ತಿರುವನಂತಪುರ/ ಕೊಚ್ಚಿ: ಮಲಯಾಳ ಸಿನಿಮಾ ನಿರ್ದೇಶಕ ರಂಜಿತ್ ಅವರು ಕೇರಳ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ ಸ್ಥಾನಕ್ಕೆ ಮತ್ತು ನಟ ಸಿದ್ದಿಕಿ ಅವರು ಮಲಯಾಳ ಸಿನಿಮಾ ಕಲಾವಿದರ ಸಂಘದ (ಎ.ಎಂ.ಎಂ.ಎ) ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಭಾನುವಾರ ರಾಜೀನಾಮೆ ಸಲ್ಲಿಸಿದ್ದಾರೆ.
ನ್ಯಾಯಮೂರ್ತಿ ಕೆ.ಹೇಮಾ ಸಮಿತಿಯು ಮಲಯಾಳ ಚಿತ್ರರಂಗದಲ್ಲಿ ಕಲಾವಿದೆಯರ ಮೇಲಿನ ಲೈಂಗಿಕ ದೌರ್ಜನ್ಯದ ಬಗ್ಗೆ ಬೆಳಕು ಚೆಲ್ಲಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ರಂಜಿತ್ ಅವರು ದುರ್ವರ್ತನೆ ತೋರಿದ್ದಾಗಿ ಕಳೆದ ವರ್ಷ ಬಂಗಾಳಿ ನಟಿಯೊಬ್ಬರು ಆರೋಪಿಸಿದ್ದರು. ಆದರೆ, ಹೇಮಾ ಸಮಿತಿ ವರದಿ ನಂತರ ವಿಷಯವು ಬೆಳಕಿಗೆ ಬಂದಿದ್ದು, ರಂಜಿತ್ ಅವರಿಗೆ ರಾಜೀನಾಮೆ ನೀಡುವಂತೆ ಒತ್ತಡ ಹೇರಲಾಗಿತ್ತು.
ಸಿದ್ದಿಕಿ ಅವರು ಲೈಂಗಿಕ ದೌರ್ಜನ್ಯ ಎಸಗಿದ್ದಾಗಿ ನಟಿಯೊಬ್ಬರು ಶನಿವಾರ ಆರೋಪಿಸಿದ್ದರು.
ರಂಜಿತ್ ಅವರು ಆಡಿಯೊ ತುಣುಕನ್ನು ಸುದ್ದಿವಾಹಿನಿಯೊಂದಕ್ಕೆ ಕಳುಹಿಸುವ ಮೂಲಕ ತಮ್ಮ ರಾಜೀನಾಮೆ ನಿರ್ಧಾರ ಘೋಷಿಸಿದ್ದಾರೆ.
‘ಅಕಾಡೆಮಿಯ ಅಧ್ಯಕ್ಷ ಸ್ಥಾನ ವಹಿಸಿಕೊಂಡಾಗಿನಿಂದ ಒಂದು ವರ್ಗದ ಜನರು ನನ್ನನ್ನು ಗುರಿ ಮಾಡಿದ್ದಾರೆ. ಆರೋಪಗಳೆಲ್ಲವೂ ಸುಳ್ಳು ಎಂದು ಸಮಾಜದ ಎದುರು ಸಾಬೀತು ಮಾಡಬೇಕಿದೆ’ ಎಂದು ಅವರು ಆಡಿಯೊದಲ್ಲಿ ಹೇಳಿದ್ದಾರೆ.
ಸಿದ್ದಿಕಿ ಅವರು ರಾಜೀನಾಮೆ ಪತ್ರವನ್ನು ಎ.ಎಂ.ಎಂ.ಎ ಅಧ್ಯಕ್ಷ ಮತ್ತು ನಟ ಮೋಹನ್‌ಲಾಲ್ ಅವರಿಗೆ ಕಳುಹಿಸಿದ್ದಾರೆ. ಸಿದ್ದಿಕಿ ಅವರ ನಿರ್ಧಾರವನ್ನು ಸಂಘದ ಹಲವು ಸದಸ್ಯರು ಸ್ವಾಗತಿಸಿದ್ದಾರೆ.
ಈ ಹುದ್ದೆಯಲ್ಲಿ ಮುಂದುವರಿದಲ್ಲಿ ಅದು ರಾಜ್ಯ ಸರ್ಕಾರದ ಘನತೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಕಾರಣ ರಾಜೀನಾಮೆ ಸಲ್ಲಿಸುತ್ತಿದ್ದೇನೆ. ನನ್ನ ಮೇಲಿನ ಆರೋಪದ ವಿರುದ್ಧ ಕಾನೂನಾತ್ಮಕವಾಗಿ ಹೋರಾಟ ನಡೆಸುತ್ತೇನೆರಂಜಿತ್, ಮಲಯಾಳ ಸಿನಿಮಾ ನಿರ್ದೇಶಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.