪಂಚದ ಹೊಸ ಉತ್ಪಾದನಾ ಕಾರ್ಖಾನೆಯಾಗಲಿದೆ. ವಾಸ್ತವ: ಚೀನಾವನ್ನು ಹಿಂದಿಕ್ಕುವುದಿರಲಿ, ಆರ್ಥಿಕವಾಗಿ ಆ ದೇಶದ ಮೇಲೆಯೇ ಅವಲಂಬಿತರಾಗಿದ್ದೇವೆ. ಚೀನಾದಿಂದ ಆಮದು ಮಾಡಿಕೊಳ್ಳುವ ಪ್ರಮಾಣದ 2014ರಲ್ಲಿ 11ರಷ್ಟಿತ್ತು. ಅದು ಕಳೆದ ಐದು ವರ್ಷಗಳಲ್ಲಿ 15ಕ್ಕೆ ಏರಿದೆ' ಎಂದು ಮಾಹಿತಿ ನೀಡಿದ್ದಾರೆ.

ಕಳೆದ ಒಂದು ದಶಕದ ಆರ್ಥಿಕ ನೀತಿ ನಿರೂಪಣೆಯು ಸ್ಥಿರತೆ, ನಿರೀಕ್ಷೆ ಮತ್ತು ಸಂವೇದನಾಶೀಲತೆಯಿಂದ ದೂರ ಉಳಿದಿದೆ ಎಂದು ದೂರಿದ್ದಾರೆ. ನೋಟು ರದ್ದು ಕ್ರಮವನ್ನು ಉದಾಹರಣೆಯನ್ನಾಗಿ ನೀಡಿ, ಆ ಕ್ರಮವು ಭಯ ಮತ್ತು ಅನಿಶ್ಚಿತ ವಾತಾವರಣ ಸೃಷ್ಟಿಸಿ ಖಾಸಗಿ ಹೂಡಿಕೆ ವೃದ್ಧಿಗೆ ಪೆಟ್ಟು ನೀಡಿದೆ ಎಂದು ಪ್ರತಿಪಾದಿಸಿದ್ದಾರೆ.

'ಮೋದಿಗೆ ಆಪ್ತವಾಗಿರುವ ಒಂದೆರಡು ಉದ್ಯಮ ಸಮೂಹಗಳು ಸ್ಪರ್ಧೆಯನ್ನು ನಿಗ್ರಹಿಸುತ್ತಿವೆ. ಮೇಕ್‌ ಇನ್‌ ಇಂಡಿಯಾ, ಫೇಕ್‌ ಇನ್‌ ಇಂಡಿಯಾ ಆಗ ಬದಲಾಗಿದೆ' ಎಂದು ದೂರಿದ್ದಾರೆ.

'ಮೇಕ್ ಇನ್ ಇಂಡಿಯಾ'ದ 10ನೇ ವಾರ್ಷಿಕೋತ್ಸವವನ್ನುದ್ದೇಶಿಸಿ ಕಳೆದ ತಿಂಗಳು ಎಕ್ಸ್‌/ಟ್ವಿಟರ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದ ಮೋದಿ, ದೇಶದಲ್ಲಿ ವಿವಿಧ ಕ್ಷೇತ್ರಗಳಲ್ಲಿ ರಫ್ತು ಹೆಚ್ಚಿಸಲು ಮತ್ತು ರಾಷ್ಟ್ರದ ಆರ್ಥಿಕತೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಕಾರ್ಯಕ್ರಮವು ಪ್ರಮುಖವಾಗಿದೆ. ಇದರ ಯಶಸ್ಸಿಗಾಗಿ ಅವಿರತವಾಗಿ ಶ್ರಮಿಸುತ್ತಿರುವ ಎಲ್ಲರಿಗೂ ಅಭಿನಂದನೆಗಳು ಎಂದು ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.