ನವದೆಹಲಿ: ‘ನೀತಿ ಆಯೋಗದ ಸಭೆಯಲ್ಲಿ ಭಾಗವಹಿಸಿದ್ದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಮಾತನಾಡುವ ವೇಳೆ ಮೈಕ್ ಸ್ವಿಚ್ ಆಫ್ ಮಾಡಲಾಗಿತ್ತು ಎಂದು ಹೇಳಿರುವುದು ದುರದೃಷ್ಟಕರ, ಇದು ಸತ್ಯಕ್ಕೆ ದೂರವಾದದ್ದು’ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ನೀತಿ ಆಯೋಗದ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ಮಮತಾ ಬ್ಯಾನರ್ಜಿ ಸೇರಿದಂತೆ ಸಭೆಯಲ್ಲಿ ಭಾಗವಹಿಸಿದ್ದ ಎಲ್ಲ ಮುಖ್ಯಮಂತ್ರಿಗಳಿಗೂ ಮಾತನಾಡಲು ಸಮಯಾವಕಾಶ ನೀಡಲಾಗಿದೆ. ನಾವೆಲ್ಲರೂ ಮಮತಾ ಅವರ ಮಾತುಗಳನ್ನು ಕೇಳಿದ್ದೇವೆ’ ಎಂದು ತಿಳಿಸಿದ್ದಾರೆ.
‘ಎಲ್ಲ ಮುಖ್ಯಮಂತ್ರಿಗಳಿಗೂ ನಿಗದಿತ ಸಮಯವನ್ನು ನೀಡಲಾಗಿತ್ತು. ಆದೇ ರೀತಿ ಪ್ರತಿ ಟೇಬಲ್‌ನ ಮುಂದೆ ಇರುವ ಪರದೆಯ ಮೇಲೆ ಸಮಯವನ್ನು ಪ್ರದರ್ಶಿಸಲಾಗಿತ್ತು. ಆದರೆ, ಮಮತಾ ಬ್ಯಾನರ್ಜಿ ಅವರು ತಮ್ಮ ಮೈಕ್ ಸ್ವಿಚ್ ಆಫ್ ಮಾಡಲಾಗಿತ್ತು ಎಂದು ಹೇಳಿಕೆ ನೀಡಿದ್ದಾರೆ. ಅದು ಸಂಪೂರ್ಣ ಸುಳ್ಳು’ ಎಂದು ಸೀತಾರಾಮನ್ ತಿರುಗೇಟು ನೀಡಿದ್ದಾರೆ.
ಸುಳ್ಳು ಹೇಳಿಕೆಗಳನ್ನು ನೀಡುವ ಬದಲು ಸತ್ಯವನ್ನು ಮಾತನಾಡಬೇಕು ಎಂದು ಮಮತಾ ವಿರುದ್ಧ ಸೀತಾರಾಮನ್ ಕಿಡಿಕಾರಿದ್ದಾರೆ.
ನೀತಿ ಆಯೋಗದ ಸಭೆಯಲ್ಲಿ ಮಾತನಾಡಲು ಸಮಯ ನಿರಾಕರಿಸಿದ್ದನ್ನು ಪ್ರತಿಭಟಿಸಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಭೆಯಿಂದ ಹೊರನಡೆದಿದ್ದಾರೆ.
ಕೇವಲ ಐದು ನಿಮಿಷ ಮಾತನಾಡಿದ ಬಳಿಕ ನನ್ನನ್ನು ತಡೆದಿದ್ದಾರೆ ಎಂದು ಅವರು ಹೇಳಿದ್ದಾರೆ. ಜತೆಗೆ ಕೇಂದ್ರ ಬಜೆಟ್ ಅನ್ನೂ ಟೀಕಿಸಿರುವ ಅವರು, ತಾರತಮ್ಯದ ಬಜೆಟ್ ಎಂದು ಕಿಡಿಕಾರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.