ADVERTISEMENT

ಅಶ್ರುವಾಯು ಪ್ರಯೋಗ | ರೈತರ ಮೇಲೆ ಬಿಜೆಪಿಯ ಕ್ರೂರ ದಾಳಿ ಎಂದ ಮಮತಾ ಬ್ಯಾನರ್ಜಿ

ಪಿಟಿಐ
Published 13 ಫೆಬ್ರುವರಿ 2024, 9:47 IST
Last Updated 13 ಫೆಬ್ರುವರಿ 2024, 9:47 IST
<div class="paragraphs"><p> ಮಮತಾ ಬ್ಯಾನರ್ಜಿ</p></div>

ಮಮತಾ ಬ್ಯಾನರ್ಜಿ

   

ಕೋಲ್ಕತ್ತಾ: ಹರಿಯಾಣದಲ್ಲಿ ಪ್ರತಿಭಟನಾ ನಿರತ ರೈತರ ಮೇಲೆ ಅಶ್ರುವಾಯು ಪ್ರಯೋಗಿಸಿರುವುದನ್ನು ಖಂಡಿಸಿದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ‘ಇದು ರೈತರ ಮೇಲೆ ಬಿಜೆಪಿಯ ಕ್ರೂರ ದಾಳಿ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

'ಕನಿಷ್ಠ ಬೆಂಬಲ ಬೆಲೆಗೆ ಕಾನೂನಿನ ಖಾತರಿ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತರು ದೆಹಲಿಯತ್ತ ಸಾಗುತ್ತಿರುವಾಗ ಅಂಬಾಲ ಬಳಿಯ ಶಂಭು ಎಂಬಲ್ಲಿ ಹರಿಯಾಣ ಪೊಲೀಸರು ಅಶ್ರುವಾಯು ಪ್ರಯೋಗಿಸಿದ್ದಾರೆ.

ADVERTISEMENT

ರೈತರು ತಮ್ಮ ಮೂಲಭೂತ ಹಕ್ಕುಗಳಿಗಾಗಿ ಹೋರಾಡಿದಕ್ಕಾಗಿ ಅಶ್ರುವಾಯು ದಾಳಿ ಮಾಡಿದರೆ ನಮ್ಮ ದೇಶ ಹೇಗೆ ಪ್ರಗತಿ ಹೊಂದುತ್ತದೆ?. ನಮ್ಮ ರೈತರ ಮೇಲೆ ಬಿಜೆಪಿ ನಡೆಸಿದ ಕ್ರೂರ ಹಲ್ಲೆಯನ್ನು ನಾನು ಬಲವಾಗಿ ಖಂಡಿಸುತ್ತೇನೆ' ಎಂದು ಮಮತಾ ಬ್ಯಾನರ್ಜಿ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಕನಿಷ್ಠ ಬೆಂಬಲ ಬೆಲೆಯನ್ನು (ಎಂಎಸ್‌ಪಿ) ಖಾತರಿಪಡಿಸುವ ಕಾನೂನು ಜಾರಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸುಮಾರು 200 ರೈತ ಸಂಘಟನೆಗಳು ಇಂದು (ಮಂಗಳವಾರ) ‘ದೆಹಲಿ ಚಲೋ’ ಹಮ್ಮಿಕೊಂಡಿವೆ. ಈ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿಯ ಗಡಿಯಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.

ರಾಷ್ಟ್ರ ರಾಜಧಾನಿಯನ್ನು ಪ್ರವೇಶಿಸದಂತೆ ತಡೆಯಲು ಸಿಂಘು, ಟಿಕ್ರಿ, ಗಾಜೀಪುರ ಗಡಿಯಲ್ಲಿ ಹಲವು ಹಂತಗಳಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಲಾಗಿದೆ.

ರಸ್ತೆಗಳಿಗೆ ಅಡ್ಡಲಾಗಿ ಮುಳ್ಳು ತಂತಿ, ಮೊಳೆಗಳ ಪಟ್ಟಿ, ಸಿಮೆಂಟ್‌ ಇಟ್ಟಿಗೆ ಮತ್ತು ಕಂಟೈನರ್‌ಗಳನ್ನು ಇಡಲಾಗಿದೆ. ಜತೆಗೆ ಹೆಚ್ಚಿನ ಸಂಖ್ಯೆಯ ಪೊಲೀಸ್‌ ಮತ್ತು ಅರೆಸೇನಾಪಡೆಯ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಶಂಭು ಗಡಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಜಮಾಯಿಸಿದ್ದರು. ಪ್ರತಿಭಟನಾಕಾರರನ್ನು ಚದುರಿಸಲು ಹರಿಯಾಣ ಪೊಲೀಸರು ಅಶ್ರುವಾಯು ಪ್ರಯೋಗಿಸಿದ್ದು, ಹಲವರನ್ನು ಬಂಧಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.