ಕೊಚ್ಚಿ: ಏರ್ ಇಂಡಿಯಾ ವಿಮಾನದಲ್ಲಿ ಸಹಪ್ರಯಾಣಿಕರೊಬ್ಬರು ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಮಲಯಾಳಂ ನಟಿ ದಿವ್ಯಾ ಪ್ರಭಾ ಪೊಲೀಸರಿಗೆ ದೂರು ನೀಡಿದ್ದಾರೆ.
ಮುಂಬೈನಿಂದ ಕೊಚ್ಚಿಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನ AI 681 ರಲ್ಲಿ ಮಂಗಳವಾರ (ಅ.10) ಘಟನೆ ನಡೆದಿರುವುದಾಗಿ ನಟಿ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
‘ವಿಮಾನದಲ್ಲಿ ಕುಡಿದ ಅಮಲಿನಲ್ಲಿ ವ್ಯಕ್ತಿಯೊಬ್ಬ ನನಗೆ ಕಿರುಕುಳ ನೀಡುತ್ತಿದ್ದ. ಈ ಬಗ್ಗೆ ಗಗನಸಖಿಯರಿಗೆ ಹೇಳಿದರೂ ವಿಮಾನ ಇಳಿಯಲು ಕೆಲ ಹೊತ್ತಿನ ಮೊದಲು ಇನ್ನೊಂದು ಸೀಟಿನಲ್ಲಿ ಕುಳಿತುಕೊಳ್ಳಲು ಅವಕಾಶ ಮಾಡಿಕೊಟ್ಟರು. ವಿಮಾನದಿಂದ ಇಳಿದ ಬಳಿಕ ಅಲ್ಲಿನ ವಿಮಾನಯಾನ ಅಧಿಕಾರಿಗಳಿಗೆ ತಿಳಿಸಲಾಯಿತು. ಅವರ ಮೂಲಕ ಇ –ಮೇಲ್‌ನಲ್ಲಿ ಪೊಲೀಸರಿಗೆ ದೂರು ನೀಡಿದ್ದೇನೆ’ ಎಂದು ವಿಡಿಯೊದಲ್ಲಿ ಹೇಳಿದ್ದಾರೆ.
‘ಅಮಲಿನಲ್ಲಿದ್ದ ಪ್ರಯಾಣಿಕ ನನ್ನ ಸೀಟ್‌ನಲ್ಲಿ ಕುಳಿತುಕೊಂಡಿದ್ದನಲ್ಲದೆ ‘ಅನುಚಿತವಾಗಿ ವರ್ತಿಸಿದ್ದಾನೆ ಅಲ್ಲದೆ ದೇಹವನ್ನು ಸ್ಪರ್ಶಿಸಲು ಪ್ರಯತ್ನಿಸಿದ್ದಾನೆ’ ಎಂದು ದೂರಿದ್ದಾರೆ.
ಈ ಬಗ್ಗೆ ನೆಡುಂಬಸ್ಸೆರಿ ಪೊಲೀಸರು ಬುಧವಾರ ಪ್ರತಿಕ್ರಿಯಿಸಿದ್ದು, ‘ಇ– ಮೇಲ್ ಮೂಲಕ ದೂರು ಬಂದಿದೆ. ಆದರೆ ಇನ್ನೂ ಎಫ್‌ಐಆರ್ ದಾಖಲಿಸಿಲ್ಲ. ದಿವ್ಯಾ ಅವರನ್ನು ದೂರವಾಣಿ ಮುಖಾಂತರ ಸಂಪರ್ಕಿಸಿ ಹೆಚ್ಚಿನ ಮಾಹಿತಿ ಪಡೆದು ತನಿಖೆ ನಡೆಸಲಾಗುವುದು’ ಎಂದಿದ್ದಾರೆ.
ಪ್ರಯಾಣಿಕರ ಸುರಕ್ಷತೆಯ ಮಹತ್ವದ ಬಗ್ಗೆ ಜಾಗೃತಿ ಮೂಡಿಸೋಣ, ಅಧಿಕಾರಿಗಳು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವಂತೆ ಪ್ರೋತ್ಸಾಹಿಸೋಣ ಎಂದು ಸಾಮಾಜಿಕ ಜಾಲತಾಣದಲ್ಲಿ ದಿವ್ಯಾ ಬರೆದುಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.