ADVERTISEMENT

ಮಾಲೇಗಾಂವ್‌ ಸ್ಫೋಟ: ಪ್ರಜ್ಞಾ ಸಿಂಗ್‌ ವಿರುದ್ಧ ಮರು ತನಿಖೆ?

ಪಿಟಿಐ
Published 21 ಮೇ 2019, 17:30 IST
Last Updated 21 ಮೇ 2019, 17:30 IST
   

ಮುಂಬೈ: ಮಾಲೇಗಾಂವ್‌ ಸ್ಫೋಟ ಪ್ರಕರಣದ ವಿಚಾರಣೆಗೆಸಂಬಂಧಿಸಿದಂತೆ, ನ್ಯಾಯಾಲಯದ ಖುದ್ದು ಹಾಜರಾತಿಯಿಂದ ಈ ವಾರ ವಿನಾಯಿತಿ ನೀಡುವಂತೆ ಮೂವರು ಆರೋಪಿಗಳು ಸಲ್ಲಿಸಿದ್ದ ಅರ್ಜಿಯನ್ನು ಎನ್‌ಐಎ ವಿಶೇಷ ನ್ಯಾಯಾಲಯ ಮಾನ್ಯ ಮಾಡಿದೆ.

ಆರೋಪಿಗಳಾದ ಪ್ರಜ್ಞಾ ಸಿಂಗ್‌ ಠಾಕೂರ್‌, ಲೆಫ್ಟಿನೆಂಟ್‌ ಕರ್ನಲ್‌ ಪ್ರಸಾದ್ ಪುರೋಹಿತ್‌ ಮತ್ತು ಸುಧಾಕರ್‌ ಚತುರ್ವೇದಿ ವಿನಾಯಿತಿ ನೀಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು.

ಲೋಕಸಭಾ ಚುನಾವಣಾ ಪ್ರಕ್ರಿಯೆಯಲ್ಲಿ ನಿರತವಾಗಿರುವ ಕಾರಣ ವಿಚಾರಣೆಗೆ ಹಾಜರಾಗುವುದು ಸಾಧ್ಯವಾಗುವುದಿಲ್ಲ. ಹಾಗಾಗಿ ವಿನಾಯಿತಿ ನೀಡಬೇಕು ಎಂದು ಮನವಿ ಮಾಡಿದ್ದರು. ಪುರೋಹಿತ್‌, ವೈಯಕ್ತಿಕ ಸಮಸ್ಯೆಯ ಕಾರಣಕ್ಕೆ ವಿನಾಯಿತಿ ಕೋರಿದ್ದರು.

ADVERTISEMENT

ಇದೇ ವೇಳೆ,ಮಾಲೇಗಾಂವ್‌ನಲ್ಲಿ ಸ್ಫೋಟ ನಡೆದ ಸ್ಥಳಕ್ಕೆ ಭೇಟಿ ನೀಡಲು ಅವಕಾಶ ಕೋರಿ ಆರೋಪಿ ಪರ ವಕೀಲರು ಸಲ್ಲಿಸಿದ್ದ ಅರ್ಜಿಗೂ ನ್ಯಾಯಾಲಯ ಸಮ್ಮತಿ ಸೂಚಿಸಿದೆ.

ಕಳೆದ ವಾರ ಪ್ರಕರಣದ ವಿಚಾರಣೆ ನಡೆಸಿದ ಎನ್‌ಐಎ ನ್ಯಾಯಾಲಯ, ಎಲ್ಲಾ ಆರೋಪಿಗಳು ಕನಿಷ್ಠ ವಾರಕ್ಕೊಮ್ಮೆಯಾದರೂ ನ್ಯಾಯಾಲಯದ ಮುಂದೆ ಹಾಜರಾಗುವಂತೆ ನಿರ್ದೇಶನ ನೀಡಿತ್ತು.

ಒಂದೊಮ್ಮೆಹಾಜರಾಗಲು ಸಾಧ್ಯವಾಗದಿದ್ದರೆ ಸೂಕ್ತ ಕಾರಣಗಳನ್ನು ನೀಡಿದರೆ ವಿನಾಯಿತಿ ನೀಡಲಾಗುವುದು ಎಂದು ತಿಳಿಸಿತ್ತು.

ನಾಸಿಕ್‌ ಜಿಲ್ಲೆಯ ಮಾಲೇಗಾಂವ್‌ನಲ್ಲಿ ದ್ವಿಚಕ್ರ ವಾಹನಕ್ಕೆ ಅಳವಡಿಸಿದ್ದ ಬಾಂಬ್‌ 2008ರ ಸೆಪ್ಟೆಂಬರ್‌ 29ರಂದು ಸ್ಫೋಟಗೊಂಡು ಆರು ಮಂದಿ ಮೃತಪಟ್ಟಿದ್ದರು. ಸುಮಾರು ನೂರು ಜನರು ಗಾಯಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.