ಮುಂಬೈ: ಒಂದು ಬಾರಿ ಸಾಲ ಕಟ್ಟದ ಉದ್ಯಮಿ ವಿಜಯ್ ಮಲ್ಯರನ್ನು ‘ಕಳ್ಳ’ ಎಂದು ಬಿಂಬಿಸುವುದು ಸರಿಯಲ್ಲ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಅಭಿಪ್ರಾಯಪಟ್ಟಿದ್ದಾರೆ.
‘ಬಹಳ ವರ್ಷಗಳ ಹಿಂದೆ ಮಹಾರಾಷ್ಟ್ರ ಸರ್ಕಾರ ವಿಜಯ್ ಮಲ್ಯಗೆ ಸರ್ಕಾರಿ ಸ್ವಾಮ್ಯದ ಸಿಕಾಮ್ ಮೂಲಕ ಸಾಲ ನೀಡಿತ್ತು. 40 ವರ್ಷಗಳಿಂದ ಮಲ್ಯ ಅವರು ಬಡ್ಡಿ ಪಾವತಿಸುತ್ತಾ ಬಂದಿದ್ದಾರೆ. ಆದರೆ ವಿಮಾನಯಾನ ಕ್ಷೇತ್ರಕ್ಕೆ ಕಾಲಿಟ್ಟ ನಂತರ ಮಲ್ಯಗೆ ಸಮಸ್ಯೆಗಳು ಎದುರಾಯಿತು. ಸಾಲ ಮರುಪಾವತಿ ಸಾಧ್ಯವಾಗಲಿಲ್ಲ. 40 ವರ್ಷಗಳಿಂದ ಸಾಲದ ಬಡ್ಡಿ ಪಾವತಿ ಮಾಡುತ್ತಾ ಇದ್ದ ವ್ಯಕ್ತಿ ಸಮಸ್ಯೆಯಲ್ಲಿ ಸಿಲುಕಿ ಒಮ್ಮೆ ಸಾಲ ಕಟ್ಟಲಿಲ್ಲ ಎಂದ ಮಾತ್ರಕ್ಕೆ ಆತನನ್ನು ನೀವು ಉದ್ದೇಶಪೂರ್ವ ಸುಸ್ತಿದಾರ ಎಂದು ಘೋಷಿಸುತ್ತೀರಾ? ಏಕಾಏಕಿ ಆತ ‘ವಂಚಕ’ನಾಗುತ್ತಾನೆಯೇ? ಈ ಮನಸ್ಥಿತಿ ಸರಿಯಲ್ಲ’ ಎಂದು ಗಡ್ಕರಿ ಇತ್ತೀಚೆಗೆ ಹೇಳಿದ್ದಾರೆ.
‘ನೀರವ್ ಮೋದಿ ಅಥವಾ ವಿಜಯ್ ಮಲ್ಯ ವಂಚನೆ ಎಸಗಿದ್ದರೆ ಅವರನ್ನು ಜೈಲಿಗೆ ಕಳುಹಿಸಿ. ಆದರೆ, ಹಣಕಾಸು ಮುಗ್ಗಟ್ಟಿನಲ್ಲಿರುವ ಎಲ್ಲರಿಗೂ ‘ವಂಚಕ’ನ ಹಣೆಪಟ್ಟಿ ಕಟ್ಟಿದರೆ ಆರ್ಥಿಕತೆ ಬೆಳವಣಿಗೆ ಹೊಂದದು’ ಎಂದು ಗಡ್ಕರಿ ಹೇಳಿದ್ದಾರೆ.ನವೆಂಬರ್ 17ರಂದು ನಡೆದ ಪ್ರಶಸ್ತಿ ಪ್ರದಾನ ಸಮಾರಂಭವೊಂದರಲ್ಲಿ ಗಡ್ಕರಿ ಈ ಮಾತುಗಳನ್ನಾಡಿದ್ದಾರೆ ಎನ್ನಲಾಗಿದೆ.
ಅನುತ್ಪಾದಕ ಸಾಲಸಮಸ್ಯೆ ಬಗ್ಗೆ ಬ್ಯಾಂಕರ್‌ಗಳನ್ನೇ ಗಡ್ಕರಿ ಪರೋಕ್ಷವಾಗಿ ದೂಷಿಸಿದ್ದಾರೆ. ನಮ್ಮ ಬ್ಯಾಂಕಿಂಗ್ ವ್ಯವಸ್ಥೆ ಸಂಕಷ್ಟದಲ್ಲಿ ಸಿಲುಕಿರುವ ಕಂಪನಿಗಳಿಗೆ ಬೆಂಬಲ ನೀಡುತ್ತಿಲ್ಲ ಎಂದು ಅವರು ಹೇಳಿದ್ದಾರೆ.
‘ಯಾರಾದರೂ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ತುತ್ತಾದಾಗ ಮಾತ್ರ ನಾವು ಅವರನ್ನು ತೀವ್ರ ನಿಗಾ ಘಟಕದಲ್ಲಿ (ಐಸಿಯು) ಇರಿಸಿ ಚಿಕಿತ್ಸೆ ಕೊಡಿಸುತ್ತೇವೆ. ಆದರೆ ನಮ್ಮ ಬ್ಯಾಂಕಿಂಗ್ ವ್ಯವಸ್ಥೆಯು ಸಮಸ್ಯೆಗೆ ಸಿಲುಕಿದ ಕಂಪನಿಯನ್ನು ಮೊದಲ ಹಂತದಲ್ಲೇ ಐಸಿಯುನಲ್ಲಿರಿಸಿ ನಂತರ ಆ ಕಂಪನಿ ಮೃತಪಟ್ಟಿದೆ ಎಂದು ಘೋಷಿಸುತ್ತದೆ’ ಎಂದು ಗಡ್ಕರಿ ಹೇಳಿದ್ದಾರೆ.
ಆರ್‌ಬಿಐ ಕಾರ್ಯವೈಖರಿ ಬಗ್ಗೆಯೂ ಗಡ್ಕರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಭಾರತೀಯ ಬ್ಯಾಂಕ್‌ಗಳಿಗೆ ₹9 ಸಾವಿರ ಕೋಟಿ ಸಾಲ ಮರುಪಾವತಿಸದೆ ವಂಚಿಸಿರುವಆರೋಪ ಎದುರಿಸುತ್ತಿರುವ ವಿಜಯ್ ಮಲ್ಯ ಅವರನ್ನು ಭಾರತಕ್ಕೆ ಗಡಿಪಾರು ಮಾಡಬೇಕು ಎಂದು ಬ್ರಿಟನ್ ನ್ಯಾಯಾಲಯ ಸೋಮವಾರತೀರ್ಪು ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.