ಕೊಚ್ಚಿ: ಪೂರ್ವ ಸಮ್ಮತಿಯಾಗಿ ಯಾವುದೇ ಪೂರಕ ದಾಖಲೆಯನ್ನು ಸಲ್ಲಿಸದೇ ಉದ್ಯೋಗಿಯು, ಆನ್‌ಲೈನ್ ಮೂಲಕ ಇಪಿಎಫ್ ಖಾತೆಗೆ ಹೆಚ್ಚುವರಿ ಮೊತ್ತ ಕಡಿತದ ಆಯ್ಕೆಗೆ ಅವಕಾಶ ಕಲ್ಪಿಸಬೇಕು ಎಂದು ಕೇರಳ ಹೈಕೋರ್ಟ್, ಇಪಿಎಫ್‌ಒಗೆ ಆದೇಶಿಸಿದೆ.
ನ್ಯಾಯಮೂರ್ತಿ ಜಿಯಾದ್ ರೆಹಮಾನ್ ಅವರು ನೌಕರರ ಭವಿಷ್ಯನಿಧಿ ಸಂಘಟನೆಗೆ (ಇಪಿಎಫ್‌ಒ) ಈ ಸಂಬಂಧ ಬುಧವಾರ ಮಧ್ಯಂತರ ಆದೇಶವನ್ನು ನೀಡಿದರು. ದಾಖಲೆ ಸಲ್ಲಿಸಲು ತೊಡಕಾಗುತ್ತಿದೆ ಎಂದು ಹಲವು ನೌಕರರು, ಪಿಂಚಣಿದಾರರು ಅರ್ಜಿ ಸಲ್ಲಿಸಿದ್ದರು.
ಪ್ರಸ್ತುತ 1952ರ ಇಪಿಎಫ್ ಯೋಜನೆಯನ್ವಯ ಪೂರ್ವಾನುಮತಿ ದಾಖಲೆ ಸಲ್ಲಿಸುವುದು ಕಡ್ಡಾಯವಾಗಿದೆ.
ಅನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವಾಗ ಪೂರ್ವಾನುಮತಿ ದಾಖಲೆ ಅಪ್‌ಲೋಡ್ ಮಾಡಲು ಆಗುತ್ತಿಲ್ಲ. ಇದನ್ನು ಭರ್ತಿ ಮಾಡದೇ ಅರ್ಜಿ ಯಶಸ್ವಿಯಾಗಿ ಸ್ವೀಕೃತಿಯಾಗುತ್ತಿಲ್ಲ. ನಿಗದಿತ ಗಡುವಾದ ಮೇ 3ರ ಒಳಗೆ ಅರ್ಜಿ ಸಲ್ಲಿಸದಿದ್ದಲ್ಲಿ ಯೋಜನೆಯ ಲಾಭದಿಂದ ವಂಚಿತರಾಗಬೇಕಾಗುತ್ತದೆ ಎಂದು ಅರ್ಜಿದಾರರು ಆತಂಕ ವ್ಯಕ್ತಪಡಿಸಿದ್ದರು. ಮೇ 3ರ ಗಡುವನ್ನು ಸುಪ್ರೀಂ ಕೋರ್ಟ್ ನಿಗದಿಪಡಿಸಿದೆ.
ಆದರೆ, ಈ ಕೋರಿಕೆಯನ್ನು ವಿರೋಧಿಸಿದ ಇಪಿಎಫ್‌ಒ, ಸೌಲಭ್ಯವನ್ನು ಪಡೆಯಲು ಪೂರ್ವಾನುಮತಿಯ ದಾಖಲೆ ಸಲ್ಲಿಸುವುದು ಮಹತ್ವದ ಅಗತ್ಯವಾಗಿದೆ. ಅರ್ಜಿದಾರರ ಅರ್ಜಿಯನ್ನು ಪರಿಶೀಲಿಸಲು ಇದು ಅಗತ್ಯವು ಹೌದು ಎಂದು ಪ್ರತಿಪಾದಿಸಿತು.
ಅಂತಿಮವಾಗಿ ಅರ್ಜಿದಾರರ ವಾದದಲ್ಲಿ ಅರ್ಥವಿದೆ ಎಂದು ಪರಿಗಣಿಸಿದ ನ್ಯಾಯಾಲಯ, ಅವರ ಪರವಾಗಿ ಮಧ್ಯಂತರ ಆದೇಶವನ್ನು ನೀಡಿತು.
ಆನ್‌ಲೈನ್ ಸೇವೆಯ ಮೂಲಕ ಎಲ್ಲ ಅಗತ್ಯ ಪರಿಷ್ಕರಣೆಗಳನ್ನು ಮಾಡಲಾಗದು. ಸಾಧ್ಯವಿರುವ ಪರಿಷ್ಕರಣೆಗಳು ಅಂದರೆ ಪೂರ್ವಾನುಮತಿಗೆ ಪೂರಕವಾಗಿ ದಾಖಲೆ ಅಪ್‌ಲೋಡ್ ಮಾಡುವುದಕ್ಕೆ ಇರುವ ಆಯ್ಕೆಗಳನ್ನು ಪರಿಷ್ಕರಿಸಬೇಕು ಎಂದು ಸೂಚಿಸಿತು.
ಹೈಕೋರ್ಟ್ ಆದೇಶ ಹೊರಬಿದ್ದ ಏಪ್ರಿಲ್ 12ರಿಂದ 10 ದಿನಗಳವರೆಗೆ ಆನ್‌ಲೈನ್ ಮೂಲಕ ಈ ಅವಕಾಶವನ್ನು ಎಲ್ಲ ನೌಕರರು ಮತ್ತು ಪಿಂಚಣಿದಾರರಿಗೆ ಒದಗಿಸಿಕೊಡಬೇಕು ಎಂದು ಹೈಕೋರ್ಟ್ ಇಪಿಎಫ್‌ಒ ಸಂಘಟನೆಗೆ ಆದೇಶಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.