ಜೈಪುರ: ಇಬ್ಬರು ಗುಜರಾತಿಗಳು (ನರೇಂದ್ರ ಮೋದಿ ಹಾಗೂ ಅಮಿತ್ ಶಾ) ರಾಜ್ಯದಲ್ಲಿ ಓಡಾಡಿ ಮತ ಕೇಳುತ್ತಿದ್ದಾರೆ. ಆದರೆ ಮತದಾರರು ಈ ನಿಮ್ಮ ರಾಜಸ್ಥಾನಿಗೆ ಮತ ಹಾಕಿ ಎಂದು ಕೇಳುವ ಮೂಲಕ ಮುಖ್ಯಮಂತ್ರಿ ಅಶೋಕ ಗೆಹಲೋತ್ ಅವರು ಚುನಾವಣೆಯ ಹೊಸ್ತಿಲಲ್ಲಿ ‘ಮಣ್ಣಿನ ಮಗ’ ದಾಳವನ್ನು ಉರುಳಿಸಿದ್ದಾರೆ.
‘ಗುಜರಾತ್ ವಿಧಾನಸಭಾ ಚುನಾವಾಣೆ ಸಂದರ್ಭದಲ್ಲಿ ಮೋದಿ ಅವರು ಮಾತನಾಡಿ, ‘ಮಾರ್ವಾಡಿಯೊಬ್ಬ ಗುಜರಾತ್‌ಗೆ ಬಂದಿದ್ದು, ಗುಜರಾತ್ ಚುನಾವಣೆ ಗೆಲ್ಲಬೇಕೆಂದಿದ್ದಾನೆ. ಗುಜರಾತಿಯಾದ ನಾನು ಬೇರೆಲ್ಲಿ ಹೋಗಲಿ’ ಎಂದಿದ್ದನ್ನು ಗೆಹಲೋತ್ ಸುದ್ದಿಗಾರರೊಂದಿಗೆ ಮಾತನಾಡುವಾಗ ನೆನಪಿಸಿಕೊಂಡಿದ್ದಾರೆ.
‘ಇಬ್ಬರು ಗುಜರಾತಿಗಳು ರಾಜ್ಯವನ್ನು ಸುತ್ತಾಡಿದ್ದಾರೆ. ನಾನು ರಾಜಸ್ಥಾನಿ. ಹಾಗಿದ್ದರೆ ನಾನು ಎಲ್ಲಿಗೆ ಹೋಗಬೇಕು ಎಂಬುದನ್ನು ರಾಜಸ್ಥಾನದ ಜನರೇ ನಿರ್ಧರಿಸಲಿ’ ಎಂದಿದ್ದಾರೆ.
‘ರಾಜ್ಯದ ಜನರೇ ನನಗೆ ಸರ್ವಸ್ವ. ಗುಜರಾತ್‌ನ ಜನರು ಹೇಗೆ ಅವರನ್ನು ಗೆಲ್ಲಿಸಿದರೋ, ಹಾಗೆಯೇ ರಾಜಸ್ಥಾನದ ಜನರು ನನ್ನನ್ನು ಗೆಲ್ಲಿಸುತ್ತಾರೆ’ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
‘ಗುಜರಾತಿಗಳ ಭಾವನೆಗಳನ್ನು ಪ್ರಚೋಧಿಸಿ ಬಿಜೆಪಿ ಮತ ಗಳಿಸಿ ಚುನಾವಣೆ ಗೆದ್ದಿದೆ. ಈಗಲೂ ರಾಜಸ್ಥಾನಕ್ಕೆ ದೆಹಲಿಯಿಂದ ಬಂದಿರುವ ಕೆಲವರು ಇಲ್ಲಿನ ಜನರನ್ನು ಪ್ರಚೋಧಿಸುವ ಕೆಲಸ ಮಾಡಿದ್ದಾರೆ. ಆದರೆ ಅವರು ರಾಜ್ಯ ಸರ್ಕಾರ ಜಾರಿಗೆ ತಂದಿರುವ ಯೋಜನೆಗಳ ಬಗ್ಗೆ, ಕಾನೂನು ಹಾಗೂ ಗ್ಯಾರೆಂಟಿಗಳ ಬಗ್ಗೆ ಯಾವುದೇ ಚರ್ಚೆ ನಡೆಸಿಲ್ಲ’ ಎಂದು ಗೆಹಲೋತ್ ಆರೋಪಿಸಿದ್ದಾರೆ.
‘ನನ್ನ ಭಾವನೆಗಳು ರಾಜಸ್ಥಾನದ ಪ್ರತಿ ಮನೆಯನ್ನೂ ತಲುಪಿವೆ. ಹೀಗಾಗಿ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸ ನನಗಿದೆ. ಇದು ನಿಜಕ್ಕೂ ಕೆಲಸ ಮಾಡಿದ್ದೇ ಆದಲ್ಲಿ ನಮ್ಮ ಸರ್ಕಾರ ರಚನೆ ಖಚಿತ’ ಎಂದಿದ್ದಾರೆ.
200 ಸ್ಥಾನಗಳ ರಾಜಸ್ಥಾನ ವಿಧಾನಸಭೆಗೆ ಶನಿವಾರ 199 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಡಿ. 3ರಂದು ಮತ ಎಣಿಕೆ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.