ಗುವಾಹಟಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ 'ನಂದಿಗ್ರಾಮ’ದಲ್ಲಿ ಸೋಲುತ್ತಾರೆ. ಹಾಗಾಗಿಯೇ ಬೇರೆಡೆ ಸ್ಪರ್ಧಿಸಲು ಮತ್ತೊಂದು ಕ್ಷೇತ್ರವನ್ನು ಹುಡುಕುತ್ತಿದ್ದಾರೆ' ಎಂದು ಅವರ ಆಪ್ತರೇ ತಿಳಿಸಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ವಾಗ್ದಾಳಿ ನಡೆಸಿದ್ದಾರೆ.
'ಇದು ಅವರ ತಂತ್ರ ಮತ್ತು ಅದರ ಬಗ್ಗೆ ಅವರಿಗೆ ಚೆನ್ನಾಗಿ ತಿಳಿದಿದೆ. ಆದರೆ, ಮಮತಾ ಮತ್ತೊಂದು ಕ್ಷೇತ್ರವನ್ನು ಹುಡುಕುತ್ತಿದ್ದಾರೆ ಎಂದು ಅವರ ಆಪ್ತರೇ ತಿಳಿಸಿದ್ದಾರೆ. ಇದು ನಿಜವೇ ಎಂಬುದನ್ನು ನಾನು ಖಾತ್ರಿಪಡಿಸಿಕೊಳ್ಳಲು ಸಾಧ್ಯವಿಲ್ಲ. ಆದರೆ, ಆಕೆ ನಂದಿಗ್ರಾಮದಲ್ಲಿ ಸೋಲನ್ನು ಅನುಭವಿಸುತ್ತಾರೆ. ಇದು ನಿಶ್ಚಿತ' ಎಂದು ನಡ್ಡಾ ತಿಳಿಸಿದ್ದಾರೆ.
ಮಮತಾ ಮತ್ತು ಕಳೆದ ವರ್ಷ ಡಿಸೆಂಬರ್‌ನಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದ ಅವರ ಮಾಜಿ ಸಹೋದ್ಯೋಗಿ ಸುವೆೇಂದು ಅಧಿಕಾರಿಯ ನಡುವೆ ನೇರ ಸ್ಪರ್ಧೆಗೆ ನಂದಿಗ್ರಾಮ ಸಾಕ್ಷಿಯಾಯಿತು. ನಂದಿಗ್ರಾಮ ಸುವೇಂದು ಅಧಿಕಾರಿಯ ಸ್ವಕ್ಷೇತ್ರವಾಗಿದ್ದರೆ, ಮಮತಾ ಸ್ವಕ್ಷೇತ್ರ ಭವಾನಿಪುರ ಬಿಟ್ಟು ನಂದಿಗ್ರಾಮದಿಂದ ಸ್ಪರ್ಧಿಸಿದ್ದರು.ನಂದಿಗ್ರಾಮವೂ ಸೇರಿ ಒಟ್ಟು 30 ಕ್ಷೇತ್ರಗಳಿಗೆ ಗುರುವಾರ ಎರಡನೇ ಹಂತದ ಮತದಾನ ನಡೆದಿತ್ತು
ಪಶ್ಚಿಮ ಬಂಗಾಳದಲ್ಲಿ ಭಾರತೀಯ ಜನತಾ ಪಕ್ಷ ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ ಬಿಜೆಪಿ ಅಧ್ಯಕ್ಷ ನಡ್ಡಾ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಸರ್ಕಾರವನ್ನು ಉಚ್ಚಾಟಿಸಲು ರಾಜ್ಯದ ಜನರು ಉತ್ಸುಕರಾಗಿದ್ದಾರೆ. ನಾವು ಪಶ್ಚಿಮ ಬಂಗಾಳದಲ್ಲಿ ಸರ್ಕಾರವನ್ನು ರಚಿಸುತ್ತಿದ್ದೇವೆ. ಪಶ್ಚಿಮ ಬಂಗಾಳದ ಮತದಾನದ ಫಲಿತಾಂಶಗಳು ಆಘಾತಕಾರಿಯಾಗಿರುತ್ತವೆ ಎಂದು ಹೇಳಿದರು.
ಮೊದಲ ಎರಡು ಹಂತಗಳ ಚುನಾವಣೆಯಲ್ಲಿ ಟಿಎಂಸಿಯನ್ನು ಅಳಿಸಿಹಾಕಲಾಗಿದೆ ಮತ್ತು ಬಿಜೆಪಿ ಅಧಿಕಾರಕ್ಕೆ ಬರುತ್ತಿದೆ. ನಂದಿಗ್ರಾಮದಲ್ಲಿ ಸ್ಪಷ್ಟವಾಗಿ ಬಿಜೆಪಿ ಗೆಲ್ಲುತ್ತದೆ ಎಂದು ನಡ್ಡಾ ಹೇಳಿದರು.
ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆಯ ಮೊದಲ ಎರಡು ಹಂತಗಳ ಚುನಾವಣೆ ನಡೆದಿದ್ದು, ಮೂರನೇ ಹಂತ ಏಪ್ರಿಲ್ 6ಕ್ಕೆ ನಡೆಯಲಿದೆ. ಮತ ಎಣಿಕೆ ಮೇ 2 ರಂದು ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.