ಕೋಲ್ಕತ್ತ: ಮಹಿಳೆಯರ ಸುರಕ್ಷತೆಗಾಗಿ ಪರಿಣಾಮಕಾರಿ ಕಾನೂನು ಜಾರಿಗೊಳಿಸುವಲ್ಲಿ ವಿಫಲವಾಗಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ಆಡಳಿತ ರಾಜ್ಯಗಳ ಮುಖ್ಯಮಂತ್ರಿಗಳು ರಾಜೀನಾಮೆ ನೀಡಬೇಕು ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆಗ್ರಹಿಸಿದ್ದಾರೆ.
ಅತ್ಯಾಚಾರ ತಡೆ ಮಸೂದೆಯನ್ನು ಅಂಗೀಕರಿಸಿದ ಬಳಿಕ ವಿಧಾನಸಭೆಯಲ್ಲಿ ಮಾತನಾಡಿದ ಅವರು, ‘ತ್ವರಿತ ತನಿಖೆ, ಶೀಘ್ರ ನ್ಯಾಯ ಒದಗಿಸುವುದು ಮತ್ತು ಅಪರಾಧಿಗೆ ಹೆಚ್ಚಿನ ಶಿಕ್ಷೆ ನೀಡುವುದನ್ನು ಈ ಮಸೂದೆ ಒಳಗೊಂಡಿದೆ’ ಎಂದು ಅವರು ತಿಳಿಸಿದ್ದಾರೆ.
‘ಮಹಿಳೆಯರ ಮೇಲಿನ ಅತ್ಯಾಚಾರವು ಮಾನವೀಯತೆಯ ವಿರುದ್ಧದ ಒಂದು ಶಾಪವಾಗಿದೆ. ಇಂತಹ ಕೃತ್ಯಗಳನ್ನು ತಡೆಗಟ್ಟಲು ಸಾಮಾಜಿಕ ಸುಧಾರಣೆ ಅಗತ್ಯವಿದೆ. ಈ ಮಸೂದೆ ಅಂಗೀಕಾರವಾದ ನಂತರ, ತನಿಖೆಯನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸುವುದನ್ನು ಖಚಿತಪಡಿಸಿಕೊಳ್ಳಲು ಪೊಲೀಸರಲ್ಲಿ ವಿಶೇಷ ಅಪರಾಜಿತ ಕಾರ್ಯಪಡೆಯನ್ನು ರಚಿಸುತ್ತೇವೆ’ ಎಂದು ಮಮತಾ ಹೇಳಿದ್ದಾರೆ.
ಅತ್ಯಾಚಾರ ಮತ್ತು ಕೊಲೆ ಎಸಗಿದ ಅಪರಾಧಿಗೆ ಗರಿಷ್ಠ ಶಿಕ್ಷೆಯಾಗಿ ಮರಣದಂಡನೆ ಪ್ರಸ್ತಾಪಿಸಿರುವ ಅತ್ಯಾಚಾರ ತಡೆ ಮಸೂದೆಯನ್ನು ಪಶ್ಚಿಮ ಬಂಗಾಳದ ವಿಧಾನಸಭೆ ಇಂದು (ಮಂಗಳವಾರ) ಸರ್ವಾನುಮತದಿಂದ ಅಂಗೀಕರಿಸಿದೆ.
'ಅಪರಾಜಿತ ಮಹಿಳೆ ಮತ್ತು ಮಕ್ಕಳ ಮಸೂದೆ (ಪಶ್ಚಿಮ ಬಂಗಾಳ ಕ್ರಿಮಿನಲ್ ಕಾನೂನು ಮತ್ತು ತಿದ್ದುಪಡಿ ಮಸೂದೆ 2024)' ಅನ್ನು ವಿಪಕ್ಷಗಳ ಬೆಂಬಲದೊಂದಿಗೆ ಅಂಗೀಕರಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.