ನವದೆಹಲಿ/ಕೋಲ್ಕತ್ತ: ‘ಮಾತಿಗೆ ತಡೆವೊಡ್ಡುವ ಮೂಲಕ ನನ್ನೊಂದಿಗೆ ಪಕ್ಷಪಾತದಿಂದ ನಡೆದುಕೊಳ್ಳಲಾಯಿತು’ ಎಂದು ದೂರಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಹೊರನಡೆದ ಕಾರಣ, ಶನಿವಾರ ಇಲ್ಲಿ ನಡೆದ ನೀತಿ ಆಯೋಗದ ಸಭೆ ಕೆಲ ನಾಟಕೀಯ ಸನ್ನಿವೇಶಗಳಿಗೆ ಸಾಕ್ಷಿಯಾಯಿತು.
‘ಮಾತನಾಡುವ ಸಂದರ್ಭ, ನನ್ನ ಮೈಕ್ ಅನ್ನು ಬಂದ್ ಮಾಡಲಾಯಿತು’ ಎಂದಿರುವ ಅವರು, ‘ಎನ್‌ಡಿಎ ಅಂಗಪಕ್ಷ ಟಿಡಿಪಿ ಮುಖ್ಯಸ್ಥ ಹಾಗೂ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರಿಗೆ ಮಾತನಾಡಲು 20 ನಿಮಿಷ ನೀಡಲಾಗಿತ್ತು’ ಎಂದು ಆರೋಪಿಸಿದ್ದಾರೆ.
‘ನನ್ನ ಮೈಕ್ ಬಂದ್ ಮಾಡಲಾಗಿತ್ತು’ ಎಂಬ ಮಮತಾ ಅವರ ಆರೋಪ ‘ದುರದೃಷ್ಟಕರ’ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪ್ರತಿಕ್ರಿಯಿಸಿದ್ದಾರೆ. ‘ಮಮತಾ ಬ್ಯಾನರ್ಜಿ ಅವರು ಸುಳ್ಳುಗಳನ್ನು ಆಧರಿಸಿದ ಸಂಕಥನ ಸೃಷ್ಟಿಸುವ ಬದಲು ಸತ್ಯವನ್ನು ಮಾತನಾಡಬೇಕು’ ಎಂದಿದ್ದಾರೆ.
‘ಇತರ ಕೆಲ ಮುಖ್ಯಮಂತ್ರಿಗಳಂತೆ, ತಮ್ಮ ವಿಚಾರ ಮಂಡನೆಗೆ ಮಮತಾ ಅವರು ಹೆಚ್ಚು ಸಮಯ ಕೇಳಬೇಕಿತ್ತು. ಬದಲಾಗಿ, ಸಭೆಯಿಂದ ಹೊರ ನಡೆಯಲು ಒಂದು ನೆಪ ಹುಡುಕಿಕೊಂಡಿದ್ದಾರೆ’ ಎಂದೂ ನಿರ್ಮಲಾ ಸೀತಾರಾಮನ್ ತಿರುಗೇಟು ನೀಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನೀತಿ ಆಯೋಗ ಸಭೆ ನಡೆಯಿತು. ಮಮತಾ ವಿರೋಧ ಪಕ್ಷಗಳ ಏಕೈಕ ಪ್ರತಿನಿಧಿಯಾಗಿದ್ದರು.
ಮಮತಾ ಬ್ಯಾನರ್ಜಿ ದೂರು ಏನು?: ನೀತಿ ಆಯೋಗದ ಆಡಳಿತ ಮಂಡಳಿಯ 9ನೇ ಸಭೆಯಿಂದ ಹೊರ ಬಂದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮಮತಾ, ‘ಯೋಜನಾ ಆಯೋಗವನ್ನು ಮರುಸ್ಥಾಪಿಸುವಂತೆ ಸಭೆಯಲ್ಲಿ ಹೇಳಿದೆ. ಈ ಕಾರಣಕ್ಕಾಗಿ ನನ್ನ ಮಾತು ಪೂರ್ಣಗೊಳಿಸಲು ಅವಕಾಶ ನೀಡಲಿಲ್ಲ’ ಎಂದರು.
‘ನೀತಿ ಅಯೋಗಕ್ಕೆ ಹಣಕಾಸು ವಿಷಯವಾಗಿ ಯಾವುದೇ ಅಧಿಕಾರ ಇಲ್ಲ. ಆಯೋಗಕ್ಕೆ ವಿತ್ತೀಯ ಅಧಿಕಾರ ನೀಡಿ, ಇಲ್ಲವೇ ಈ ಹಿಂದಿನ ಯೋಜನಾ ಆಯೋಗವನ್ನೇ ಮರುಸ್ಥಾಪಿಸಿ ಎಂಬ ಬೇಡಿಕೆ ಮಂಡಿಸಿದೆ’ ಎಂದು ಹೇಳಿದರು.
‘ನನಗಾದ ಅನ್ಯಾಯ ಖಂಡಿಸಿ ಸಭೆಯನ್ನು ಬಹಿಷ್ಕರಿಸಿ, ಹೊರ ಬಂದೆ. ಅಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರಿಗೆ ಮಾತನಾಡಲು 20 ನಿಮಿಷ ನೀಡಲಾಗಿತ್ತು. ಅಸ್ಸಾಂ, ಗೋವಾ, ಛತ್ತೀಸಗಢ ಮುಖ್ಯಮಂತ್ರಿಗಳು 10–12 ನಿಮಿಷ ಮಾತನಾಡಿದರು. ನಾನು ಮಾತನಾಡಲು ಶುರು ಮಾಡಿದ 5 ನಿಮಿಷಗಳ ನಂತರ, ಮೈಕ್ ಬಂದ್ ಮಾಡಲಾಯಿತು’ ಎಂದು ಹೇಳಿದರು.
‘ಕೇಂದ್ರ ಸರ್ಕಾರ ವಿಪಕ್ಷಗಳ ಆಡಳಿತವಿರುವ ರಾಜ್ಯಗಳಿಗೆ ಬಜೆಟ್‌ನಲ್ಲಿ ಅನುದಾನ ಹಂಚಿಕೆಯಲ್ಲೂ ತಾರತಮ್ಯ ಮಾಡುತ್ತಿದೆ. ಬೇರೆ ಕೆಲ ರಾಜ್ಯಗಳಿಗೆ ವಿಶೇಷ ಪ್ಯಾಕೇಜ್ ನೀಡಿದರೆ ನನಗೆ ಏನೂ ಸಮಸ್ಯೆ ಇಲ್ಲ. ಆದರೆ, ಇತರ ರಾಜ್ಯಗಳ ಕುರಿತು ತಾರತಮ್ಯ ಮಾಡುತ್ತೀರಿ ಏಕೆ ಎಂಬುದಾಗಿ ಪ್ರಶ್ನಿಸಿದೆ’ ಎಂದರು.
‘ನಾನು ಸಭೆಗೆ ಹಾಜರಾಗಿದ್ದೇನೆ. ಅದಕ್ಕೆ ಸಂತೋಷಪಡಿ. ಇದು ಪಶ್ಚಿಮ ಬಂಗಾಳಕ್ಕೆ ಮಾತ್ರವಲ್ಲ, ಎಲ್ಲ ಪ್ರಾದೇಶಿಕ ಪಕ್ಷಗಳಿಗೆ ಮಾಡಿರುವ ಅವಮಾನ ಎಂದು ಸಭೆಯಲ್ಲಿ ಹೇಳಿದೆ’ ಎಂದರು.
‘ಮಾತು ನಿಲ್ಲಿಸುವಂತೆ ನನಗೆ ಸೂಚಿಸಲು ಅವರು ಪದೇಪದೇ ಗಂಟೆ ಬಾರಿಸುತ್ತಿದ್ದರು’ ಎಂದೂ ಆರೋಪಿಸಿದರು.
ಪಿಐಬಿ ಫ್ಯಾಕ್ಟ್ ಚೆಕ್: ಕೇಂದ್ರ ಸರ್ಕಾರ ಅಧೀನದ ‘ಪಿಐಬಿ ಫ್ಯಾಕ್ಟ್‌ಚೆಕ್’ (ಪ್ರೆಸ್ ಇನ್‌ಫಾರ್ಮೇಷನ್ ಬ್ಯುರೊ ಫ್ಯಾಕ್ಟ್ ಚೆಕ್) ಈ ಕುರಿತು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದು, ‘ತಮ್ಮ ಮೈಕ್ ಅನ್ನು ಬಂದ್ ಮಾಡಲಾಯಿತು ಎಂಬ ಮಮತಾ ಬ್ಯಾನರ್ಜಿ ಅವರ ಹೇಳಿಕೆ ದಾರಿ ತಪ್ಪಿಸುವಂತಿದೆ’ ಎಂದು ಹೇಳಿದೆ.
‘ಮಾತನಾಡಲು ಅವರಿಗೆ ನೀಡಲಾಗಿದ್ದ ಸಮಯಾವಕಾಶ ಮುಗಿಯಿತು ಎಂಬುದನ್ನು ಗಡಿಯಾರ ತೋರಿಸುತ್ತಿತ್ತು. ಸಮಯ ಮುಗಿದಿರುವ ಕುರಿತು ಎಚ್ಚರಿಕೆ ನೀಡಲು ಗಂಟೆಯೂ ಮೊಳಗಲಿಲ್ಲ’ ಎಂದು ಹೇಳಿದೆ.
ಇನ್ನೊಂದೆಡೆ, ಸಭೆಯಲ್ಲಿ ಪಾಲ್ಗೊಂಡವರಿಗೆ, ಅಕಾರಾದಿಯಾಗಿ ಮಾತನಾಡಲು ಅವಕಾಶ ನೀಡಲಾಗಿತ್ತು ಎಂದು ಮೂಲಗಳು ಹೇಳಿವೆ.
‘ಈ ವ್ಯವಸ್ಥೆಯಂತೆ, ಬ್ಯಾನರ್ಜಿ ಅವರು ಮಧ್ಯಾಹ್ನ ಊಟದ ನಂತರ ಮಾತನಾಡಬೇಕಿತ್ತು. ಅವರು ಬೇಗನೇ ರಾಜ್ಯಕ್ಕೆ ಮರಳಬೇಕಿರುವುದರಿಂದ, ಮಾತನಾಡಲು ಅವರಿಗೆ ಮೊದಲೇ ಅವಕಾಶ ನೀಡುವಂತೆ ಪಶ್ಚಿಮ ಬಂಗಾಳ ಸರ್ಕಾರ ಮನವಿ ಮಾಡಿತ್ತು. ಅದರಂತೆ, ಆರು ಜನರ ನಂತರ ಮಾತನಾಡಲು ಅವರಿಗೆ ಅವಕಾಶ ನೀಡಲಾಯಿತು’ ಎಂದು ಮೂಲಗಳು ಹೇಳಿವೆ.
ಬಹಿಷ್ಕಾರ: ಕೇಂದ್ರ ಬಜೆಟ್‌ನಲ್ಲಿ ಮಾಡಿರುವ ತಾರತಮ್ಯ ಖಂಡಿಸಿ ನೀತಿ ಆಯೋಗದ ಸಭೆಯನ್ನು ಬಹಿಷ್ಕರಿಸುವುದಾಗಿ ಮೊದಲು ಘೋಷಿಸಿದ್ದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್. ನಂತರ, ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ತೆಲಂಗಾಣದ ಎ.ರೇವಂತ ರೆಡ್ಡಿ ಹಾಗೂ ಹಿಮಾಚಲ ಪ್ರದೇಶದ ಸುಖ್ವಿಂದರ್ ಸಿಂಗ್ ಸುಖು ಅವರು ಸಹ ಸಭೆ ಬಹಿಷ್ಕರಿಸುವುದಾಗಿ ಘೋಷಿಸಿದ್ದರು.
ಜಾರ್ಖಂಡ ಮುಖ್ಯಮಂತ್ರಿ ಹೇಮಂತ್ ಸೊರೇನ್, ಪಂಜಾಬ್‌ನ ಭಗವಂತ ಮಾನ್ ಹಾಗೂ ಕೇರಳದ ಪಿಣರಾಯಿ ವಿಜಯನ್ ಸಹ ಸಭೆಯಿಂದ ದೂರ ಉಳಿದಿದ್ದರು.
ಒಬ್ಬ ಮುಖ್ಯಮಂತ್ರಿಯನ್ನು ನಡೆಸಿಕೊಳ್ಳುವ ರೀತಿಯೇ ಇದು? ವಿರೋಧ ಪಕ್ಷಗಳು ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯ ಅವಿಭಾಜ್ಯ ಅಂಗ ಎಂಬುದನ್ನು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಅರ್ಥ ಮಾಡಿಕೊಳ್ಳಬೇಕು. ವಿಪಕ್ಷಗಳ ನಾಯಕರ ದನಿ ಅಡಗಿಸುವುದಕ್ಕಾಗಿ ಅವರನ್ನು ಶತ್ರುಗಳಂತೆ ನೋಡಬಾರದು ಎಂ.ಕೆ.ಸ್ಟಾಲಿನ್ ತಮಿಳುನಾಡು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರೊಂದಿಗೆ ಕೇಂದ್ರ ಸರ್ಕಾರ ನಡೆದುಕೊಂಡ ರೀತಿಯನ್ನು ಒಪ್ಪಲಾಗದು. ಹತ್ತು ವರ್ಷಗಳ ಹಿಂದೆ ರಚನೆಯಾದ ನೀತಿ ಆಯೋಗ ಸದ್ಯ ಪ್ರಧಾನಿ ಕಚೇರಿಯ ಭಾಗವೇ ಆಗಿದೆ. ಒಕ್ಕೂಟ ವ್ಯವಸ್ಥೆಯ ಆಶಯವನ್ನು ಸಾಕಾರಗೊಳಿಸುವಲ್ಲಿ ಆಯೋಗ ವಿಫಲವಾಗಿದೆ.-ಜೈರಾಮ್ ರಮೇಶ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ
ಹಲವು ರಾಜ್ಯಗಳ ಮುಖ್ಯಮಂತ್ರಿಗಳು ನೀತಿ ಆಯೋಗದ ಸಭೆಯನ್ನು ಬಹಿಷ್ಕರಿಸಿರುವುದು ಸರಿಯಾಗಿಯೇ ಇದೆ. ಕೇಂದ್ರ ಸರ್ಕಾರ ಕೆಲ ಕ್ರಮಗಳು ಇಂತಹ ನಿರ್ಧಾರಕ್ಕೆ ಕಾರಣ-ಡಿ.ರಾಜಾ ಸಿಪಿಐ ಪ್ರಧಾನ ಕಾರ್ಯದರ್ಶಿ
ನಿತೀಶ್ ಗೈರು; ಪಟ್ನಾದಲ್ಲಿ ಜೆಡಿಯು ಸಭೆಯಲ್ಲಿ ಭಾಗಿ
ನವದೆಹಲಿ: ಎನ್‌ಡಿಎ ಅಂಗಪಕ್ಷವಾದ ಜೆಡಿಯುನ ಮುಖ್ಯಸ್ಥ ಹಾಗೂ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಶನಿವಾರ ನಡೆದ ನೀತಿ ಆಯೋಗದ ಸಭೆಗೆ ಗೈರಾಗಿದ್ದರು. ಬಿಹಾರ ಉಪಮುಖ್ಯಮಂತ್ರಿಗಳಾದ ಸಾಮ್ರಾಟ್ ಚೌಧರಿ ಮತ್ತು ವಿಜಯಕುಮಾರ್ ಸಿನ್ಹಾ ಆಯೋಗದ ಸಭೆಯಲ್ಲಿ ಪಾಲ್ಗೊಂಡಿದ್ದರು. ಆದರೆ ಜಾರ್ಖಂಡ್ ಚುನಾವಣೆ ಕುರಿತು ಚರ್ಚಿಸಲು ಪಟ್ನಾದ ತಮ್ಮ ನಿವಾಸದಲ್ಲಿ ಪಕ್ಷದ ಸಭೆ ನಡೆಸಿದರು. ‘ಮುಖ್ಯಮಂತ್ರಿ ನಿತೀಶ್ ಕುಮಾರ್ ನೀತಿ ಆಯೋಗದ ಸಭೆಯಿಂದ ದೂರ ಉಳಿದಿರುವುದು ಇದೇ ಮೊದಲು ಏನಲ್ಲ. ಈ ಹಿಂದೆಯೂ ಅವರು ಗೈರಾಗಿದ್ದರಲ್ಲದೇ ಆಗಲೂ ಉಪಮುಖ್ಯಮಂತ್ರಿಗಳೇ ಸಭೆಗೆ ಹಾಜರಾಗಿದ್ದರು’ ಎಂದು ಜೆಡಿಯು ವಕ್ತಾರ ನೀರಜ್ ಕುಮಾರ್ ಹೇಳಿದ್ದಾರೆ.
ಮಮತಾ ನಡೆ ಪೂರ್ವನಿರ್ಧರಿತ: ಬಿಜೆಪಿ
ನೀತಿ ಆಯೋಗದ ಸಭೆ ಬಹಿಷ್ಕರಿಸಿ ಹೊರನಡೆದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ನಡೆ ಪೂರ್ವನಿರ್ಧರಿತ ಹಾಗೂ ಪ್ರಚಾರ ಪಡೆಯುವ ತಂತ್ರವಾಗಿದೆ ಎಂದು ಬಿಜೆಪಿ ಟೀಕಿಸಿದೆ. ‘ನಮ್ಮ ದೇಶದಲ್ಲಿ ಮಾಧ್ಯಮಗಳಲ್ಲಿ ಪ್ರಚಾರ ಪಡೆಯುವುದು ತುಂಬಾ ಸುಲಭ‘ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಹೇಳಿದ್ದಾರೆ.
‘ವಿಪಕ್ಷಗಳ ಮುಖ್ಯಮಂತ್ರಿಗಳಲ್ಲಿ ಸಭೆಗೆ ನಾನು ಮಾತ್ರ ಹಾಜರಾಗಿರುವೆ ಎಂದು ಮೊದಲು ಹೇಳಬೇಕು. ಸಭೆಯಿಂದ ಹೊರ ಬಂದು ನನ್ನ ಮೈಕ್ ಬಂದ್ ಮಾಡಿದ್ದರಿಂದ ಸಭೆಯನ್ನು ಬಹಿಷ್ಕರಿಸಿದೆ ಎನ್ನಬೇಕು. ಆಗ ಇಡೀ ದಿನ ಟಿವಿಗಳಲ್ಲಿ ಇದೇ ಸುದ್ದಿ ಪ್ರಸಾರವಾಗುತ್ತದೆ. ಯಾವುದೇ ಕೆಲಸ ಇಲ್ಲ ಚರ್ಚೆ ಇಲ್ಲ. ಇದು ದೀದಿ ಕಾರ್ಯವೈಖರಿ’ ಎಂದು ಟೀಕಿಸಿದ್ದಾರೆ.
‘ಆಡಳಿತಕ್ಕೆ ಸಂಬಂಧಿಸಿದ ಗಂಭೀರ ವಿಷಯಗಳನ್ನು ಮುಖ್ಯಮಂತ್ರಿಯೊಬ್ಬರು ನಾಟಕೀಯತೆ ಮಟ್ಟಕ್ಕೆ ಇಳಿಸಿರುವುದು ದುಃಖದ ಸಂಗತಿ’ ಎಂದು ಬಿಜೆಪಿಯ ಐ.ಟಿ ವಿಭಾಗದ ಮುಖ್ಯಸ್ಥ ಅಮಿತ್ ಮಾಳವೀಯ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
ವಿಕಸಿತ ಭಾರತ@2047 ನನಸು ಮಾಡುವುದಕ್ಕೆ ಕೇಂದ್ರ ಹಾಗೂ ಎಲ್ಲ ರಾಜ್ಯಗಳ ನಡುವೆ ಸಹಕಾರ ಸಾಮೂಹಿಕ ಪ್ರಯತ್ನ ಅಗತ್ಯ-ನರೇಂದ್ರ ಮೋದಿ, ಪ್ರಧಾನಿ
ದೇಶದ ಅಭಿವೃದ್ಧಿ ಕುರಿತು ಚರ್ಚಿಸುವ ನೀತಿ ಆಯೋಗದ ಸಭೆಗೆ ರಾಜ್ಯ ಸರ್ಕಾರಗಳು ತಮ್ಮ ಸಂಪೂರ್ಣ ಬೆಂಬಲ ನೀಡಬೇಕು. ಈ ರೀತಿಯ ರಾಜಕಾರಣ ನಡೆಯಬಾರದು.-ಅರ್ಜುನ್ ರಾಮ್ ಮೇಘವಾಲ್, ಕೇಂದ್ರ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.