ADVERTISEMENT

‘ತುರ್ತು ಪರಿಸ್ಥಿತಿ’ಗೆ 50 ವರ್ಷ: ಪ್ರಧಾನಿ ಹೇಳಿಕೆಗೆ ಖರ್ಗೆ ತಿರುಗೇಟು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 25 ಜೂನ್ 2024, 8:02 IST
Last Updated 25 ಜೂನ್ 2024, 8:02 IST
   

ಬೆಂಗಳೂರು: ದೇಶದಲ್ಲಿ ತುರ್ತು ಪರಿಸ್ಥಿತಿ ಜಾರಿಯಾಗಿ ಇಂದಿಗೆ (ಜೂನ್‌ 25) 49 ವರ್ಷ ತುಂಬಲಿದ್ದು, 50ನೇ ವರ್ಷ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದು, ಇದಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿರುಗೇಟು ನೀಡಿದ್ದಾರೆ.

ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಖರ್ಗೆ, ‘ಕಳೆದ 10 ವರ್ಷಗಳಲ್ಲಿ 140 ಕೋಟಿ ಭಾರತೀಯರನ್ನು ಅನುಭವಿಸುವಂತೆ ಮಾಡಿದ 'ಅಘೋಷಿತ ತುರ್ತು ಪರಿಸ್ಥಿತಿ' ಪ್ರಜಾಪ್ರಭುತ್ವ ಮತ್ತು ಸಂವಿಧಾನಕ್ಕೆ ಆಳವಾದ ಹೊಡೆತವನ್ನು ನೀಡಿದೆ' ಎಂದು ಹೇಳಿದ್ದಾರೆ.

ದೇಶವು ಭವಿಷ್ಯದತ್ತ ನೋಡುತ್ತಿದೆ. ಆದರೆ ನೀವು ನಿಮ್ಮ ನ್ಯೂನತೆಗಳನ್ನು ಮರೆಮಾಚಲು ನೀವು ಭೂತಕಾಲದ ಬಗ್ಗೆ ಹೇಳುತ್ತಿರುತ್ತೀರಿ ಎಂದಿದ್ದಾರೆ.

ADVERTISEMENT

'ಪಕ್ಷಗಳನ್ನು ಒಡೆಯುವುದು, ಚುನಾಯಿತ ಸರ್ಕಾರಗಳನ್ನು ಮೋಸದಿಂದ ಬೀಳಿಸುವುದು, ಇ.ಡಿ, ಸಿಬಿಐ, ಐಟಿಯನ್ನು ಪ್ರತಿಪಕ್ಷಗಳ ನಾಯಕರ ಮೇಲೆ ಪ್ರಯೋಗಿಸುವುದು, ಮುಖ್ಯಮಂತ್ರಿಗಳನ್ನು ಜೈಲಿಗೆ ಹಾಕುವುದು ಇವು ಅಘೋಷಿತ ತುರ್ತು ಪರಿಸ್ಥಿತಿಯಲ್ಲವೇ?' ಎಂದು ಖರ್ಗೆ ಪ್ರಶ್ನಿಸಿದ್ದಾರೆ.

ಮೋದಿ ಅವರು ಒಮ್ಮತ ಮತ್ತು ಸಹಕಾರದ ಬಗ್ಗೆ ಮಾತನಾಡುತ್ತಾರೆ. ಆದರೆ ಅವರ ಕಾರ್ಯಗಳು ಇದಕ್ಕೆ ವಿರುದ್ಧವಾಗಿವೆ ಎಂದು ಕುಟುಕಿದ್ದಾರೆ.

  • 146 ಜನ ಸಂಸದರನ್ನು ಸಂಸತ್‌ನಿಂದ ಅಮಾನತುಗೊಳಿಸಿ, ಭಾರತೀಯ ನ್ಯಾಯ ಸಂಹಿತೆ, ಭಾರತೀಯ ಸಾಕ್ಷ್ಯ ಸಂಹಿತೆ ಹಾಗೂ ಭಾರತೀಯ ನಾಗರಿಕ ಸುರಕ್ಷಾ ಕಾಯಿದೆಗಳನ್ನು ಅಂಗೀಕರಿಸಿದಾಗ ಒಮ್ಮತದ ಪದ ಎಲ್ಲಿತ್ತು?.

  • ಛತ್ರಪತಿ ಶಿವಾಜಿ ಮಹಾರಾಜ್‌, ಮಹಾತ್ಮ ಗಾಂಧೀಜಿ ಮತ್ತು ಬಾಬಾಸಾಹೇಬ್ ಡಾ. ಅಂಬೇಡ್ಕರ್ ಅವರಂತಹ ಮಹಾನ್ ವ್ಯಕ್ತಿಗಳ ಪ್ರತಿಮೆಗಳನ್ನು ಪ್ರತಿಪಕ್ಷಗಳನ್ನು ಕೇಳದೆ ಸಂಸತ್ತಿನ ಅಂಗಳದಿಂದ ಮೂಲೆಗೆ ಸ್ಥಳಾಂತರಿಸಿದಾಗ, ಒಮ್ಮತದ ಪದ ಎಲ್ಲಿತ್ತು?.

  • ನಮ್ಮ 15 ಕೋಟಿ ರೈತ ಕುಟುಂಬಗಳ ಮೇಲೆ ಮೂರು ಕರಾಳ ಕಾನೂನನ್ನು ಹೇರಿ ತಿಂಗಳಾನುಗಟ್ಟಲೆ ಅವರದೇ ನಾಡಿನಲ್ಲಿ ಬೀದಿಗಿಳಿದು ಹಿಂಸಿಸಿದಾಗ ಒಮ್ಮತದ ಮಾತು ಎಲ್ಲಿತ್ತು?.

  • ನೋಟು ಅಮಾನ್ಯೀಕರಣವಾಗಲಿ, ತರಾತುರಿಯಲ್ಲಿ ಜಾರಿಯಾದ ಲಾಕ್‌ಡೌನ್ ಆಗಲಿ ಅಥವಾ ಚುನಾವಣಾ ಬಾಂಡ್‌ಗಳ ಕಾನೂನು ಆಗಿರಲಿ, ಮೋದಿ ಸರ್ಕಾರವು ಒಮ್ಮತ ಅಥವಾ ಸಹಕಾರವನ್ನು ಬಳಸದ ನೂರಾರು ಉದಾಹರಣೆಗಳಿವೆ ಎಂದು ಖರ್ಗೆ ಹೇಳಿದ್ದಾರೆ.

17ನೇ ಲೋಕಸಭೆಯಲ್ಲಿ ಇತಿಹಾಸದಲ್ಲಿ ಕೇವಲ ಶೇ 16 ಮಸೂದೆಗಳು ಮಾತ್ರ ಸಂಸದೀಯ ಸ್ಥಾಯಿ ಸಮಿತಿಯ ಮುಂದೆ ಹೋದವು ಮತ್ತು ಲೋಕಸಭೆಯಲ್ಲಿ ಶೇ 35 ಮಸೂದೆಗಳು ಒಂದು ಗಂಟೆಯೊಳಗೆ ಅಂಗೀಕಾರಗೊಂಡವು. ರಾಜ್ಯಸಭೆಯಲ್ಲೂ ಈ ಪ್ರಮಾಣ ಶೇ 34ರಷ್ಟಿದೆ. ಪ್ರಜಾಪ್ರಭುತ್ವ ಮತ್ತು ಸಂವಿಧಾನದ ದುಸ್ಥಿತಿಗೆ ಬಿಜೆಪಿ ಕಾರಣವಾಗಿದೆ. ಕಾಂಗ್ರೆಸ್ ಯಾವಾಗಲೂ ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಬೆಂಬಲಿಸುತ್ತದೆ. ನಾವೂ ಅದನ್ನು ಬೆಂಬಲಿಸುತ್ತೇವೆ ಎಂದು ಖರ್ಗೆ ಸಮರ್ಥಿಸಿಕೊಂಡಿದ್ದಾರೆ.

ಪ್ರಧಾನಿ ಹೇಳಿದ್ದೇನು?

ಇಂದು ತುರ್ತು ಪರಿಸ್ಥಿತಿಯನ್ನು ವಿರೋಧಿಸಿದ ಎಲ್ಲ ಮಹಾಪುರುಷರಿಗೆ ಮತ್ತು ಮಹಿಳೆಯರಿಗೆ ಗೌರವ ಸಲ್ಲಿಸುವ ದಿನವಾಗಿದೆ. #DarkDaysOfEmergency ಕಾಂಗ್ರೆಸ್ ಪಕ್ಷವು ಮೂಲಭೂತ ಸ್ವಾತಂತ್ರ್ಯಗಳನ್ನು ಹೇಗೆ ಬುಡಮೇಲು ಮಾಡಿತು ಮತ್ತು ಪ್ರತಿಯೊಬ್ಬ ಭಾರತೀಯನು ಗೌರವಿಸುವ ಭಾರತದ ಸಂವಿಧಾನವನ್ನು ಹೇಗೆ ತುಳಿಯಿತು ಎಂಬುದನ್ನು ನಮಗೆ ನೆನಪಿಸುತ್ತದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

ದೇಶದ ಪ್ರಜಾಪ್ರಭುತ್ವ ಸಂಪ್ರದಾಯಗಳಲ್ಲಿ ನಂಬಿಕೆ ಇರುವವರಿಗೆ ಜೂನ್ 25 ಮರೆಯಲಾಗದ ದಿನ. 50 ವರ್ಷಗಳ ಹಿಂದೆ ಇದೇ ದಿನ ಸಂವಿಧಾನ ತಿರಸ್ಕರಿಸಿ ತುರ್ತು ಪರಿಸ್ಥಿತಿ ಹೇರಲಾಯಿತು. ಸಂವಿಧಾನವನ್ನು ಛಿದ್ರಗೊಳಿಸಲಾಯಿತು, ದೇಶವನ್ನು ಸೆರೆಮನೆಯಾಗಿ ಪರಿವರ್ತಿಸಲಾಯಿತು ಹಾಗೂ ಪ್ರಜಾಪ್ರಭುತ್ವವನ್ನು ಹೇಗೆ ಸಂಪೂರ್ಣವಾಗಿ ನಿಗ್ರಹಿಸಲಾಯಿತು ಎಂಬುದನ್ನು ಹೊಸ ಪೀಳಿಗೆ ಎಂದಿಗೂ ಮರೆಯಬಾರದು. ಇದೊಂದು ಪ್ರಜಾಪ್ರಭುತ್ವಕ್ಕೆ ಕಪ್ಪು ಚುಕ್ಕೆ. ಇಂತಹ ವಿಕೃತಿ ಮತ್ತೆ ಸಂಭವಿಸಲು ಅವಕಾಶ ನೀಡುವುದಿಲ್ಲ ಎಂದು ದೇಶವಾಸಿಗಳು ಸಂಕಲ್ಪ ಮಾಡಬೇಕು.
ನರೇಂದ್ರ ಮೋದಿ, ಪ್ರಧಾನಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.