ಮಾಲೆ: ಮಾಲ್ದೀವ್ಸ್‌ನ ಉಪಸಚಿವರುಗಳು ಭಾರತದ ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಅವಮಾನಕರ ಮಾತು ಆಡಿರುವುದನ್ನು ‘ಮಾಲ್ದೀವ್ಸ್ ಅಸೋಸಿಯೇಷನ್ ಆಫ್ ಟೂರಿಸಂ ಇಂಡಸ್ಟ್ರಿ’ (ಎಂಎಐಟಿ) ಖಂಡಿಸಿದೆ.
ವಿವಾದವು ಉಭಯ ದೇಶಗಳ ನಡುವೆ ರಾಜತಾಂತ್ರಿಕ ಬಿಕ್ಕಟ್ಟಿಗೆ ಕಾರಣವಾದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಎಂಎಐಟಿ, ಪ್ರವಾಸೋದ್ಯಮಕ್ಕೆ ಹಿನ್ನಡೆ ಆಗದಂತೆ ‘ಹಾನಿ ತಡೆಯುವ’ ಪ್ರಯತ್ನ ನಡೆಸಿದೆ.
ಮೂವರು ಉಪಸಚಿವರು ಆಡಿದ ಮಾತುಗಳಿಗೆ ಭಾರತದಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು. ಮಾಲ್ದೀವ್ಸ್‌ಗೆ ಪ್ರವಾಸ ಕೈಗೊಳ್ಳುವುದನ್ನು ನಿಲ್ಲಿಸಬೇಕು ಎಂಬ ಅಭಿಯಾನ ಆರಂಭಿಸಲಾಗಿತ್ತು. ಮಾಲ್ದೀವ್ಸ್ ಬದಲು ಬೇರೆ ಪ್ರವಾಸಿ ತಾಣಗಳ ಕಡೆಗೆ ಗಮನ ಹರಿಸಬೇಕು ಎಂದು ಹಲವು ಸೆಲೆಬ್ರಿಟಿಗಳು ಕರೆ ನೀಡಿದ್ದರು.
‘ಮಾಲ್ದೀವ್ಸ್‌ನ ಕೆಲವು ಉಪಸಚಿವರುಗಳು ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಅವಮಾನಕರ ಹೇಳಿಕೆಗಳನ್ನು ಪೋಸ್ಟ್ ಮಾಡಿರುವುದನ್ನು ಎಂಎಐಟಿ ಬಲವಾಗಿ ಖಂಡಿಸುತ್ತದೆ’ ಎಂದು ಸಂಸ್ಥೆಯು ಸೋಮವಾರ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.
‘ಉಭಯ ದೇಶಗಳ ನಡುವಣ ನಿಕಟ ಸಂಬಂಧವು ಮುಂಬರುವ ತಲೆಮಾರುಗಳಿಗೂ ಮುಂದುವರಿಯಲಿದೆ ಎಂದು ಎಂಎಐಟಿ ಆಶಿಸುತ್ತದೆ. ನಮ್ಮ ಉತ್ತಮ ಸಂಬಂಧದ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ಎಲ್ಲ ರೀತಿಯ ಹೇಳಿಕೆಗಳಿಂದ ನಾವು ದೂರವೇ ಉಳಿಯುತ್ತೇವೆ’ ಎಂದಿದೆ.
2 ಸಾವಿರ ಪ್ರವಾಸಿಗರ ಆಗಮನ: ಮಾಲ್ದೀವ್ಸ್ ಪ್ರವಾಸ ಬಹಿಷ್ಕರಿಸಬೇಕು ಎಂಬ ಕೂಗು ಎದ್ದಿರುವ ನಡುವೆಯೇ 2,000 ಪ್ರವಾಸಿಗರಿದ್ದ ಕ್ರೂಸ್ ಹಡಗು ಕೊಚ್ಚಿಯಿಂದ ಸೋಮವಾರ ಇಲ್ಲಿಗೆ ಬಂದಿದೆ. ಇದು ಈ ವರ್ಷ ಮಾಲ್ದೀವ್ಸ್‌ಗೆ ಬಂದ ಮೊದಲ ಕ್ರೂಸ್ ಹಡಗು ಎಂದು ಸರ್ಕಾರಿ ಸ್ವಾಮ್ಯದ ಪಿಎಸ್‌ಎಂ ನ್ಯೂಸ್ ವರದಿ ಮಾಡಿದೆ.
‘ಕೊಚ್ಚಿಯಿಂದ ಹೊರಟಿದ್ದ ಕ್ರೂಸ್ ಹಡಗು ಮುಂಬೈ ಮತ್ತು ಗೋವಾಕ್ಕೆ ತೆರಳಿ ಅಲ್ಲಿಂದ ಮಾಲ್ದೀವ್ಸ್‌ಗೆ ಬಂದಿದೆ’ ಎಂದು ಮಾಲ್ದೀವ್ಸ್ ಅಸೋಸಿಯೇಷನ್ ಆಫ್ ಯಾಚ್ ಏಜೆಂಟ್ಸ್ ಸಂಸ್ಥೆಯನ್ನು ಉಲ್ಲೇಖಿಸಿ ವರದಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.