ಕೋಲ್ಕತ್ತ: ಕೆಲವು ಅಪರಿಚಿತರು ತಮ್ಮನ್ನು ತಳ್ಳಿದ್ದೂ ಅಲ್ಲದೇ ಎಡಗಾಲಿಗೆ ಗಾಯ ಆಗುವಂತೆ ಕಾರಿನ ಬಾಗಿಲನ್ನು ಬಲವಾಗಿ ಮುಚ್ಚಿದ್ದಾರೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬುಧವಾರ ಆರೋಪಿಸಿದ್ದಾರೆ.
ನಂದಿಗ್ರಾಮ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಲು ಅವರು ನಾಮಪತ್ರ ಸಲ್ಲಿಸಿದ ಬಳಿಕ ಈ ರೀತಿ ನಡೆದಿದೆ. ಪ್ರಕರಣದ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಚುನಾವಣಾ ಆಯೋಗವು ಈ ಬಗ್ಗೆ ವರದಿ ಕೇಳಿದೆ.
ಮಮತಾ ಅವರಿಗೆ ಕೋಲ್ಕತ್ತದಲ್ಲಿರುವ ಎಸ್‌ಎಸ್‌ಕೆಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಅವರ ಆರೋಗ್ಯದ ಮೇಲೆ ನಿಗಾ ಇರಿಸುವುದಕ್ಕಾಗಿ ಐವರು ತಜ್ಞ ವೈದ್ಯರ ಸಮಿತಿ ರಚಿಸಲಾಗಿದೆ.
‘ನನಗೆ ಪರಿಚಿತರಲ್ಲದ ನಾಲ್ಕೈದು ಜನರು ನನ್ನನ್ನು ಕೆಳಗೆ ತಳ್ಳಿದರು. ತಲೆ, ಕೈ ಮತ್ತು ಕಾಲಿಗೆ ತುಂಬಾ ನೋವಾಗಿದೆ. ಇಂದು (ಬುಧವಾರ) ರಾತ್ರಿ ನಂದಿಗ್ರಾಮದಲ್ಲಿಯೇ ತಂಗಬೇಕು ಎಂದು ಯೋಜಿಸಿದ್ದೆ. ಆದರೆ, ಈಗ ಚಿಕಿತ್ಸೆಗಾಗಿ ಕೋಲ್ಕತ್ತಕ್ಕೆ ಹೋಗಲೇಬೇಕಾಗಿದೆ’ ಎಂದು ಮಮತಾ ಹೇಳಿದರು.
‘ಖಂಡಿತವಾಗಿಯೂ ಇದೊಂದು ಷಡ್ಯಂತ್ರ. ಸ್ಥಳದಲ್ಲಿ ಸ್ಥಳೀಯ ಪೊಲೀಸರು ಅಥವಾ ಎಸ್‌ಪಿ ಇರಲಿಲ್ಲ’ ಎಂದು ಅವರು ಹೇಳಿದರು.
ತೀವ್ರವಾಗಿ ನೋವು ಅನುಭವಿಸುತ್ತಿರುವವರಂತೆ ಕಂಡ ಮಮತಾ ಅವರು, ಸುತ್ತುವರಿದಿದ್ದ ಪತ್ರಕರ್ತರಿಗೆ ಕೈಮುಗಿದು ತಮ್ಮನ್ನು ಹೋಗಲು ಅವಕಾಶ ಕೊಡಿ ಎಂದು ಕೋರಿದರು.
‘ಬುಧವಾರ ಸಂಜೆ 6.15ರ ಹೊತ್ತಿಗೆ ಮಮತಾ ಅವರು ಬಿರುಲಿಯಾ ಅಂಚಲ್‌ನ ದೇವಾಲಯದಲ್ಲಿ ಪೂಜೆ ಮುಗಿಸಿ ಹಿಂದಿರುಗುವುದರಲ್ಲಿದ್ದರು. ಆಗ ಕೆಲವರು ಮಮತಾ ಅವರನ್ನು ಕಾರಿನತ್ತ ತಳ್ಳಿದ್ದಾರೆ. ಬಲವಂತವಾಗಿ ಕಾರಿನ ಬಾಗಿಲು ಹಾಕಿದ್ದಾರೆ. ಬಾಗಿಲಿಗೆ ಎಡಗಾಲು ಸಿಲುಕಿಕೊಂಡು ಗಾಯವಾಗಿದೆ. ಸೊಂಟಕ್ಕೆ ಬಲವಾದ ಏಟು ಬಿದ್ದಿದೆ. ಬಳಿಕ, ಚಿಕಿತ್ಸೆಗಾಗಿ ಅವರು ಕೋಲ್ಕತ್ತಕ್ಕೆ ತೆರಳಿದ್ದಾರೆ’ ಎಂದು ನಂದಿಗ್ರಾಮದಲ್ಲಿಯೇ ಇದ್ದ ಟಿಎಂಸಿ ಸಂಸದ ಸುಖೇಂದು ಶೇಖರ್ ರಾಯ್ ಅವರು ಹೇಳಿಕೆ ನೀಡಿದ್ದಾರೆ.
ಮಮತಾ ಅವರು ನಂದಿಗ್ರಾಮ ಕ್ಷೇತ್ರದಿಂದ ನಾಮಪತ್ರ ಸಲ್ಲಿಸುವುದರೊಂದಿಗೆ ಭಾರಿ ಹಣಾಹಣಿಗೆ ರಂಗ ಸಜ್ಜಾಯಿತು. ಒಂದು ಕಾಲದಲ್ಲಿ ಮಮತಾ ಅವರ ಆಪ್ತರಾಗಿದ್ದ ಸುವೇಂದು ಅಧಿಕಾರಿ ಅವರು ಇಲ್ಲಿ ಬಿಜೆಪಿಯ ಅಭ್ಯರ್ಥಿ.
ನಾಮಪತ್ರ ಸಲ್ಲಿಕೆಗೆ ಮೊದಲು ಮಮತಾ ಅವರು ಎರಡು ಕಿ.ಮೀ. ರೋಡ್‌ಶೋ ನಡೆಸಿದರು. ಸ್ಥಳೀಯ ದೇವಾಲಯವೊಂದರಲ್ಲಿ ಪೂಜೆ ನಡೆಸಿದರು. ಟಿಎಂಸಿ ಪ್ರಧಾನ ಕಾರ್ಯದರ್ಶಿ ಸುಬ್ರತಾ ಬಕ್ಷಿ ಅವರು ಈ ಸಂದರ್ಭದಲ್ಲಿ ಜತೆಗಿದ್ದರು.
ಜನವರಿಯಲ್ಲಿ ಇಲ್ಲಿಗೆ ಭೇಟಿ ನೀಡಿದ್ದಾಗಲೇ ಜನರ ಮನಸ್ಥಿತಿಯನ್ನು ಗಮನಿಸಿದ್ದೆ. ಇಲ್ಲಿಂದ ಸ್ಪರ್ಧಿಸಲು ನಿರ್ಧರಿಸಿದ್ದೆ. ನಾನು ಭೇಟಿ ನೀಡಿದ್ದಾಗ ಈ ಕ್ಷೇತ್ರಕ್ಕೆ ಶಾಸಕನೇ ಇರಲಿಲ್ಲ.ನಂದಿಗ್ರಾಮದಲ್ಲಿ ಈಗ ನಡೆಯುತ್ತಿರುವುದು ಚಳವಳಿಯಲ್ಲದೆ ಬೇರೇನೂ ಅಲ್ಲ ಎಂದು ಮಮತಾ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.