ಕೋಲ್ಕತ್ತ:ತಮ್ಮ ಸರ್ಕಾರದ ಸಂಪುಟ ಸಹೋದ್ಯೋಗಿ ಚಟರ್ಜಿ ಪಾರ್ಥ ಅವರನ್ನು ಶಿಕ್ಷಕರ ನೇಮಕಾತಿ ಹಗರಣ ಸಂಬಂಧ ಜಾರಿ ನಿರ್ದೇಶನಾಲಯ (ಇ.ಡಿ) ಅಧಿಕಾರಿಗಳು ಬಂಧಿಸಿದ ಒಂದು ದಿನ ನಂತರ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ‘ಯಾರೇ ತಪ್ಪು ಮಾಡಿದ್ದರೂ ಅವರಿಗೆ ಶಿಕ್ಷೆ ಆಗಬೇಕು’ ಎಂದು ಸೋಮವಾರ ಹೇಳಿದ್ದಾರೆ.
ಇಲ್ಲಿ ರಾಜ್ಯ ಸರ್ಕಾರದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಮಮತಾ ಬ್ಯಾನರ್ಜಿ, ‘ಭ್ರಷ್ಟಾಚಾರಕ್ಕೆ ನಾನು ಬೆಂಬಲ ನೀಡುವುದಿಲ್ಲ. ಆದರೆ, ನನ್ನ ಮೇಲೆ ದುರುದ್ದೇಶಪೂರಿತ ಅಪಪ್ರಚಾರ ನಡೆಸಲಾಗುತ್ತಿದೆ. ಕೇಂದ್ರ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ತೃಣಮೂಲ ಕಾಂಗ್ರೆಸ್ ಪಕ್ಷವನ್ನು ಒಡೆಯಬಹುದೆಂದು ಬಿಜೆಪಿ ಭಾವಿಸಿದ್ದರೆ ಅದು ತಪ್ಪು ಮತ್ತು ಅಸಾಧ್ಯ’ ಎಂದುವಿರೋಧ ಪಕ್ಷದ ಮೇಲೆ ಕಿಡಿಕಾರಿದರು.
ಮನೆಯಲ್ಲಿ ₹22 ಕೋಟಿ ನಗದು ಪತ್ತೆಯಾಗಿರುವ ಅರ್ಪಿತಾ ಮುಖರ್ಜಿಯವರ ಜತೆ ತಾವು ಮಾತನಾಡುತ್ತಿರುವವಿಡಿಯೊ ಅನ್ನು ಬಿಜೆಪಿ ಹಂಚಿಕೊಂಡಿರುವುದನ್ನು ಉಲ್ಲೇಖಿಸಿದ ಮಮತಾ ಬ್ಯಾನರ್ಜಿ, ‘ಅರ್ಪಿತಾ ಮುಖರ್ಜಿ ಅವರಿಗೂ ಮತ್ತು ತೃಣಮೂಲ ಕಾಂಗ್ರೆಸ್ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ. ಆ ಮಹಿಳೆ ಜತೆ ಪಕ್ಷ ಯಾವುದೇ ನಂಟು ಹೊಂದಿಲ್ಲ. ನಾನು ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿರುತ್ತೇನೆ. ಯಾರಾದರೂ ನನ್ನೊಂದಿಗೆ ಕಾಣಿಸಿಕೊಂಡ ದೃಶ್ಯ ಕ್ಲಿಕ್ಕಿಸಿಕೊಂಡರೆ ಅದು ನನ್ನ ತಪ್ಪೇ’ ಎಂದು ಪ್ರಶ್ನಿಸಿದರು.
‘ತನಿಖೆಯು ನನ್ನ ಪಕ್ಷ ಮತ್ತು ನನ್ನನ್ನು ಅಪಮಾನಿಸುವ ಒಂದು ತಂತ್ರ. ನಾನು ಭ್ರಷ್ಟಾಚಾರವನ್ನು ಬೆಂಬಲಿಸುವವಳಲ್ಲ, ಭ್ರಷ್ಟಾಚಾರಬೆಳೆಯಲೂ ಬಿಡುವುದಿಲ್ಲ’ ಎಂದು ಗುಡುಗಿದ್ದಾರೆ.
‘ನಮಗೆ ನ್ಯಾಯಾಂಗದ ಮೇಲೆ ಸಂಪೂರ್ಣ ನಂಬಿಕೆ ಇದೆ. ಸತ್ಯ ಮತ್ತು ನ್ಯಾಯಾಲಯದ ತೀರ್ಪು ಹೊರಬರಲು ಕಾಲಮಿತಿ ಇರಬೇಕು. ಯಾರೇ ತಪ್ಪು ಮಾಡಿದ್ದರೂ ಅವರಿಗೆ ಶಿಕ್ಷೆಯಾಗಲಿ. ಪಕ್ಷ ಕೂಡ ಕ್ರಮ ಕೈಗೊಳ್ಳಲಿದೆ. ಆದರೆ, ನನ್ನ ವಿರುದ್ಧ ನಡೆಯುತ್ತಿರುವ ದುರುದ್ದೇಶಪೂರಿತ ಅಭಿಯಾನವನ್ನು ಖಂಡಿಸುತ್ತೇನೆ’ ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.