ನವದೆಹಲಿ:ದೆಹಲಿ ಹಿಂಸಾಚಾರವನ್ನು ವರದಿ ಮಾಡುವಾಗ ಕೋಮು ಸಾಮರಸ್ಯ ಕಾಪಾಡಲುಸಂಯಮ ಪಾಲಿಸಲಿಲ್ಲಎಂದು ಆಕ್ಷೇಪಿಸಿಕೇಂದ್ರ ಸರ್ಕಾರವು ಎರಡು ಮಲಯಾಳಂ ಸುದ್ದಿವಾಹಿನಿಗಳ ಮೇಲೆ 48 ಗಂಟೆಗಳ ಕಾಲ ನಿಷೇಧ ವಿಧಿಸಿದೆ.
ಮೀಡಿಯಾ ಒನ್ ಮತ್ತು ಏಷ್ಯಾನೆಟ್ ಸುದ್ದಿ ವಾಹಿನಿಗಳ ಪ್ರಸಾರಕ್ಕೆ 48 ಗಂಟೆಗಳ ಕಾಲ ನಿಷೇಧ ಹೇರಿ ಆದೇಶ ಹೊರಡಿಸಿದ್ದಮಾಹಿತಿ ಮತ್ತು ಪ್ರಸಾರ ಸಚಿವಾಲಯ 1994ರ ಕೇಬಲ್ ನೆಟ್‌ವರ್ಕ್ ಆಕ್ಟ್‌ನ ಅಡಿಯಲ್ಲಿ ಕ್ರಮ ಕೈಗೊಂಡಿರುವುದಾಗಿ ತಿಳಿಸಿದೆ. ದೆಹಲಿ ಹಿಂಸಾಚಾರಕ್ಕೆ ಸಂಬಂಧಿಸಿದ ವರದಿಯಲ್ಲಿ ಧಾರ್ಮಿಕ ಸ್ಥಳಗಳ ಮೇಲಿನ ದಾಳಿಯನ್ನು ಪ್ರಸಾರ ಮಾಡಿವೆ ಎಂಬುದು ಈ ಎರಡೂ ಮಾಧ್ಯಮ ಸಂಸ್ಥೆಗಳ ಮೇಲಿರುವ ಮುಖ್ಯ ಆರೋಪವಾಗಿದೆ.
ಧಾರ್ಮಿಕ ಸ್ಥಳ ಅಥವಾ ನಿರ್ದಿಷ್ಟ ಸಮುದಾಯದ ಮೇಲಿನ ದಾಳಿ ಮತ್ತು ಧಾರ್ಮಿಕ ಭಾವನೆಗಳನ್ನು ಕೆರಳಿಸುವಂತಹ ಯಾವುದೇ ವರದಿಯನ್ನು ಪ್ರಸಾರ ಮಾಡುವಂತಿಲ್ಲ ಎಂದು 1994ರ ಕಾಯ್ದೆಯಲ್ಲಿ ಉಲ್ಲೇಖಿಸಲಾಗಿದೆ. ಕೋಮುಗಲಭೆಗೆ ಕೇಂದ್ರದ ಮೌನ ಸಮ್ಮತಿ ಇದೆ ಎಂದು ಏಷ್ಯಾನೆಟ್ ವರದಿಗಾರ ಮತ್ತು ಸುದ್ದಿವಾಚಕ ಹೇಳಿದ್ದನ್ನು ಸಚಿವಾಲಯದ ಆದೇಶವು ಉಲ್ಲೇಖಿಸಿದೆ.
ರಸ್ತೆಯಲ್ಲಿ ಜೈ ಶೀರಾಮ್ ಎಂದು ಘೋಷಣೆ ಕೂಗಿ ಮುಸ್ಲಿಮರ ಮೇಲೆ ದಾಳಿ ನಡೆಸುವ ವಿಡಿಯೊವನ್ನು ಪ್ರಸಾರ ಮಾಡಿದ್ದು, ಕೇಂದ್ರ ಸರ್ಕಾರ ಸರಿಯಾಗಿ ಕಾರ್ಯನಿರ್ವಹಿಸಿದ್ದರೆ ಕೆಲವೇ ಗಂಟೆಗಳ ಒಳಗೆ ಹಿಂಸಾಚಾರವನ್ನು ತಡೆಯಬಹುದಿತ್ತು. ಕೇಂದ್ರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ವರದಿಯಲ್ಲಿ ಹೇಳಿದ್ದಕ್ಕೂಸರ್ಕಾರ ಆಕ್ಷೇಪಿಸಿದೆ.
ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆಸುತ್ತಿದ್ದ ಪ್ರತಿಭಟನಾಕಾರರ ಮೇಲೆ ಗುಂಡಿನ ದಾಳಿ ನಡೆದಿರುವುದಾಗಿ ಫೋನ್–ಇನ್ ಕಾರ್ಯಕ್ರಮದಲ್ಲಿ ತಿಳಿಸಿದ್ದು ದಾಳಿಯಲ್ಲಿ ಐವರು ಗಾಯಗೊಂಡಿರುವುದಾಗಿ ವರದಿ ಹೇಳಿತ್ತು. ದಾಳಿಕೋರರು ಚಾಂದ್ ಬಾಗ್‌ನಲ್ಲಿ ಸಿಎಎ ವಿರೋಧಿ ಪ್ರತಿಭಟನಾಕಾರರ ಮೇಳೆ ದಾಳಿ ನಡೆಸಿದ್ದಾಗಿ ಫೋನ್–ಇನ್ ಕಾರ್ಯಕ್ರಮದಲ್ಲಿ ಹೇಳಿದ್ದು ಗಲಭೆಕೋರರು ಅಂಗಡಿಗಳಿಗೆ ಬೆಂಕಿ ಹಚ್ಚಿದಾಗ ಪೊಲೀಸರು ಸುಮ್ಮನಿದ್ದರು ಎಂದು ಸುದ್ದಿಮಾದ್ಯಮ ಆರೋಪಿಸಿದ್ದಾಗಿ ಎಂದು ಸಚಿವಾಲಯ ಆರೋಪಿಸಿದೆ.
ಕೇಂದ್ರ ಸರ್ಕಾರದ ಆರೋಪವನ್ನು ನಿರಾಕರಿಸಿರುವ ‘ಏಷ್ಯಾನೆಟ್ ಮತ್ತು ಮೀಡಿಯಾ ಒನ್ ಮಾಧ್ಯಮಗಳು ಮಾಡಬೇಕಾದ ಕೆಲಸವನ್ನು ನಾವು ಮಾಡಿದ್ದೇವೆ. ಸತ್ಯವನ್ನೇ ತೋರಿಸಿದ್ದೇವೆ’ ಎಂದು ತಿಳಿಸಿವೆ.
ಮೀಡಿಯಾ ಒನ್ ಪ್ರಕಟಣೆ
ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಮೀಡಿಯಾ ಒನ್ ಟಿವಿ ಮೇಲೆ 48 ಗಂಟೆಗಳ ನಿರ್ಬಂಧ ವಿಧಿಸಿದ್ದು ದುರದೃಷ್ಟ ಮತ್ತು ಖಂಡನಾರ್ಹಸಂಗತಿ. ಇದು ಮುಕ್ತ ಮತ್ತು ನ್ಯಾಯಸಮ್ಮತ ಪತ್ರಿಕೋದ್ಯಮದ ಮೇಲಿನ ಪ್ರಹಾರ. ಮಾರ್ಚ್ 6ರ ಸಂಜೆ 7.30ರಿಂದ ಮಾರ್ಚ್ 9ರ ಸಂಜೆ 7.30ರವರೆಗೆ ಪ್ರಸಾರ ನಿರ್ಬಂಧಿಸಿ ಕೇಂದ್ರ ಸರ್ಕಾರ ಆದೇಶಿಸಿದೆ. ಆರ್‌ಎಸ್‌ಎಸ್ ಮತ್ತು ದೆಹಲಿ ಪೊಲೀಸರನ್ನು ಟೀಕಿಸಿದ್ದಕ್ಕೆ ಈ ಶಿಕ್ಷೆ ವಿಧಿಸಲಾಗಿದೆ. ದೆಹಲಿ ಹಿಂಸಾಚಾರಕ್ಕೆ ಬಿಜೆಪಿ ನಾಯಕ ಕಪಿಲ್ ಮಿಶ್ರಾ ನೀಡಿದ ಹೇಳಿಕೆಗಳು ಕಾರಣ ಎಂಬ ಮೀಡಿಯಾ ಒನ್ ವರದಿಯನ್ನು ಸಚಿವಾಲಯದ ಆದೇಶ ಉಲ್ಲೇಖಿಸಿದೆ. ಹಿಂಸೆ ಪ್ರಚೋದಿಸುವ ಭಾಷಣ ಮಾಡಿದವರ ಮೇಲೆಎಫ್‌ಐಆರ್ ದಾಖಲಾಗಿಲ್ಲ ಎಂಬ ನಮ್ಮ ವರದಿಯು ಟಿವಿ ಕಾಯ್ದೆಯನ್ನು ಉಲ್ಲಂಘಿಸುತ್ತದೆ ಎಂದು ಆದೇಶ ಹೇಳುತ್ತದೆ. ಇದು ಮುಕ್ತ ಮತ್ತು ನ್ಯಾಯಸಮ್ಮತ ಪತ್ರಿಕೋದ್ಯಮವನ್ನು ನಿರ್ಬಂಧಿಸುವ ಪ್ರಯತ್ನವಲ್ಲದೆ ಮತ್ತೇನೂ ಅಲ್ಲ. ವಾರ್ತಾ ಮತ್ತು ಪ್ರಸಾರ ಇಲಾಖೆಯ ಪ್ರಜಾಪ್ರಭುತ್ವ ವಿರೋಧಿ ಕ್ರಮದ ವಿರುದ್ಧ ಮೀಡಿಯಾ ಒನ್ ಹೋರಾಡುತ್ತದೆ ಎಂದು ಮೀಡಿಯಾ ಒನ್ ಟಿವಯ ಪ್ರಧಾನ ಸಂಪಾದಕ ಸಿ.ಎಲ್.ಥಾಮಸ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.