ನವದೆಹಲಿ: ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ನಡೆದಚುನಾವಣೆಯಲ್ಲಿ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಸಂಸದ ಶಶಿ ತರೂರ್ ಎದುರು ಗೆಲುವು ಸಾಧಿಸಿದ್ದಾರೆ.
ಇಂದು ಮತ ಎಣಿಕೆ ಕಾರ್ಯ ಪೂರ್ಣಗೊಂಡಿದ್ದು, ಮಲ್ಲಿಕಾರ್ಜುನ ಖರ್ಗೆ ಅವರು 7897, ಶಶಿ ತರೂರ್ 1000 ಮತಗಳನ್ನು ಪಡೆದಿದ್ದಾರೆ. 416 ಮತಗಳು ತಿರಸ್ಕೃತಗೊಂಡಿವೆ. ಇದರೊಂದಿಗೆ 6,897 ಮತಗಳ ಅಂತರದಲ್ಲಿ ಖರ್ಗೆ, ತರೂರ್ ಅವರನ್ನು ಸೋಲಿಸಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸೋಮವಾರ ನಡೆದ ಚುನಾವಣೆಯಲ್ಲಿ ಶೇ 96ರಷ್ಟು ಮತದಾನವಾಗಿತ್ತು. 9,915 ಪ್ರತಿನಿಧಿಗಳ ಪೈಕಿ 9,500 ಪ್ರತಿನಿಧಿಗಳು ತಮ್ಮ ಹಕ್ಕು ಚಲಾಯಿಸಿದ್ದರು.
ಮತ ಎಣಿಕೆ ಪೂರ್ಣಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ತರೂರ್, ‘ಕಾಂಗ್ರೆಸ್ ಪಕ್ಷದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಅಭಿನಂದಿಸುತ್ತೇನೆ. ನಮ್ಮ ಪಕ್ಷದ ಪುನರುಜ್ಜೀವನವು ಇಂದು ನಿಜವಾಗಿಯೂ ಪ್ರಾರಂಭವಾಗಿದೆ ಎಂದು ನಾನು ನಂಬುತ್ತೇನೆ’ ಎಂದಿದ್ದಾರೆ.
‘ಅಧ್ಯಕ್ಷರಾಗಿರುವುದು ದೊಡ್ಡ ಗೌರವ ಮತ್ತು ಜವಾಬ್ದಾರಿಯಾಗಿದೆ. ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಮಲ್ಲಿಕಾರ್ಜುನ ಖರ್ಗೆ ಜೀ ಅವರಿಗೆ ಯಶಸ್ಸು ಸಿಗಲಿ. ದೇಶದಾದ್ಯಂತ ಪಕ್ಷದ ಅನೇಕ ಹಿತೈಷಿಗಳ ಭರವಸೆ ಮತ್ತು ಆಕಾಂಕ್ಷೆಯೊಂದಿಗೆ ಸಾವಿರಕ್ಕೂ ಹೆಚ್ಚು ಸಹೋದ್ಯೋಗಿಗಳ ಬೆಂಬಲವನ್ನು ಪಡೆದಿರುವುದು ಒಂದು ಸೌಭಾಗ್ಯ’ ಎಂದು ತರೂರ್ ಟ್ವೀಟ್ ಮಾಡಿದ್ದಾರೆ.
ಕಾಂಗ್ರೆಸ್ ಪಕ್ಷದ 137 ವರ್ಷಗಳ ಇತಿಹಾಸದಲ್ಲಿ ಆರನೇ ಬಾರಿ ಚುನಾವಣೆ ನಡೆದಿದೆ. ಹಾಗೆಯೇ 22 ವರ್ಷಗಳ ಬಳಿಕ ನೆಹರೂ-ಗಾಂಧಿ ಕುಟುಂಬದ ಹೊರಗಿನ ವ್ಯಕ್ತಿಗೆ ಅಧ್ಯಕ್ಷ ಸ್ಥಾನ ಸಿಕ್ಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.