ನವದೆಹಲಿ: ಆಧಾರರಹಿತ ಆರೋಪಗಳ ಮೂಲಕ ಪತಿಯ ಸಾರ್ವಜನಿಕ ನಿಂದನೆ, ತೇಜೋವಧೆ ಮತ್ತು ‘ಸ್ತ್ರೀಲೋಲ’ ಎಂದು ಕರೆಯುವ ಮೂಲಕ ಅವರ ವ್ಯಕ್ತಿತ್ವಕ್ಕೆ ಕಳಂಕ ತರುವ ಪತ್ನಿಯ ನಡವಳಿಕೆಯು ‘ಕ್ರೌರ್ಯದ ಪರಮಾವಧಿ’ ಎಂದು ದೆಹಲಿ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಕೌಟುಂಬಿಕ ನ್ಯಾಯಾಲಯವೊಂದು ನೀಡಿದ್ದ ವಿಚ್ಛೇದನವನ್ನು ಪ್ರಶ್ನಿಸಿ ಪತ್ನಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ನೀನಾ ಕೃಷ್ಣ ಬನ್ಸಾಲ್ ಮತ್ತು ಸುರೇಶ್ ಕುಮಾರ್ ಕೈತ್ ಅವರನ್ನು ಒಳಗೊಂಡ ನ್ಯಾಯಪೀಠವು ವಜಾಗೊಳಿಸಿತು.
ಅರ್ಜಿದಾರ ಮಹಿಳೆಯ ಮನವಿಯನ್ನು ಆಲಿಸಿದ ಬಳಿಕ ನ್ಯಾಯಾಲಯವು, ‘ಪತ್ನಿಯು ‘ಪುರುಷತ್ವ’ದ ಬಗ್ಗೆ ಆರೋಪ ಮಾಡುವುದು ಪತಿಯನ್ನು ತೀವ್ರ ಖಿನ್ನತೆ ಹಾಗೂ ಮಾನಸಿಕ ಆಘಾತಕ್ಕೆ ದೂಡುತ್ತದೆ’ ಎಂದು ಹೇಳಿತು.
‘ಸಂಗಾತಿಯನ್ನು ಸಾರ್ವಜನಿಕವಾಗಿ ನಿಂದಿಸುವುದು, ಮಾನಹಾನಿಕರ ಹೇಳಿಕೆ ಮೂಲಕ ತೇಜೋವಧೆ ಮಾಡುವುದು ಕ್ರೌರ್ಯಕ್ಕೆ ಸಮನಾದ ಕೃತ್ಯ. ಈ ಪ್ರಕರಣದಲ್ಲಿ ಪತಿಯ ದಾಂಪತ್ಯ ನಿಷ್ಠೆಯ ಬಗ್ಗೆ ಪತ್ನಿಗೆ ಅತೀವ ಸಂದೇಹ ಇದೆ. ಇದರಿಂದ ಪತಿಯು ಮಾನಸಿಕ ಕ್ರೌರ್ಯ ಅನುಭವಿಸುತ್ತಿದ್ದಾರೆ ಎಂಬುದು ಸ್ಪಷ್ಟ’ ಎಂದು ತಿಳಿಸಿತು.
‘ಪರಸ್ಪರ ನಂಬಿಕೆ, ವಿಶ್ವಾಸ ಮತ್ತು ಗೌರವವೇ ವಿವಾಹದ ತಳಹದಿ. ಪತಿಯಾಗಲೀ, ಪತ್ನಿಯಾಗಲೀ ಪರಸ್ಪರ ದೂಷಣೆ ಮಾಡುತ್ತಾ ಅಗೌರವದಿಂದ ವರ್ತಿಸುವುದು ಅಕ್ಷಮ್ಯ ಅಪರಾಧ. ಸಂಗಾತಿಗಳು ಪರಸ್ಪರರ ವ್ಯಕ್ತಿತ್ವ ಮತ್ತು ಘನತೆಯ ರಕ್ಷಣೆಗೆ ಗುರಾಣಿಯಾಗಿ ನಿಲ್ಲಬೇಕು’ ಎಂದು ಕೋರ್ಟ್ ಪಾಠ ಹೇಳಿತು.
ದಂಪತಿ ಫೆ.28, 2000ರಂದು ವಿವಾಹವಾಗಿದ್ದರು. 2004ರಲ್ಲಿ ಪುತ್ರನೂ ಜನಿಸಿದ್ದ. ವಿವಾಹವಾದ ಆರು ವರ್ಷದ ನಂತರ ಅವರ ನಡುವೆ ವೈಮನಸ್ಸು ಶುರುವಾಗಿತ್ತು. ‘ನಪುಂಸಕ’ ಎಂದು ಆರೋಪಿಸಿದ್ದ ಪತ್ನಿ ವಿರುದ್ಧ ವಿಚ್ಛೇದನ ಕೋರಿ ಪತಿ ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗಿದ್ದರು. ಕ್ರೌರ್ಯದ ಆಧಾರದ ಮೇಲೆ ಕೋರ್ಟ್ ವಿಚ್ಛೇದನ ನೀಡಿತ್ತು.
ಕೆವಿಎಸ್ ದಾಖಲಾತಿ: ಅನ್ಯ ರಾಜ್ಯಗಳ ಆದಾಯ ಪ್ರಮಾಣಪತ್ರವೂ ಸ್ವೀಕೃತ
ಆದಾಯ ಪ್ರಮಾಣಪತ್ರವನ್ನು ಬೇರೆ ರಾಜ್ಯದಿಂದ ಪಡೆಯಲಾಗಿದೆ ಎಂಬ ಕಾರಣ ನೀಡಿ ಆರ್ಥಿಕವಾಗಿ ಹಿಂದುಳಿದ ವರ್ಗಗಳ (ಇಡಬ್ಲ್ಯುಎಸ್) ಮೀಸಲಾತಿ ಅಡಿ ದಾಖಲಾತಿಯನ್ನು ಕೇಂದ್ರೀಯ ವಿದ್ಯಾಲಯ ಸಂಘಟನೆ (ಕೆವಿಎಸ್) ಶಾಲೆಗಳು ನಿರಾಕರಿಸುವಂತಿಲ್ಲ ಎಂದು ದೆಹಲಿ ಹೈಕೋರ್ಟ್ ಆದೇಶ ಹೊರಡಿಸಿದೆ.
ಮಗುವೊಂದು ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಸೇರಿದೆಯೇ ಎಂದು ನಿರ್ಧರಿಸಲು, ಕೇಂದ್ರ ಸರ್ಕಾರವೇ ಮಗುವಿನ ಕುಟುಂಬದ ವಾರ್ಷಿಕ ಆದಾಯದ ಮಿತಿಯನ್ನು ನಿಗದಿಪಡಿಸುತ್ತದೆ ಎಂದೂ ಹೈಕೋರ್ಟ್ ಹೇಳಿದೆ. ಕೆವಿಎಸ್ ಶಾಲೆಗಳು ಕೇಂದ್ರ ಸರ್ಕಾರದ ನಿಯಂತ್ರಣದಲ್ಲಿವೆ.
ಕೆವಿಎಸ್ ಶಾಲೆಗಳಲ್ಲಿ ದಾಖಲಾತಿ ಪಡೆಯುವ ನಿಟ್ಟಿನಲ್ಲಿ ಪಡೆಯುವ ಆದಾಯ ಪ್ರಮಾಣಪತ್ರವನ್ನು ಆಯಾ ರಾಜ್ಯದ ತಹಶೀಲ್ದಾರ ಹುದ್ದೆಗಿಂತ ಕೆಳ ಹುದ್ದೆಗಳಲ್ಲಿ ಇರುವವರಿಂದ ಪಡೆದಿರಬಾರದು. ಆಯಾ ರಾಜ್ಯಗಳು ನಿಗದಿಪಡಿಸಿರುವ ದಾಖಲೆ ಪರಿಶೀಲನಾ ಪ್ರಕ್ರಿಯೆಗಳ ಅನ್ವಯವೇ ಸಂಬಂಧಪಟ್ಟ ದಾಖಲೆಗಳ ಪರಿಶೀಲನೆ ನಡೆದಿರಬೇಕು ಎಂದು ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ.
ಅಧಿಸೂಚನೆ ಅನ್ವಯ, ದೇಶದ ಯಾವುದೇ ರಾಜ್ಯದಲ್ಲಿರುವ ಕೆವಿಎಸ್ ಶಾಲೆಯಲ್ಲಿ ಇಡಬ್ಲ್ಯುಎಸ್ ಮೀಸಲಾತಿ ಅಡಿ ದಾಖಲಾತಿ ಬಯಸುವ ಅಭ್ಯರ್ಥಿಯು ಅದೇ ರಾಜ್ಯದಿಂದ ಆದಾಯ ಪ್ರಮಾಣಪತ್ರ ಪಡೆದಿರಬೇಕೆಂಬ ನಿಯಮವಿಲ್ಲ ಎಂದು ನ್ಯಾಯಮೂರ್ತಿ ಅನೂಪ್ ಜೈರಾಮ್ ಭಂಭಾನಿ ಅವರು ಆದೇಶ ಹೊರಡಿಸುವ ವೇಳೆ ಹೇಳಿದ್ದಾರೆ.
ಪ್ರಕರಣವೇನು?:
ಉತ್ತರ ಪ್ರದೇಶದ ಆಜಂಗಢದ ನಿವಾಸಿಯೊಬ್ಬರು ತಮ್ಮ ಮಗನಿಗೆ ಇಡಬ್ಲ್ಯುಎಸ್ ಮೀಸಲಾತಿ ಅಡಿ ಒಂದನೇ ತರಗತಿಗೆ ದಾಖಲಾತಿ ನೀಡಲು ದೆಹಲಿಯ ನರೆಲಾದ ಕೆವಿಎಸ್ ಶಾಲೆಗೆ ಅರ್ಜಿ ಸಲ್ಲಿಸಿದ್ದರು. ವ್ಯಕ್ತಿ ಸಲ್ಲಿಸಿದ್ದ ಆದಾಯ ಪ್ರಮಾಣಪತ್ರವನ್ನು ಆಜಂಗಢದ ತಹಶೀಲ್ದಾರರು ಪ್ರಮಾಣೀಕರಿಸಿದ್ದರು. ದೆಹಲಿಯ ಶಾಲೆಯಲ್ಲಿ ಪ್ರವೇಶ ನೀಡಲು ಉತ್ತರ ಪ್ರದೇಶದ ಪ್ರಮಾಣಪತ್ರವನ್ನು ಪರಿಗಣಿಸಲಾಗುವುದಿಲ್ಲ ಎಂದು ಹೇಳಿದ್ದ ಶಾಲೆಯ ಆಡಳಿತ ಮಂಡಳಿಯು, 2022ರ ಜನವರಿಯಲ್ಲಿ ದಾಖಲಾತಿ ನಿರಾಕರಿಸಿತ್ತು.
ಉದ್ಯೋಗದ ನಿಮಿತ್ತ ಉತ್ತರ ಪ್ರದೇಶದಿಂದ ದೆಹಲಿಗೆ ತಮ್ಮ ಕುಟುಂಬವನ್ನು ವರ್ಗಾಯಿಸಿದ್ದೇನೆ. ಹೀಗಾಗಿ ಮಗನಿಗೆ ಕೇಂದ್ರೀಯ ವಿದ್ಯಾಲಯದಲ್ಲಿ ದಾಖಲಾತಿ ನೀಡುವಂತೆ ನಿರ್ದೇಶನ ನೀಡಬೇಕು ಎಂದು ಕೋರಿ ವ್ಯಕ್ತಿಯು ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಉತ್ತರ ಪ್ರದೇಶದಿಂದ ಪಡೆಯಲಾಗಿರುವ ಆದಾಯ ಪ್ರಮಾಣಪತ್ರವೊಂದೇ ಬಾಲಕನ ಪ್ರವೇಶಾತಿ ನಿರಾಕರಣೆಗೆ ಕಾರಣವಲ್ಲ. ಬಾಲಕನ ಪೋಷಕರು ಸಲ್ಲಿಸಿದ್ದ ಅರ್ಜಿಯಲ್ಲಿ ಹಲವಾರು ಸಮಸ್ಯೆಗಳಿದ್ದವು ಎಂದು ಕೆವಿಎಸ್ ಶಾಲೆ ಪರ ವಕೀಲರು ಹೈಕೋರ್ಟ್‌ನಲ್ಲಿ ಹೇಳಿದರು.
ಅರ್ಜಿದಾರರ ಮಗನಿಗೆ 2021–22ನೇ ಶೈಕ್ಷಣಿಕ ಸಾಲಿನಲ್ಲಿ ಒಂದನೇ ತರಗತಿಗೆ ದಾಖಲಾತಿ ನೀಡಿ, ಬಳಿಕ ಅದನ್ನು ನಿರಾಕರಿಸಲಾಗಿದೆ. ವ್ಯಾಜ್ಯದ ಕಾರಣಕ್ಕಾಗಿ ಬಾಲಕನ ಅಮೂಲ್ಯ ಸಮಯ ಹಾಳಾಗಿದೆ. ಹೀಗಾಗಿ ಆತನಿಗೆ 2023–24ನೇ ಸಾಲಿನ ಮೂರನೇ ತರಗತಿಗೆ ದಾಖಲಾತಿ ನೀಡಬೇಕೆಂದು ಹೈಕೋರ್ಟ್ ನರೆಲಾದ ಕೆವಿಎಸ್ ಶಾಲೆಗೆ ನಿರ್ದೇಶನ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.