ADVERTISEMENT

ರೈತರು, ಬುಡಕಟ್ಟು ಜನಾಂಗದ ಕಲ್ಯಾಣಕ್ಕಾಗಿ ಮಮತಾ ಬ್ಯಾನರ್ಜಿ ಶ್ರಮಿಸಿಲ್ಲ: ನಡ್ಡಾ

ಪಿಟಿಐ
Published 10 ಫೆಬ್ರುವರಿ 2021, 6:55 IST
Last Updated 10 ಫೆಬ್ರುವರಿ 2021, 6:55 IST
ಜೆ.ಪಿ. ನಡ್ಡಾ
ಜೆ.ಪಿ. ನಡ್ಡಾ   

ಕಲಾಯಿಕುಂಡ(ಪಶ್ಚಿಮ ಬಂಗಾಳ): ‘ಪಶ್ಚಿಮ ಬಂಗಾಳದ ರೈತರು ಮತ್ತು ಬುಡಕಟ್ಟು ಜನಾಂಗದವರ ಕಲ್ಯಾಣಕ್ಕಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಯಾವುದೇ ಕಾರ್ಯಕ್ರಮಗಳನ್ನು ರೂಪಿಸಿಲ್ಲ’ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ದೂರಿದ್ದಾರೆ.

‘ಮಾ, ಮಾಟಿ, ಮನುಷ್‌’ (ಅಮ್ಮಾ, ಮಣ್ಣು ಮತ್ತು ಜನರು) ಹೆಸರಿನಲ್ಲಿ ಚುನಾವಣೆ ಗೆದ್ದವರು ಈಗ ‘ಸರ್ವಾಧಿಕಾರ ಮತ್ತು ಬಲವಂತದ ತಂತ್ರ’ಗಳನ್ನು ಅನುಸರಿಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಪಶ್ಚಿಮ ಮಿಡ್ನಾಪೋರ್ ಜಿಲ್ಲೆಯಲ್ಲಿ ‘ಚಾ ಚಕ್ರಾ’ಎಂಬ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ನಡ್ಡಾ,‘ ಮಮತಾ ಬ್ಯಾನರ್ಜಿ ಅವರು ರೈತರು ಮತ್ತು ಬುಡಕಟ್ಟು ಜನಾಂಗದವರಿಗಾಗಿ ಯಾವ ಕೆಲಸವನ್ನೂ ಮಾಡಿಲ್ಲ. ಒಂದು ವೇಳೆ ಬಿಜೆಪಿ ಅಧಿಕಾರಕ್ಕೆ ಬಂದರೆ, ಪಕ್ಷವು ಜನರ ಸರ್ವಾಂಗೀಣ ಪ್ರಗತಿಗಾಗಿ ಶ್ರಮಿಸುತ್ತದೆ’ ಎಂದು ಭರವಸೆ ನೀಡಿದರು

ADVERTISEMENT

‘ಮುಂದಿನ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ಅವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯಬೇಕು. ಕಮಲ ಅರಳಬೇಕು. ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ, ಬಡವರಿಗೆ ಅನ್ಯಾಯವಾಗಲು ಬಿಡುವುದಿಲ್ಲ’ ಎಂದು ಅವರು ಹೇಳಿದರು.

‘ಪ್ರಧಾನಿ ಮೋದಿ ಅವರು ಪಶ್ಚಿಮ ಬಂಗಾಳವನ್ನು ಆಧುನೀಕರಿಸಲು ಪ್ರಯತ್ನಿಸುತ್ತಿದ್ದರೆ, ಮತ್ತೊಂದೆಡೆ ಮಮತಾ ಬ್ಯಾನರ್ಜಿ ಅವರು ಎಲ್ಲಾ ಅಭಿವೃದ್ಧಿ ಕಾರ್ಯಗಳನ್ನು ಸ್ಥಗಿತಗೊಳಿಸುತ್ತಿದ್ದಾರೆ’ ಎಂದು ಅವರು ಆರೋಪಿಸಿದರು.

ಈ ಕಾರ್ಯಕ್ರಮದಲ್ಲಿ ಪಶ್ಚಿಮ ಬಂಗಾಳದ ಬಿಜೆಪಿಯ ರಾಜ್ಯ ಘಟಕದ ಅಧ್ಯಕ್ಷ ದಿಲೀಪ್‌ ಘೋಷ್‌, ಸಂಸದ ಸುಕಾಂತ ಮಜುಂದಾರ್ ಅವರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.