ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ‘ಇಂಡಿಯಾ’ ಮೈತ್ರಿಕೂಟದ ಎಲ್ಲಾ ಸಹವರ್ತಿ ಪಕ್ಷಗಳ ನಾಯಕರ ಜೊತೆಯೂ ಸಂಪರ್ಕದಲ್ಲಿದ್ದಾರೆ ಎಂದು ಪಕ್ಷವು ಬುಧವಾರ ಹೇಳಿದೆ. ಮೈತ್ರಿಕೂಟದ ಕೆಲ ಪಕ್ಷಗಳ ಜೊತೆಗೆ ಸೀಟುಹಂಚಿಕೆ ಕುರಿತು ಮಾತುಕತೆ ಆರಂಭಿಸಿದ ಬಳಿಕ ಕಾಂಗ್ರೆಸ್ ಹೀಗೆ ಹೇಳಿದೆ.
ಮೈತ್ರಿಕೂಟಕ್ಕೆ ಒಬ್ಬ ಸಂಚಾಲಕನ ಅಗತ್ಯವಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಜೊತೆಗೆ, ಆ ಹುದ್ದೆಗೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಹೆಸರೂ ಚಾಲ್ತಿಯಲ್ಲಿದೆ. ಈ ನಡುವೆಯೇ ಕಾಂಗ್ರೆಸ್ ಈ ಹೇಳಿಕೆ ನೀಡಿದೆ. ಮೈತ್ರಿಕೂಟಕ್ಕಾಗಿಯೇ ಒಂದು ಕಚೇರಿ ಮತ್ತು ವಕ್ತಾರರು ಇರಬೇಕು ಎಂಬ ಒತ್ತಾಯವೂ ಇದೆ.
‘ಮೈತ್ರಿಕೂಟದಲ್ಲಿ ಸಮನ್ವಯ ಸಾಧಿಸುವ ನಿಟ್ಟಿನಲ್ಲಿ ಖರ್ಗೆ ಅವರು ಎಲ್ಲಾ ಪಕ್ಷಗಳ ನಾಯಕರ ಜೊತೆ ಸಂಪರ್ಕದಲ್ಲಿದ್ದಾರೆ. ಸೀಟುಹಂಚಿಕೆ ಕುರಿತ ಮಾತುಕತೆಯು ಕೆಲ ಪಕ್ಷಗಳ ಜೊತೆ ಸಾಕಷ್ಟು ಪ್ರಗತಿ ಸಾಧಿಸಿದೆ. ಇನ್ನು ಕೆಲ ಪಕ್ಷಗಳ ಜೊತೆ ಆರಂಭಿಕ ಹಂತದಲ್ಲಿದೆ’ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ಹೇಳಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಜೊತೆ, ಬಿಹಾರದಲ್ಲಿ ಜೆಡಿಯು ಜೊತೆ ಮಾತುಕತೆಯು ಇನ್ನೆರಡು ದಿನಗಳಲ್ಲಿ ಆರಂಭವಾಗುವ ನಿರೀಕ್ಷೆ ಇದೆ.
‘ಸೀಟು ಹಂಚಿಕೆ ಕುರಿತು ನಾಯಕರ ಮಧ್ಯೆ ಸ್ಪಷ್ಟತೆ ಇದೆ. ಎಲ್ಲಾ ಮಿತ್ರ ಪಕ್ಷಗಳಿಗೂ ಸೀಟು ಹೊಂದಾಣಿಕೆ ಮಾಡಿಕೊಡುವ ನಿಟ್ಟಿನಲ್ಲಿ ಕಾಂಗ್ರೆಸ್ ಬದ್ಧವಾಗಿದೆ’ ಎಂದು ಅವರು ಹೇಳಿದರು.
‘ಸೀಟು ಹಂಚಿಕೆ ಪ್ರಕ್ರಿಯೆಗೆ ವೇಗ’ (ಶ್ರೀನಗರ ವರದಿ): ಉತ್ತರ ಪ್ರದೇಶ, ಪಶ್ವಿಮ ಬಂಗಾಳ, ಮಹಾರಾಷ್ಟ್ರ, ಬಿಹಾರ, ತಮಿಳುನಾಡು ಮತ್ತು ಪಂಜಾಬ್ ರಾಜ್ಯಗಳಲ್ಲಿ ‘ಇಂಡಿಯಾ’ ಮೈತ್ರಿಕೂಟದ ಪಕ್ಷಗಳು ಉತ್ತಮ ಫಲಿತಾಂಶದ ಭರವಸೆ ಹೊಂದಬಹುದು. ಹೀಗಾಗಿ ಈ ರಾಜ್ಯಗಳಲ್ಲಿ ಸೀಟುಹಂಚಿಕೆ ಪ್ರಕ್ರಿಯೆಗೆ ವೇಗ ನೀಡಬೇಕು ಎಂದು ನ್ಯಾಷನಲ್ ಕಾನ್ಫರೆನ್ಸ್ ಉಪಾಧ್ಯಕ್ಷ ಒಮರ್ ಅಬ್ದುಲ್ಲಾ ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಕ್ ಕೇಂದ್ರಾಡಳಿತ ಪ್ರದೇಶಗಳ ಲೋಕಸಭೆ ಚುನಾವಣೆಗೆ ಸೀಟುಹಂಚಿಕೆ ಮಾತುಕತೆಗಳು ಇನ್ನೂ ಆರಂಭವಾಗಿಲ್ಲ ಎಂದು ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.
‘ನಾವು ಕೂಡಾ ‘ಇಂಡಿಯಾ’ ಮೈತ್ರಿಕೂಟದ ಭಾಗ. ಆರು ಕ್ಷೇತ್ರಗಳಿಗಾಗಿ ನಾವು ಮಾತುಕತೆ ನಡೆಸಬೇಕಿದೆ. ಸೀಟುಹಂಚಿಕೆ ಕುರಿತು ನಿರ್ಧಾರ ತೆಗೆದುಕೊಳ್ಳಲು 15 ನಿಮಿಷ ಸಾಕು’ ಎಂದು ಅವರು ಹೇಳಿದ್ದಾರೆ.
ನಾಳೆ ಎಎಪಿ– ಕಾಂಗ್ರೆಸ್ ಚರ್ಚೆ ಸಾಧ್ಯತೆ
ನವದೆಹಲಿ (ಪಿಟಿಐ): ಲೋಕಸಭೆ ಚುನಾವಣೆಗಾಗಿ ಎಎಪಿ ಮತ್ತು ತಮ್ಮ ಪಕ್ಷದ ನಡುವಿನ ಸೀಟು ಹಂಚಿಕೆ ವಿಷಯವು ಇದೇ 12ರಂದು ನಡೆಯಲಿರುವ ಸಭೆಯಲ್ಲಿ ಚರ್ಚೆಗೆ ಬರುವ ಸಾಧ್ಯತೆ ಇದೆ ಎಂದು ದೆಹಲಿ ಕಾಂಗ್ರೆಸ್ ಅಧ್ಯಕ್ಷ ಅರವಿಂದ್ ಸಿಂಗ್ ಲವ್ಲಿ ಹೇಳಿದರು.
ಜನವರಿ 8ರಂದು ನಡೆದ ಮೊದಲ ಸಭೆಯಲ್ಲಿ ಸೀಟು ಹಂಚಿಕೆ ಬಗ್ಗೆ ಯಾವುದೇ ಚರ್ಚೆ ನಡೆಯಲಿಲ್ಲ. ದೆಹಲಿ ಕಾಂಗ್ರೆಸ್ ಮತ್ತು ಎಪಿಪಿ ಅಂದು ಮೊದಲ ಬಾರಿಗೆ ಮಾತುಕತೆಗೆಂದು ಸಭೆ ನಡೆಸಿದವು ಎಂದರು.
‘ಕಾಂಗ್ರೆಸ್‌ಗೆ ಎಎಪಿ ಮೂರು ಸ್ಥಾನಗಳನ್ನು ಬಿಟ್ಟುಕೊಡಲು ಮುಂದಾಗಿದೆ ಎಂಬ ಮಾಧ್ಯಮಗಳ ವರದಿ ಸರಿಯಲ್ಲ. ಅಂದಿನ ಸಭೆಯಲ್ಲಿ ಚುನಾವಣೆ ಎದುರಿಸುವ ವಿವಿಧ ಕಾರ್ಯತಂತ್ರಗಳ ಬಗ್ಗೆ ಚರ್ಚಿಸಲಾಯಿತು. ಮುಂದಿನ ಸಭೆಯಲ್ಲಿ ಸೀಟು ಹಂಚಿಕೆ ವಿಷಯ ಚರ್ಚೆ ಆಗಬಹುದು’ ಎಂದು ಅವರು ಸುದ್ದಿಸಂಸ್ಥೆಗೆ ತಿಳಿಸಿದರು.
ದೆಹಲಿ, ಪಂಜಾಬ್, ಹರಿಯಾಣ, ಗೋವಾ ಮತ್ತು ಗುಜರಾತ್ ಈ ಐದು ರಾಜ್ಯಗಳಲ್ಲಿ ಎಎಪಿಯು ಕಾಂಗ್ರೆಸ್ ಜತೆಗೂಡಿ ಸ್ಪರ್ಧಿಸಲಿದೆ. ಈ ದಿಸೆಯಲ್ಲಿ ಈವರೆಗೆ ನಡೆದ ಚರ್ಚೆಗಳು ಸಕಾರಾತ್ಮಕವಾಗಿವೆ ಎಂದು ಪಕ್ಷದ ದೆಹಲಿ ಸಂಚಾಲಕ ಗೋಪಾಲ್ ರಾಯ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.