ನವದೆಹಲಿ : ಮಲಯಾಳದ ಪ್ರಸಿದ್ಧ ಕವಿ, ಅಕ್ಕಿತ್ತಂ ಎಂದೇ ಪ್ರಸಿದ್ಧರಾಗಿರುವ ಅಚ್ಯುತನ್ ನಂಬೂದಿರಿ (93) ಅವರು ಈ ವರ್ಷದ ಜ್ಞಾನಪೀಠ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
1926ರಲ್ಲಿ ಪಾಲಕ್ಕಾಡ್ ಜಿಲ್ಲೆಯ ಕುಮಾರನಲ್ಲೂರ್‌ನಲ್ಲಿಜನಿಸಿರುವ ಅಚ್ಯುತನ್ ಅವರು
ಕವಿತೆಗಳು ಮಾತ್ರವಲ್ಲದೆ ನಾಟಕ, ವಿಮರ್ಶಾ ಪ್ರಬಂಧ, ಮಕ್ಕಳ ಸಾಹಿತ್ಯ, ಸಣ್ಣ ಕಥೆ ಪ್ರಕಾರಗಳಲ್ಲೂ ಕೃತಿ ರಚನೆ ಮಾಡಿದ್ದಾರೆ.
‘ನಾನು ದೀರ್ಘಾಯು ಆಗಿರುವುದರಿಂದಲೇ ಈ ಗೌರವಕ್ಕೆ ಪಾತ್ರವಾಗುವುದು ಸಾಧ್ಯವಾಯಿತು’ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ತಮ್ಮ ಕವಿತಾ ರಚನೆಯ ದೊಡ್ಡ ಆಧಾರಸ್ತಂಭ ಆಗಿದ್ದವರು ತಮ್ಮ ಪತ್ನಿ ಶ್ರೀದೇವಿ. ಆದರೆ ಅವರು ತಮ್ಮ ಜತೆಗೆ ಈಗ ಇಲ್ಲ ಎಂಬುದು ಬಹಳ ಬೇಸರದ ಸಂಗತಿ ಎಂದು ಪಾಲಕ್ಕಾಡ್‌ನ ತಮ್ಮ ಮನೆಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡುತ್ತಾ ಅಕ್ಕಿತ್ತಂ ಹೇಳಿದ್ದಾರೆ. ಗಾಂಧಿಯ ಅನುಯಾಯಿಯಾಗಿರುವ ಅಕ್ಕಿತ್ತಂ, ಸಮಾಜ ಸುಧಾರಕ ಮತ್ತು ಪತ್ರಕರ್ತರಾಗಿಯೂ ಕೆಲಸ ಮಾಡಿದ್ದಾರೆ. ಸಾಂಪ್ರದಾಯಿಕ ನಂಬೂದಿರಿ ಕುಟುಂಬದಲ್ಲಿ ಜನಿಸಿದ ಅವರು ತಮ್ಮ ಎಂಟನೇ ವಯಸ್ಸಿನಲ್ಲಿಯೇ ಮೊದಲ ಕವನ ಬರೆದಿದ್ದರು.
‘ವೀರವಾದಂ’, ‘ಬಲಿದರ್ಶನಂ’, ‘ನಿಮಿಷ ಕ್ಷೇತ್ರಂ’, ‘ಅಕ್ಕಿತ್ತಂ ಕವಿತಗಂ’ ಸೇರಿದಂತೆ
55 ಕೃತಿಗಳನ್ನು ಅಕ್ಕಿತ್ತಂ ರಚಿಸಿದ್ದಾರೆ.
ಪದ್ಮಶ್ರೀ ಪುರಸ್ಕಾರ ಸೇರಿದಂತೆ ಹಲವು ಪ್ರಶಸ್ತಿಗಳು ಅವರಿಗೆ ಲಭಿಸಿವೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.