ಕೊಚ್ಚಿ: ಕೇರಳ ಸರ್ಕಾರದಿಂದ ಸರಿಯಾದ ಬೆಂಬಲ ಸಿಗುತ್ತಿಲ್ಲ. ಹಾಗಾಗಿ ನಟರ ವಿರುದ್ಧ ತಾವು ದಾಖಲಿಸಿರುವ ಲೈಂಗಿಕ ದೌರ್ಜನ್ಯ ದೂರುಗಳನ್ನು ಹಿಂಪಡೆಯುತ್ತೇನೆ ಎಂದು ಹೇಳಿದ್ದ 51 ವರ್ಷದ ನಟಿಯೊಬ್ಬರು, ಮತ್ತೊಮ್ಮೆ ತಮ್ಮ ನಿಲುವು ಬದಲಿಸಿದ್ದಾರೆ. ದೂರುಗಳನ್ನು ಹಿಂಪಡೆಯುವುದಿಲ್ಲ. ನ್ಯಾಯಕ್ಕಾಗಿ ಕಾನೂನಾತ್ಮಕ ಹೋರಾಟ ಮುಂದುವರಿಸುತ್ತೇನೆ ಎಂದು ಭಾನುವಾರ ಖಚಿತಪಡಿಸಿದ್ದಾರೆ.
ಎರಡು ದಿನಗಳ ಹಿಂದಷ್ಟೇ, 'ಸರ್ಕಾರದಿಂದ ಬೆಂಬಲದ ಸಿಗುತ್ತಿಲ್ಲ' ಎಂದು ಹತಾಶೆ ವ್ಯಕ್ತಪಡಿಸಿದ್ದ ಮಲಯಾಳ ನಟಿ, ದೂರುಗಳನ್ನು ಹಿಂಪಡೆಯುವುದಾಗಿ ಹೇಳಿದ್ದರು. ಇದೀಗ, ತಮ್ಮ ಕುಟುಂಬವು ಬೆಂಬಲಕ್ಕೆ ನಿಂತಿದೆ. ಹೋರಾಟ ಮುಂದುವರಿಸುತ್ತೇನೆ ಎಂದು ತಿಳಿಸಿದ್ದಾರೆ.
'ನನ್ನ ಪತಿ ಕರೆ ಮಾಡಿದ್ದರು. ಪ್ರಕರಣಗಳನ್ನು ಮುಂದುವರಿಸುವಂತೆ ಒತ್ತಾಯಿಸಿದ್ದಾರೆ. ಸಂಪೂರ್ಣ ಬೆಂಬಲ ನೀಡುವುದಾಗಿ ಭರವಸೆ ನೀಡಿದ್ದಾರೆ. ದೌರ್ಜನ್ಯವನ್ನು ಸಹಿಸಿಕೊಂಡು, ಹಿಂದಕ್ಕೆ ಹೋಗಲು ಇದೀಗ ಯಾವುದೇ ಕಾರಣಗಳಿಲ್ಲ' ಎಂದು ಮಾಧ್ಯಮದವರಿಗೆ ಹೇಳಿದ್ದಾರೆ.
ಸಿಪಿಐ(ಎಂ) ಶಾಸಕರೂ ಆಗಿರುವ ನಟ ಎಂ. ಮುಕೇಶ್ ಸೇರಿದಂತೆ ಹಲವು ನಟರು, ತಮಗೆ ಕಿರುಕುಳ ನೀಡಿದ್ದರು ಎಂದು ನಟಿ ಕೆಲವು ವರ್ಷಗಳ ಹಿಂದೆ ಆರೋಪಿಸಿದ್ದರು.
ಈ ಸಂಬಂಧ ಶುಕ್ರವಾರ ಹೇಳಿಕೆ ನೀಡಿದ್ದ ನಟಿ, 'ಕೇರಳ ಸರ್ಕಾರದಿಂದ ಸೂಕ್ತ ಬೆಂಬಲ ಮತ್ತು ಭದ್ರತೆ ಸಿಗುತಿಲ್ಲ. ಮಾನಸಿಕವಾಗಿಯೂ ಬಳಲಿದ್ದೇನೆ' ಎಂದಿದ್ದರು. ಆ ಮೂಲಕ, ಹೋರಾಟ ಮಾಡುವ ಉತ್ಸಾಹವಿಲ್ಲ ಎಂದು ತಿಳಿಸಿದ್ದರು.
ನಟರಾದ ಮುಕೇಶ್, ಎಂ. ರಾಜು ಹಾಗೂ ಇಡವೆಲ ಬಾಬು ಅವರ ವಿರುದ್ಧ ದೌರ್ಜನ್ಯ ಆರೋಪದಡಿ ದೂರು ದಾಖಲಿಸಿದ ನಂತರ, ತಮ್ಮನ್ನು ಪೋಕ್ಸೊ ಪ್ರಕರಣವೊಂದರಲ್ಲಿ ಸಿಲುಕಿಸುವ ದುರುದ್ದೇಶದ ಯತ್ನ ನಡೆದಿತ್ತು ಎಂದು ದೂರಿದ್ದರು.
2017ರಲ್ಲಿ ನಟಿಯೊಬ್ಬರಿಗೆ ಕಿರುಕುಳ ನೀಡಿದ ಪ್ರಕರಣದಲ್ಲಿ ನಟ ದಿಲೀಪ್ ಹೆಸರು ಕೇಳಿ ಬಂದಿತ್ತು. ಅದರ ಬೆನ್ನಲ್ಲೇ, ಮಲಯಾಳ ಚಿತ್ರರಂಗದಲ್ಲಿ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳು, ಲೈಂಗಿಕ ದೌರ್ಜನ್ಯ ಮತ್ತು ಲಿಂಗ ಸಮಾನತೆ ಕುರಿತ ಅಧ್ಯಯನಕ್ಕೆ ಕೇರಳ ಸರ್ಕಾರ 2019ರಲ್ಲಿ ಸಮಿತಿ ರಚಿಸಿತ್ತು.
ಸಮಿತಿಯು ತನ್ನ ವರದಿಯನ್ನು ಹೈಕೋರ್ಟ್‌ಗೆ ಸಲ್ಲಿಸಿದೆ. ಪ್ರಕರಣದ ತನಿಖೆ ಕೈಗೆತ್ತಿಕೊಂಡಿರುವ ಎಸ್‌ಐಟಿಗೆ ಅದನ್ನು ಹಸ್ತಾಂತರಿಸಲಾಗಿದೆ. ವರದಿಯಲ್ಲಿನ ಮಾಹಿತಿಯ ಆಧಾರದಲ್ಲಿ ಎಸ್‌ಐಟಿ 26 ಎಫ್‌ಐಆರ್‌ಗಳನ್ನು ದಾಖಲಿಸಿಕೊಂಡಿದೆ.
ತನಿಖೆ ಕುರಿತಾಗಿಯೂ ಮಾತನಾಡಿರುವ ನಟಿ, ಸಂಪೂರ್ಣ ಸಹಕಾರ ನೀಡುವುದಾಗಿ ಮತ್ತು ದೂರುಗಳನ್ನು ಹಿಂಪಡೆಯುವುದಿಲ್ಲ ಎಂಬುದಾಗಿ ಮತ್ತೊಮ್ಮೆ ಒತ್ತಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.