ADVERTISEMENT

DCW ದುರ್ಬಲಗೊಳ್ಳುತ್ತಿದೆ ಎಂಬುದು ಸುಳ್ಳು: ಸ್ವಾತಿ ಆರೋಪಕ್ಕೆ ಸಮಿತಿ ತಿರುಗೇಟು

ಪಿಟಿಐ
Published 3 ಜುಲೈ 2024, 14:32 IST
Last Updated 3 ಜುಲೈ 2024, 14:32 IST
ಸ್ವಾತಿ ಮಾಲಿವಾಲ್‌
ಸ್ವಾತಿ ಮಾಲಿವಾಲ್‌   

ನವದೆಹಲಿ: ದೆಹಲಿ ಮಹಿಳಾ ಆಯೋಗವನ್ನು (ಡಿಸಿಡಬ್ಲ್ಯು) ಎಎಪಿ ಸರ್ಕಾರವು ವ್ಯವಸ್ಥಿತವಾಗಿ ದುರ್ಬಲಗೊಳಿಸುತ್ತಿದೆ ಎಂಬ ರಾಜ್ಯಸಭೆ ಸದಸ್ಯೆ ಸ್ವಾತಿ ಮಾಲಿವಾಲ್ ಆರೋಪವು ದುರುದ್ದೇಶ ಮತ್ತು ಕಪೋಲಕಲ್ಪಿತವಾಗಿದೆ ಎಂದು ಇಬ್ಬರು ಸದಸ್ಯರ ಸಮಿತಿಯು ಹೇಳಿದೆ. 

ಈ ಸಂಬಂಧ ಮಾಲಿವಾಲ್ ಅವರಿಗೆ ಪತ್ರ ಬರೆದಿರುವ ದೆಹಲಿ ಮಹಿಳಾ ಆಯೋಗದ ಇಬ್ಬರು ಸದಸ್ಯರಾದ ಫಿರ್ದೊಸ್ ಖಾನ್ ಮತ್ತು ಕಿರಣ್ ನೇಗಿ, ತಮ್ಮ ವೈಯಕ್ತಿಕ ರಾಜಕೀಯ ಲಾಭಕ್ಕಾಗಿ ಕಳೆದ ವರ್ಷದ ನವೆಂಬರ್‌ನಿಂದ ವೇತನವಿಲ್ಲದೆ ಕೆಲಸ ನಿರ್ವಹಿಸುತ್ತಿರುವ 700ಕ್ಕೂ ಹೆಚ್ಚು ಮಹಿಳೆಯರ ಶ್ರಮವನ್ನು ಬಳಸಿಕೊಳ್ಳಬಾರದು ಎಂದು ಒತ್ತಾಯಿಸಿದ್ದಾರೆ. 

‘ನಗರದಲ್ಲಿನ ವಿವಿಧ ಕಾರ್ಯಕ್ರಮಗಳು ಮತ್ತು ಮಹಿಳಾ ಆಯೋಗದಲ್ಲಿ 700ಕ್ಕೂ ಹೆಚ್ಚು ಮಹಿಳೆಯರು ಕಾರ್ಯನಿರ್ವಹಿಸುತ್ತಿದ್ದಾರೆ. ಅವರು 2023ರ ನವೆಂಬರ್‌ನಿಂದಲೂ ವೇತನವಿಲ್ಲದೆ ಕಾರ್ಯ ನಿರ್ವಹಿಸುತ್ತಿದ್ದಾರೆ. ನಿಮ್ಮ ಸಲುವಾಗಿ ಇವರೆಲ್ಲೂ ಕೆಲಸ ಮಾಡಿದ್ದಾರೆ. ದೆಹಲಿ ಮಹಿಳಾ ಆಯೋಗಕ್ಕೆ ನೀವು ರಾಜೀನಾಮೆ ಸಲ್ಲಿಸಿದ ಬಳಿಕ ಆಯೋಗದ ವಿರುದ್ಧ ಹೇಳಿಕೆಗಳನ್ನು ನೀಡುತ್ತಿದ್ದೀರಿ’ ಎಂದು ಈ ಪತ್ರದಲ್ಲಿ ಆರೋಪಿಸಲಾಗಿದೆ. 

ADVERTISEMENT

‘ವ್ಯವಸ್ಥೆಯ ಪಟ್ಟಭದ್ರ ಹಿತಾಸಕ್ತಿಗಳು 2016ರಿಂದಲೇ ಆಯೋಗದ ಮೇಲೆ ದಾಳಿ ಮಾಡಲು ಆರಂಭಿಸಿವೆ. ಆದರೆ, ಮುಖ್ಯಮಂತ್ರಿ ಮತ್ತು ಸರ್ಕಾರವು ಆಯೋಗದ ಜತೆಗೆ ಗಟ್ಟಿಯಾಗಿ ನಿಂತಿದೆ. ದಯವಿಟ್ಟು ಜನರಿಂದ ಆಯ್ಕೆಯಾದ ಸರ್ಕಾರದ ಮೇಲೆ ದಾಳಿ ಮಾಡುವುದರಿಂದ ದೂರವಿರಿ. ಜತೆಗೆ ಲೆಫ್ಟಿನೆಂಟ್ ಗವರ್ನರ್ ಅವರ ನಿಜವಾದ ಮುಖವನ್ನು ಬಯಲು ಮಾಡಲು ಮುಂದಾಗಿ’ ಎಂದು ಪತ್ರದಲ್ಲಿ ಸಲಹೆ ನೀಡಲಾಗಿದೆ. 

‘‍ಡಿಸಿಡಬ್ಲ್ಯು ಅಧ್ಯಕ್ಷೆ ಸ್ಥಾನಕ್ಕೆ ನಾನು ರಾಜೀನಾಮೆ ನೀಡಿದ ಬಳಿಕ ಆ ಸಂಸ್ಥೆಯನ್ನು ಎಎಪಿ ಸರ್ಕಾರವು ವ್ಯವಸ್ಥಿತವಾಗಿ ದುರ್ಬಲಗೊಳಿಸುತ್ತಿದೆ ಎಂದು ಆರೋಪಿಸಿ ಸಂಸದೆ ಮಾಲಿವಾಲ್ ಅವರು, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೆ ಮಂಗಳವಾರ ಪತ್ರ ಬರೆದಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.