ನಂದಿಗ್ರಾಮ: ‘ನಂದಿಗ್ರಾಮ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆಗೆ ಸಂಬಂಧಿಸಿದ ಅನೇಕ ದೂರುಗಳನ್ನು ಸಲ್ಲಿಸಿದ್ದರೂ, ಚುನಾವಣಾ ಆಯೋಗ ಈವರೆಗೆ ಯಾವ ದೂರಿನ ಬಗ್ಗೆಯೂ ಕ್ರಮ ಕೈಗೊಂಡಿಲ್ಲ. ಗೃಹಸಚಿವ ಅಮಿತ್ ಶಾ ಸೂಚನೆಯ ಮೇರೆಗೆ ಈ ಆಯೋಗ ಕಾರ್ಯನಿರ್ವಹಿಸುತ್ತಿದೆ‘ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದರು.
ಗುರುವಾರ ನಂದಿಗ್ರಾಮದ ಬೋಯಲ್ ಮತಗಟ್ಟೆ ಸಂಖ್ಯೆ 7ರ ಸಮೀಪ ಗಾಲಿಕುರ್ಚಿಯಲ್ಲೇ ಕುಳಿತು ಕೇಂದ್ರ ಚುನಾವಣಾ ಆಯೋಗದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ‘ನಾವು ಬೆಳಿಗ್ಗೆಯಿಂದ 63 ದೂರುಗಳನ್ನು ದಾಖಲಿಸಿದ್ದೇವೆ. ಆದರೆ ಆಯೋಗ ಇಲ್ಲಿವರೆಗೂ ಯಾವುದೇ ದೂರಿನ ಬಗ್ಗೆಯೂ ಕ್ರಮ ಕೈಗೊಂಡಿಲ್ಲ. ಇದು ಸರಿಯಾದ ಕ್ರಮವಲ್ಲ. ಈಗ ನಾವು ನ್ಯಾಯಾಲಯದ ಮೊರೆ ಹೋಗುತ್ತವೆ‘ ಎಂದರು.
‘ಮತದಾರರನ್ನು ಬೆದರಿಸಲು ನಮ್ಮ ಪ್ರತಿಸ್ಪರ್ಧಿಗಳು ಬೇರೆ ರಾಜ್ಯಗಳಿಂದ ಗೂಂಡಾಗಳನ್ನು ಕರೆತಂದಿದ್ದಾರೆ‘ ಎಂದು ಮಮತಾ ಆರೋಪಿಸಿದರು.
ಮತ್ತೊಂದೆಡೆ, ಮಮತಾ ಬ್ಯಾನರ್ಜಿ ಭೇಟಿ ನೀಡಿದ ಮೇಲೆ ಬಿಜೆಪಿ ಬೆಂಬಲಿಗರು ಸಹ ಅದೇ ಮತಗಟ್ಟೆಗೆ ಸಮೀಪಕ್ಕೆ ಬಂದು ‘ಜೈ ಶ್ರೀರಾಮ್‘ ಘೋಷಣೆಗಳನ್ನು ಕೂಗಿದರು. ಪರಿಸ್ಥಿತಿ ನಿಯಂತ್ರಿಸಲು ಸ್ಥಳಕ್ಕೆ ಹೆಚ್ಚುವರಿ ಪೊಲೀಸರನ್ನು ಕರೆಸಬೇಕಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.