ADVERTISEMENT

ಬಿಜೆಪಿಯೇತರ ಮುಖಂಡರಿಗೆ ಮಮತಾ ಬ್ಯಾನರ್ಜಿ ಪತ್ರ

ಸಮಾನ ಮನಸ್ಕ ಒಕ್ಕೂಟ ಸ್ಥಾಪನೆ ಪ್ರಯತ್ನ:

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2022, 19:06 IST
Last Updated 29 ಮಾರ್ಚ್ 2022, 19:06 IST
ಮಮತಾ ಬ್ಯಾನರ್ಜಿ
ಮಮತಾ ಬ್ಯಾನರ್ಜಿ    

ನವದೆಹಲಿ: ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವ ನಿಟ್ಟಿನಲ್ಲಿ ಸಮಾನ ಮನಸ್ಕ ಒಕ್ಕೂಟ ಸ್ಥಾಪನೆಯ ಪ್ರಯತ್ನ ಮುಂದುವರಿಸಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಬಿಜೆಪಿಯೇತರ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಆಯಾ ಪಕ್ಷಗಳ ಮುಖಂಡರಿಗೆ ಪತ್ರ ಬರೆದು ಬೆಂಬಲ ಕೋರಿದ್ದಾರೆ.

ಬಿಜೆಪಿಯ ದಮನಕಾರಿ ಶಕ್ತಿಯ ವಿರುದ್ಧ ಹೋರಾಡಲು ಪ್ರಗತಿಪರ ವಿಚಾರಧಾರೆಯ ಪಕ್ಷಗಳು ಒಗ್ಗೂಡಬೇಕಿರುವುದು ಸದ್ಯದ ಅಗತ್ಯವಾಗಿದೆ ಎಂದು ಅವರು ಪತ್ರದಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ಬಿಜೆಪಿ ವಿರೋಧಿ ಮನಸ್ಥಿತಿಯ ಎಲ್ಲರ ಅನುಕೂಲಕ್ಕೆ ತಕ್ಕ ಸ್ಥಳದಲ್ಲಿ ಸಭೆಯೊಂದನ್ನು ಆಯೋಜಿಸಲೂ ಅವರು ನಿರ್ಧರಿಸಿದ್ದು, ಸಂಸತ್‌ನ ಬಜೆಟ್ ಅಧಿವೇಶನ ಪೂರ್ಣಗೊಂಡ ಬಳಿಕವೇ ಸಭೆ ನಡೆಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ತಮ್ಮ ರಾಜಕೀಯ ವಿರೋಧಿಗಳನ್ನು ಮೂಲೆಗುಂಪು ಮಾಡಲು ಜಾರಿ ನಿರ್ದೇಶನಾಲಯ (ಇಡಿ), ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ) ಮತ್ತು ಆದಾಯ ತೆರಿಗೆ ಇಲಾಖೆಗಳನ್ನು ಪ್ರತೀಕಾರದ ರೂಪದಲ್ಲಿ ಬಳಸಲಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿರುವ ಮಮತಾ, ಪ್ರಜಾಪ್ರಭುತ್ವದ ಮೇಲೆ ನೇರ ದಾಳಿ ನಡೆಸಲಾಗಿದೆ ಎಂದು ಪತ್ರದಲ್ಲಿ ಪ್ರತಿಪಾದಿಸಿದ್ದಾರೆ.

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಸಿಬಿಐ ಮತ್ತು ಇ.ಡಿ.ಯ ನಿರ್ದೇಶಕರ ಅಧಿಕಾರಾವಧಿ ವಿಸ್ತರಿಸಲು ಸುಪ್ರೀಂ ಕೋರ್ಟ್‌ನ ಆದೇಶ ಉಲ್ಲಂಘಿಸಿ ಮಸೂದೆ ಅಂಗೀಕರಿಸಿರುವುದು ಗಮನಾರ್ಹ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

‘ಚುನಾವಣೆ ವೇಳೆ ಪ್ರತಿಪಕ್ಷಗಳ ನಾಯಕರನ್ನು ಹತ್ತಿಕ್ಕಲು ಈ ಕೇಂದ್ರೀಯ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿರುವ ಬಿಜೆಪಿಯ ದುರುದ್ದೇಶವನ್ನು, ದೇಶದ ಒಕ್ಕೂಟ ವ್ಯವಸ್ಥೆಯ ಮೇಲೂ ದಾಳಿ ಮಾಡುತ್ತಿರುವ ಯತ್ನವನ್ನು ನಾವೆಲ್ಲರೂ ವಿರೋಧಿಸಬೇಕು. ವಿರೋಧಿ ಧ್ವನಿಗಳನ್ನು ಹತ್ತಿಕ್ಕುವ ನೀತಿಗೆ ವಿರೋಧ ವ್ಯಕ್ತಪಡಿಸುವುದು ನಮ್ಮ ಸಾಂವಿಧಾನಿಕ ಜವಾಬ್ದಾರಿಯೂ ಆಗಿದೆ’ ಎಂದು ಅವರು ಪತ್ರದಲ್ಲಿ ಒತ್ತಿಹೇಳಿದ್ದಾರೆ.

‘ಬಿಜೆಪಿಯ ಸೇಡಿನ ರಾಜಕಾರಣವನ್ನು ಸಹಿಸಲಾಗದು. ಅದೇರೀತಿ, ಬಿಜೆಪಿ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳು ನಿರಂತರವಾಗಿ ನ್ಯಾಯಾಂಗದ ಆದೇಶಗಳ ಉಲ್ಲಂಘನೆಗೆ ಮುಂದಾಗಿರುವುದೂ ನೋವು ತಂದಿದೆ’ ಎಂದಿರುವ ಅವರು, ‘ವಿರೋಧ ಪಕ್ಷಗಳೆಲ್ಲವೂ ಆಡಳಿತದಲ್ಲಿ ಪಾರದರ್ಶಕತೆ ತರುವುದರ ಪರ ಇವೆ ಎಂಬುದನ್ನು ಸಾಬೀತುಪಡಿಸಬೇಕಿದೆ’ ಎಂದು ತಿಳಿಸಿದ್ದಾರೆ.

‘ಪ್ರತಿಪಕ್ಷಗಳ ಒಂದುಗೂಡುವಿಕೆ ಕುರಿತು ಕಾಂಗ್ರೆಸ್ ಆಸಕ್ತಿ ಹೊಂದಿಲ್ಲ. ಇದರಿಂದಾಗಿ ಆ ಪಕ್ಷ ವಿಶ್ವಾಸಾರ್ಹತೆ ಕಳೆದುಕೊಳ್ಳುತ್ತಿದೆ. ಮೇಲಾಗಿ ನಾವು ಅವರನ್ನು (ಕಾಂಗ್ರೆಸ್‌) ಅವಲಂಬಿಸಿಯೂ ಇಲ್ಲ’ ಎಂದು ಐದು ರಾಜ್ಯಗಳ ಚುನಾವಣೆಯ ಫಲಿತಾಂಶದ ಬಳಿಕೆ ಬಹಿರಂಗ ಹೇಳಿಕೆ ನೀಡಿದ್ದ ಮಮತಾ, ಇದೀಗ ವಿಪಕ್ಷ ನಾಯಕರಿಗೆ ಪತ್ರ ಬರೆದಿರುವುದು ವಿಶೇಷವಾಗಿದೆ.

ಮಮತಾ ಅವರ ಆಹ್ವಾನದ ಕುರಿತು ಪಕ್ಷದ ಇತರ ಮುಖಂಡರೊಂದಿಗೆ ಚರ್ಚಿಸುವುದಾಗಿ ರಾಷ್ಟ್ರೀಯ ಕಾಂಗ್ರೆಸ್‌ ಪಕ್ಷದ (ಎನ್‌ಸಿಪಿ) ಮುಖ್ಯಸ್ಥ ಶರದ್ ಪವಾರ್ ತಿಳಿಸಿದ್ದು, ಈ ಸಂಬಂಧ ಆಯೋಜಿಸಲಾಗುವ ಸಭೆಯ ಸ್ಥಳ ಮತ್ತು ದಿನಾಂಕದ ಕುರಿತು ಇನ್ನೂ ನಿರ್ಧಾರ ಕೈಗೊಳ್ಳಲಾಗಿಲ್ಲ. ಸಭೆಯು ದೆಹಲಿ ಅಥವಾ ಮುಂಬೈನಲ್ಲಿ ನಡೆಯುವ ಸಾಧ್ಯತೆ ಇದೆ ಎಂಬ ಸುಳಿವು ನೀಡಿದ್ದಾಗಿ ತಿಳಿದುಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.