ಕೋಲ್ಕತ್ತ: ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷವನ್ನು ತೊರೆದ ನಾಯಕನನ್ನು ಒಲೈಕೆ ಮಾಡಿ ಮತ್ತೆ ಪಕ್ಷಕ್ಕೆ ಸೇರಿಸಲು ಮತ್ತು ನಂದಿಗ್ರಾಮ ವಿಧಾನಸಭಾ ಚುನಾವಣೆಯಲ್ಲಿ ತಮ್ಮನ್ನು ಗೆಲ್ಲಿಸುವಂತೆ ಸಹಾಯ ಯಾಚಿಸುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರದ್ದು ಎನ್ನಲಾದ ಆಡಿಯೊ ಕ್ಲಿಪ್ ಶನಿವಾರ ಸೋರಿಕೆಯಾಗಿದ್ದು, ಚರ್ಚೆಗೆ ಗ್ರಾಸವಾಗಿದೆ.
ಆಡಿಯೊ ಕ್ಲಿಪ್‌ನಲ್ಲಿ ತಮಲುಕ್ ಆಡಳಿತ ಪ್ರದೇಶದ ಬಿಜೆಪಿ ಉಪಾಧ್ಯಕ್ಷರಾದ ಪ್ರಲಯ್ ಪಾಲ್ ಅವರಲ್ಲಿ ಸಹಾಯ ಮಾಡುವಂತೆ ವಿನಂತಿಸುತ್ತಾರೆ. ಅಲ್ಲದೆ ಅವರಿಗೆ ಯಾವುದೇ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳಲಾಗುವುದು ಎಂಬ ಭರವಸೆಯನ್ನು ನೀಡುತ್ತಾರೆ.
ಆದರೆ ಈ ವಿಡಿಯೊ ಕ್ಲಿಪ್‌ನ ಸತ್ಯಾಸತ್ಯೆಯು ಬಹಿರಂಗವಾಗಿಲ್ಲ.
ಪಶ್ಚಿಮ ಬಂಗಾಳದಲ್ಲಿ ಮಾರ್ಚ್ 27ರಂದು ಶನಿವಾರದಂದು ಮೊದಲ ಹಂತದಲ್ಲಿ ಐದು ಜಿಲ್ಲೆಗಳಲ್ಲಿ 30 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆದಿತ್ತು. ಈ ನಡುವೆ ರಾಜಕೀಯ ಬೆಳವಣಿಗೆಗಳು ನಡೆದಿರುವುದು ಬಹಿರಂಗವಾಗಿದೆ.
'ನೀವು ಯುವಕ, ತುಂಬಾ ಶ್ರಮ ವಹಿಸುತ್ತಿದ್ದೀರಿ ಎಂಬುದು ನನಗೆ ತಿಳಿದಿದೆ. ನಂದಿಗ್ರಾಮದಲ್ಲಿ ಈ ಬಾರಿ ನಮಗೆ ಸ್ವಲ್ಪ ಸಹಾಯ ಮಾಡಿ. ನಿಮಗೆ ಯಾವುದೇ ತೊಂದರೆ ಎದುರಾಗದು' ಎಂದು ಮಮತಾ ಅವರದ್ದು ಎನ್ನಲಾದ ಆಡಿಯೊ ಕ್ಲಿಪ್‌ನಲ್ಲಿ ಉಲ್ಲೇಖಿಸಲಾಗಿದೆ.
ಹಾಗಿದ್ದರೂ ಟಿಎಂಸಿ ತೊರೆದು ಬಿಜೆಪಿ ಪಕ್ಷವನ್ನು ಸೇರ್ಪಡೆಗೊಂಡಿರುವ ಪ್ರಲಯ್ ಪಾಲ್, ಪ್ರಸ್ತಾಪವನ್ನು ನಿರಾಕರಿಸಿದ್ದಾರೆ ಎನ್ನಲಾಗಿದೆ.
'ದೀದಿ, ನೀವು ಏನು ಯೋಚನೆ ಮಾಡಿದರೂ ಸರಿ, ನಾನು ಪಕ್ಷವನ್ನು (ಟಿಎಂಸಿ) ತೊರೆದಿದ್ದೇನೆ. ಈಗ ಸೇವೆ ಸಲ್ಲಿಸುತ್ತಿರುವ ಪಕ್ಷಕ್ಕೆ (ಬಿಜೆಪಿ) ದ್ರೋಹ ಬಗೆಯಲು ಸಾಧ್ಯವಿಲ್ಲ. ನಾನು ಪಕ್ಷಕ್ಕಾಗಿ ಕೆಲಸ ಮಾಡುವಾಗ ಅದನ್ನು ಸಂಪೂರ್ಣ ನಿಷ್ಠೆಯಿಂದ ಮಾಡುತ್ತೇನೆ. ನನ್ನ ಮತ್ತು ನನ್ನ ಕುಟುಂಬದ ಪ್ರಾಮಾಣಿಕತೆ ಪ್ರಶ್ನಿಸಲುಯಾರಿಂದಲೂ ಸಾಧ್ಯವಿಲ್ಲ' ಎಂದು ಹೇಳಲಾಗಿದೆ.
ನಂದಿಗ್ರಾಮದಲ್ಲಿ ಬಿಜೆಪಿಯಿಂದ ಸ್ಪರ್ಧಿಸುವ ಸುವೇಂದು ಅಧಿಕಾರಿ ನಿಮಗೆ ಎಲ್ಲವೂ ಆಗಿದ್ದಾರೆಯೇ? ಎಂಬುದನ್ನು ಮಮತಾ ಪ್ರಶ್ನೆ ಮಾಡಿರುವುದಾಗಿಹೇಳಲಾಗಿದೆ.
ಟಿಎಂಸಿಗೆ ಮರು ಸೇರ್ಪಡೆಗೊಳ್ಳುವ ಪ್ರಸ್ತಾಪವನ್ನು ಪಾಲ್ ನಿರಾಕರಿಸುವುದರೊಂದಿಗೆ ಆಡಿಯೊ ಕ್ಲಿಪ್ ಕೊನೆಗೊಳ್ಳುತ್ತದೆ. ತಮ್ಮಂತಹ ಪಕ್ಷದ ಮಾಜಿ ಕಾರ್ಯಕರ್ತನನ್ನು ಕರೆ ಮಾಡಿದ್ದಕ್ಕಾಗಿ ಮಮತಾ ಅವರಿಗೆ ಧನ್ಯವಾದಗಳನ್ನು ಸಲ್ಲಿಸುತ್ತಾರೆ. ಬಳಿಕ ಸುದ್ದಿಗಾರರಿಗೆ ವಿವರ ನೀಡಿರುವ ಪಾಲ್, ಮಮತಾ ಪ್ರಸ್ತಾಪವನ್ನು ನಿರಾಕರಿಸಿರುವುದಾಗಿ ಹೇಳಿದ್ದಾರೆ.
ಏತನ್ಮಧ್ಯೆ ಆಡಿಯೊ ಕ್ಲಿಪ್‌ನ ಸತ್ಯಾಸತ್ಯತೆಯನ್ನು ಪ್ರಶ್ನಿಸಿರುವ ಟಿಎಂಸಿ ವಕ್ತಾರ ಕುನಾ ಘೋಷ್, 'ಕ್ಲಿಪ್ ಪರಿಶೀಲಿಸದ ಕಾರಣ ನಿಜವೋ ಅಲ್ಲವೋ ಎಂಬುದು ತಿಳಿದಿಲ್ಲ. ಆದರೂ ರಾಜಕಾರಣಿ ಪಕ್ಷದ ಮಾಜಿ ಮುಖಂಡರಿಗೆ ಕರೆ ಮಾಡುವುದರಲ್ಲಿ ಯಾವುದೇ ತಪ್ಪಿಲ್ಲ' ಎಂದು ಹೇಳಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯ್‌ವರ್ಗೀಯಾ, 'ಸೋಲನ್ನು ಒಪ್ಪಿಕೊಂಡವರು ಮಾತ್ರ ಮಮತಾ ದೀದಿ ರೀತಿಯಲ್ಲಿ ಮಾತನಾಡಬಲ್ಲರು' ಎಂದು ಟೀಕಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.