ನವದೆಹಲಿ: ‘ಉಡಾನ್’ ಯೋಜನೆಯು ಶೇ. 93ರಷ್ಟು ಮಾರ್ಗಗಳಲ್ಲಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಮಹಾಲೇಖಪಾಲರ (ಸಿಎಜಿ) ವರದಿಯನ್ನು ಉಲ್ಲೇಖಿಸಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರವನ್ನು ಟೀಕಿಸಿದ್ದಾರೆ.
ಉಡಾನ್ ಯೋಜನೆ ಕುರಿತಂತೆ ಮಹಾಲೇಖಪಾಲರ ವರದಿಯನ್ನು ಉಲ್ಲೇಖಿಸಿ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಅವರು ಸಾಮಾನ್ಯ ಜನರಿಗೆ ಕೇಂದ್ರದಿಂದ ಸಿಕ್ಕಿರುವುದು ಕೇವಲ ‘ಸುಳ್ಳುಗಳು’ ಮತ್ತು ‘ಜುಮ್ಲಾಗಳಷ್ಟೇ’ ಎಂದು ಹೇಳಿದ್ದಾರೆ.
ಸಾಮಾನ್ಯರು ಕೂಡ ವಿಮಾನದಲ್ಲಿ ಪ್ರಯಾಣಿಸಬಹುದು ಎಂದು ಪ್ರಧಾನಿ ಮೋದಿ ಹೇಳಿದ್ದರು. ಆದರೆ ಅವರು ಕೊಟ್ಟ ಅನೇಕ ಭರವಸೆಗಳಂತೆ ಇದೂ ಈಡೇರಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.
‘ಯೋಜನೆ ಕಾರ್ಯಗತಗೊಂಡಿಲ್ಲ ಎಂದು ನಾವು ಹೇಳುತ್ತಿಲ್ಲ, ಆದರೆ ‘ಉಡಾನ್’ ಯೋಜನೆ ಶೇ. 93ರಷ್ಟು ಮಾರ್ಗಗಳಲ್ಲಿ ಕಾರ್ಯನಿರ್ವಹಿಸುತ್ತಿಲ್ಲ ಎಂಬುದನ್ನು ಸಿಎಜಿ ವರದಿ ಹೇಳಿದೆ ಎಂದಿದ್ದಾರೆ. ಇದರ ಜೊತೆಗೆ ಹೆಲಿಕಾಪ್ಟರ್ ಸೇವೆ ಯೋಜನೆಯೂ ಸ್ಥಗಿತವಾಗಿದೆ. ದೇಶದ ಜನರು ಎಂದಿಗೂ ಈ ಸರ್ಕಾರವನ್ನು ಕ್ಷಮಿಸುವುದಿಲ್ಲ’ ಎಂದು ಖರ್ಗೆ ಆರೋಪಿಸಿದ್ದಾರೆ.
ಉಡಾನ್ (ಪ್ರಾದೇಶಿಕವಾರು ಸಂಪರ್ಕ ಕಲ್ಪಿಸುವ) ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ. ಪ್ರಧಾನಿ ನರೇಂದ ಮೋದಿ ಅಕ್ಟೋಬರ್ 21, 2016ರಂದು ಈ ಯೋಜನೆಯನ್ನು ಪ್ರಾರಂಭ ಮಾಡಿದ್ದರು. ದೇಶದ 2, 3ನೇ ಹಂತದ ನಗರಗಳು, ಪಟ್ಟಣಗಳ ನಿವಾಸಿಗಳಿಗೂ ಕೈಗೆಟುಕುವ ದರದಲ್ಲಿ ವಿಮಾನ ಪ್ರಯಾಣಕ್ಕೆ ಅವಕಾಶ ಕಲ್ಪಿಸುವುದು ಈ ಯೋಜನೆಯ ಉದ್ದೇಶವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.