ADVERTISEMENT

ನ್ಯಾಯಮೂರ್ತಿಗಳ ಆಸ್ತಿ ಘೋಷಣೆ ಕಡ್ಡಾಯಕ್ಕೆ ಕಾನೂನು: ಬಿಜೆಪಿ ಸಂಸದ ಮೋದಿ ಆಗ್ರಹ

ಪಿಟಿಐ
Published 11 ಡಿಸೆಂಬರ್ 2023, 11:15 IST
Last Updated 11 ಡಿಸೆಂಬರ್ 2023, 11:15 IST
ಸುಶೀಲ್‌ ಕುಮಾರ್ ಮೋದಿ
ಸುಶೀಲ್‌ ಕುಮಾರ್ ಮೋದಿ   

ನವದೆಹಲಿ: ಜನಪ್ರತಿನಿಧಿಗಳಂತೆ ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್‌ನ ನ್ಯಾಯಮೂರ್ತಿಗಳೂ ತಮ್ಮ ಆಸ್ತಿ ಘೋಷಣೆ ಮಾಡುವುದನ್ನು ಕಡ್ಡಾಯಗೊಳಿಸಬೇಕು ಎಂದು ಬಿಜೆಪಿ ರಾಜ್ಯಸಭಾ ಸಂಸದ ಸುಶೀಲ್‌ ಕುಮಾರ್ ಮೋದಿ ರಾಜ್ಯಸಭೆಯಲ್ಲಿ ಒತ್ತಾಯಿಸಿದ್ದಾರೆ.

ಶೂನ್ಯ ವೇಳೆಯಲ್ಲಿ ಮಾತನಾಡಿದ ಅವರು, ‘ಈಗಿರುವ ಕಾನೂನಿಗೆ ತಿದ್ದುಪಡಿ ತರುವುದು ಅಥವಾ ಹೊಸ ಕಾನೂನು ರಚಿಸುವ ಮೂಲಕ ಆಸ್ತಿ ಘೋಷಣೆ ವ್ಯಾಪ್ತಿಗೆ ನ್ಯಾಯಮೂರ್ತಿಗಳನ್ನೂ ತರಬೇಕು’ ಎಂದು ಕೇಂದ್ರಕ್ಕೆ ಸಲಹೆ ನೀಡಿದ್ದಾರೆ.

‘ಪ್ರಧಾನ ಮಂತ್ರಿ, ಸಚಿವರುಗಳು ಸೇರಿದಂತೆ ಸಾರ್ವಜನಿಕ ಸೇವೆಯಲ್ಲಿರುವ ಎಲ್ಲ ಅಧಿಕಾರಿಗಳು ವಾರ್ಷಿಕವಾಗಿ ಆಸ್ತಿ ಘೋಷಣೆ ಮಾಡುತ್ತಾರೆ. ಅಲ್ಲದೇ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಆಸ್ತಿ ಬಗ್ಗೆ ತಿಳಿದುಕೊಳ್ಳುವ ಹಕ್ಕು ಸಾರ್ವಜನಿಕರಿಗಿದೆ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ’ ಎಂದರು.

ADVERTISEMENT

‘ಸರ್ಕಾರಿ ಕಚೇರಿಯಲ್ಲಿ ಕೆಲಸ ಮಾಡುವ, ಸರ್ಕಾರದಿಂದ ಸಂಬಳ ಪಡೆಯುವ ಯಾವುದೇ ವ್ಯಕ್ತಿ, ಆತ ಯಾವುದೇ ಹುದ್ದೆಯಲ್ಲಿದ್ದರೂ ಆಸ್ತಿ ಘೋಷಣೆ ಮಾಡಬೇಕಿದೆ’ ಎಂದು ಹೇಳಿದರು.

‘ನ್ಯಾಯಮೂರ್ತಿಗಳ ಸ್ವತ್ತುಗಳ ಬಗ್ಗೆ ತಿಳಿದುಕೊಳ್ಳುವ ಹಕ್ಕು ನ್ಯಾಯಾಲಯದ ಕಕ್ಷಿದಾರರಿಗೆ ಇರುತ್ತದೆ. ಇದರಿಂದ ನ್ಯಾಯಾಂಗ ವ್ಯವಸ್ಥೆಯ ಮೇಲೆ ಕಕ್ಷಿದಾರರಿಗೆ ಇನ್ನಷ್ಟು ವಿಶ್ವಾಸ ಮೂಡುತ್ತದೆ’ ಎಂದರು.

‘1997ರಲ್ಲಿ ಸುಪ್ರೀಂ ಕೋರ್ಟ್‌ನ ಹನ್ನೊಂದು ನ್ಯಾಯಮೂರ್ತಿಗಳನ್ನೊಳಗೊಂಡ ಪೂರ್ಣ ಪೀಠವು ಎಲ್ಲಾ ನ್ಯಾಯಮೂರ್ತಿಗಳು ತಮ್ಮ ಆಸ್ತಿ ಘೋಷಣೆ ಕಡ್ಡಾಯವಾಗಿ ಮಾಡಬೇಕೆಂದು ಹೇಳಿತ್ತು. ನಂತರ ಇದನ್ನು ಸ್ವಯಂ ಪ್ರೇರಿತ ಎಂದು ಹೇಳಿತ್ತು’ ಎಂದು ತಿಳಿಸಿದರು.

‘ಸ್ವತ್ತುಗಳ ಘೋಷಣೆಯನ್ನು ಸ್ವಯಂಪ್ರೇರಿತ ಎಂದು ಮಾಡಿರುವುದರಿಂದ ಆಸ್ತಿ ಘೋಷಣೆ ವಿಭಾಗವನ್ನು 2018ರಿಂದ ನವೀಕರಿಸಲಾಗಿಲ್ಲ ಎನ್ನುವ ಮಾಹಿತಿ ಇಂದು ಸುಪ್ರೀಂ ಕೋರ್ಟ್‌ ವೆಬ್‌ಸೈಟ್ ಗಮನಿಸಿದಾಗ ತಿಳಿದುಬಂದಿದೆ’ ಎಂದು ಸದನದ ಗಮನಕ್ಕೆ ತಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.