ನವದೆಹಲಿ: ನಗರದ ವಸಂತ್ ಕುಂಜ್ ಪ್ರದೇಶದ ಬಾಡಿಗೆ ಮನೆಯೊಂದರಲ್ಲಿ 46 ವರ್ಷದ ವ್ಯಕ್ತಿ ಹಾಗೂ ಆತನ ನಾಲ್ವರು ಪುತ್ರಿಯರ ಮೃತದೇಹಗಳು ಅನುಮಾನಾಸ್ಪಾದವಾಗಿ ಪತ್ತೆಯಾಗಿವೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ಪತ್ತೆಯಾಗಿರುವ ಮೃತದೇಹಗಳ ಮೇಲೆ ಯಾವುದೇ ಗಾಯಗಳ ಗುರುತುಗಳು ಕಂಡು ಬಂದಿಲ್ಲ. ಆದರೆ, ಸೆಲ್ಫೋಸ್ ವಿಷದ ಪ್ಯಾಕೆಟ್, ಐದು ಗ್ಲಾಸ್‌ಗಳು ಪತ್ತೆಯಾಗಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ವಸಂತ್ ಕುಂಜ್‌ನ ಮನೆಯೊಂದರಲ್ಲಿ ದುರ್ವಸಾನೆ ಬರುತ್ತಿರುವುದನ್ನು ಸ್ಥಳೀಯರು ಗಮನಿಸಿ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಮನೆಯನ್ನು ಪರಿಶೀಲಿಸಿದಾಗ ಒಂದು ಕೋಣೆಯಲ್ಲಿ 46 ವರ್ಷದ ವ್ಯಕ್ತಿ ಹಾಗೂ ಮತ್ತೊಂದು ಕೋಣೆಯಲ್ಲಿ ನಾಲ್ವರು ಪುತ್ರಿಯರ ಮೃತದೇಹಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮೃತರನ್ನು ಹೀರಾಲಾಲ್ ಶರ್ಮಾ(46), ನೀತು (26), ನಿಕ್ಕಿ (24), ನಿರು (23) ಮತ್ತು ನಿಧಿ (20) ಎಂದು ಗುರುತಿಸಲಾಗಿದೆ.
ಮೃತಪಟ್ಟಿರುವ ನಾಲ್ವರು ಯುವತಿಯರು ವಿಶೇಷ ಚೇತನರು ಎಂದು ನೆರೆಹೊರೆಯವರು ತಿಳಿಸಿದ್ದಾರೆ. ಹೀರಾಲಾಲ್ 28 ವರ್ಷಗಳಿಂದ ಬಡಗಿಯಾಗಿ ಕೆಲಸ ಮಾಡುತ್ತಿದ್ದರು. ಕಳೆದ ವರ್ಷ ಆತನ ಹೆಂಡತಿ ಕ್ಯಾನ್ಸರ್‌ನಿಂದ ಮೃತಪಟ್ಟಿದ್ದರು ಎಂದು ಹತ್ತಿರದ ಸಂಬಂಧಿಯೊಬ್ಬರು ಪೊಲೀಸರಿಗೆ ಮಾಹಿತಿ ನೋಡಿದ್ದಾರೆ.
ಈ ಸಂಬಂಧ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.